ಪ್ರಮುಖ ಸುದ್ದಿ

ಕೊಡಗಿನ ವಿವಿಧೆಡೆ ಆಲಿಕಲ್ಲು ಮಳೆ : ಸಂಪಾಜೆ ರಸ್ತೆಗುರುಳಿದ ಮರ

ರಾಜ್ಯ( ಮಡಿಕೇರಿ) ಏ.6 :- ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಕೊಡಗು ಜಿಲ್ಲೆಯ ವಿವಿಧ ಭಾಗಗಳಲ್ಲಿ ಭಾನುವಾರ ಮಧ್ಯಾಹ್ನ ಆಲಿಕಲ್ಲು ಸಹಿತ ಉತ್ತಮ ಮಳೆಯಾಗಿದೆ.
ಗುಡುಗು, ಸಿಡಿಲಿನೊಂದಿಗೆ ಗಾಳಿ ಮಳೆಯಾಗಿದ್ದು, ಜಿಲ್ಲಾ ಕೇಂದ್ರ ಸ್ಥಾನ ಮಡಿಕೇರಿ ಮತ್ತು ಸೋಮವಾರಪೇಟೆ ತಾಲ್ಲೂಕಿನ ವಿವಿಧೆಡೆ ಮಳೆ ಸುರಿದಿದೆ. ಸುಡುಬಿಸಿಲ ಬೇಗೆಗೆ ತಂಪೆರೆದ ವಾತಾವರಣ ಮೂಡಿದ್ದು, ಕರ್ತವ್ಯನಿರತ ಸಂಚಾರಿ ಪೊಲೀಸರು ಮತ್ತು ಗೃಹ ರಕ್ಷಕ ದಳದ ಸಿಬ್ಬಂದಿಗಳು ದಿಢೀರ್ ಮಳೆಯಿಂದ ರಕ್ಷಣೆ ಪಡೆಯಲು ಮುಚ್ಚಿದ್ದ ಅಂಗಡಿ ಮುಂಗಟ್ಟುಗಳ ಆಶ್ರಯ ಪಡೆದರು.
ಮಡಿಕೇರಿ ನಗರದಲ್ಲಿ ಹೆಚ್ಚು ಮಳೆಯಾಗಿದ್ದು, ಗಾಳಿಬೀಡು, ವಣಚಲು, ಸಂಪಾಜೆ, ಕಲ್ಲುಗುಂಡಿ, ಮಕ್ಕಂದೂರು ವ್ಯಾಪ್ತಿಯಲ್ಲಿ ಆಲಿಕಲ್ಲುಗಳು ಬಿದ್ದಿವೆ. ಈ ವಾರ ಮಳೆ ಸುರಿಯುವ ಬಗ್ಗೆ ಗೋಣಿಕೊಪ್ಪದ ಕೃಷಿ ವಿಜ್ಞಾನ ಕೇಂದ್ರದ ಹವಾಮಾನ ವಿಭಾಗದ ತಜ್ಞರು ಮಾಹಿತಿಯನ್ನೂ ನೀಡಿದ್ದರು.
ರಸ್ತೆಗೆ ಬಿದ್ದ ಮರ
ಕಾಟಕೇರಿ, ಮದೆನಾಡು, ಜೋಡುಪಾಲ ವ್ಯಾಪ್ತಿಯಲ್ಲಿ ಗಾಳಿ ಸಹಿತ ಮಳೆ ಸುರಿದ ಪರಿಣಾಮ ಜೋಡುಪಾಲ ಮುಖ್ಯ ರಸ್ತೆಯಲ್ಲಿ ಮರ ಬಿದ್ದು ರಸ್ತೆ ಸಂಪರ್ಕಕ್ಕೆ ಕೆಲಕಾಲ ಅಡ್ಡಿಯಾಯಿತು. ಮರ ವಿದ್ಯುತ್ ಕಂಬದ ಮೇಲೆ ಬಿದ್ದು, ವಿದ್ಯುತ್ ವ್ಯತ್ಯಯ ಉಂಟಾದ ಹಿನ್ನೆಲೆ ಚೆಸ್ಕಾಂ ಸಿಬ್ಬಂದಿಗಳು ಹಾಗೂ ಸ್ಥಳೀಯ ಗ್ರಾಮಸ್ಥರು ರಸ್ತೆಗೆ ಅಡ್ಡಲಾಗಿ ಬಿದ್ದ ಮರವನ್ನು ತೆರವು ಗೊಳಿಸಿದರು. ಹೆದ್ದಾರಿ ಉದ್ದಕ್ಕೂ ಮರದ ಸಣ್ಣ ಕೊಂಬೆಗಳು, ಒಣಗಿದ ಎಲೆಗಳು ಬಿದ್ದದ್ದು ಕಂಡು ಬಂತು.
ಲಾಕ್ ಡೌನ್ ಆದೇಶ ಇರುವುದರಿಂದ ಮಡಿಕೇರಿ-ಸುಳ್ಯ ಸಂಪರ್ಕಿಸುವ ರಸ್ತೆಯನ್ನು ಸಂಪಾಜೆ ಚೆಕ್ ಪೋಸ್ಟ್ ಬಳಿ ಬಂದ್ ಮಾಡಿದ್ದು ಕೇವಲ ತುರ್ತು ಸೇವೆಗಳಿಗೆ ಮಾತ್ರವೇ ಅವಕಾಶ ನೀಡಲಾಗುತ್ತಿದೆ. ಈ ರಸ್ತೆಯಲ್ಲಿ ಆಗಮಿಸಿದ್ದ ಭಾರತ್ ಪೆಟ್ರೋಲಿಯಂ ಕಂಪೆನಿಯ ಅಡುಗೆ ಅನಿಲ ತುಂಬಿದ ಲಾರಿ ಮರವನ್ನು ತೆರವು ಮಾಡಿದ ಬಳಿಕ ಲಾರಿ ಮಡಿಕೇರಿ ಮಾರ್ಗವಾಗಿ ಮೈಸೂರು ಕಡೆ ಪ್ರಯಾಣ ಬೆಳೆಸಿತು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: