ಮೈಸೂರು

ಜ್ಯುಬಿಲಿಯಂಟ್  ಕಾರ್ಮಿಕರಿಗೆ ಕೊರೋನಾ ಸೋಂಕು ಹರಡುವಿಕೆ ಪ್ರಕರಣ : ಉನ್ನತ ಮಟ್ಟದ ತನಿಖೆ ನಡೆಸಿ ವರದಿ ಬರುವವರೆಗೂ ಕಾರ್ಖಾನೆ ಮರು ಆರಂಭಕ್ಕೆ ಅವಕಾಶ ನೀಡುವುದಿಲ್ಲ ; ಹರ್ಷವರ್ಧನ್

ಮೈಸೂರು,ಏ.6:- ನಂಜನಗೂಡು ಪಟ್ಟಣದ ಕೈಗಾರಿಕಾ ಪ್ರದೇಶದಲ್ಲಿರುವ ಜ್ಯುಬಿಲಿಯಂಟ್  ಜೆನರಿಕ್ಸ್ ಕಾರ್ಖಾನೆಯ ಕಾರ್ಮಿಕರಿಗೆ ಕೊರೋನಾ ಸೋಂಕು ಹರಡುವಿಕೆಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆ ನಡೆಸಿ ವರದಿ ಬರುವವರೆಗೂ ಕಾರ್ಖಾನೆ ಮರು ಆರಂಭಕ್ಕೆ ಅವಕಾಶ ನೀಡುವುದಿಲ್ಲ ಎಂದು ಶಾಸಕ ಹರ್ಷವರ್ಧನ್ ತಿಳಿಸಿದರು.

ಅವರು ನಿನ್ನೆ ನಂಜನಗೂಡು ಪಟ್ಟಣದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ ನಂಜನಗೂಡಿನಲ್ಲಿ ಬೆಳಕಿಗೆ ಬಂದಿರುವ ಕೊರೋನಾ ಪ್ರಕರಣ ಮೂಲವನ್ನು ಪತ್ತೆ ಹಚ್ಚಲು ಇದುವರೆಗೂ ಸಾಧ್ಯವಾಗಿಲ್ಲ. ಕಾರ್ಖಾನೆಯವರು ವಾಸ್ತವ ಸಂಗತಿಯನ್ನು ಮುಚ್ಚಿಟ್ಟಿದ್ದಾರೆ. ಜ್ಯುಬಿಲಿಯೆಂಟ್ ಆಡಳಿತ ಮಂಡಳಿಯ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನದಿಂದ ಸ್ಥಳೀಯ ನಾಗರಿಕರು ತೊಂದರೆ ಅನುಭವಿಸುವಂತಾಗಿದೆ ಎಂದರು.

ಚೀನಾದಲ್ಲಿ ಕೊರೋನಾ ಹಾವಳಿ ವ್ಯಾಪಕವಾಗಿದ್ದ ವೇಳೆ ವುಹಾನ್ ನಿಂದ ಜ್ಯುಬಿಲಿಯೆಂಟ್ ಕಾರ್ಖಾನೆಗೆ ಔಷಧ ತಯಾರಿಕೆಗೆ ಅಗತ್ಯವಾದ ಕಚ್ಚಾ ಪದಾರ್ಥಗಳನ್ನು ಕಂಟೈನರ್ ಮೂಲಕ ಆಮದು ಮಾಡಿಕೊಂಡಿದ್ದು ಇದರಿಂದ ಕಾರ್ಖಾನೆ ಕಾರ್ಮಿಕರಿಗೆ ಸೋಂಕು ಹರಡಿದೆ ಎಂಬ ಅಂಶಗಳು ಬೆಳಕಿಗೆ ಬಂದಿದೆ ಎಂದರು.

ಸೋಂಕಿತ ವ್ಯಕ್ತಿ ಸಹ ಜಿಲ್ಲಾಡಳಿತಕ್ಕೆ ವಾಸ್ತವ ಸಂಗತಿ ತಿಳಿಸಿದೇ ಅಸಹಕಾರ ನೀಡಿದ್ದು, ಕಾರ್ಖಾನೆ ಆಡಳಿ ಮಂಡಳಿ, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯ ಜನರ ಆತ್ಮವಿಶ್ವಾಸ ಹೆಚ್ಚಿಸುವ ಬದಲು ನಾಪತ್ತೆಯಾಗಿದ್ದರು. ಹೀಗಾಗಿ ಎಲ್ಲ ಅಂಶಗಳನ್ನು ಪರಿಗಣಿಸಿ ಹಿರಿಯ ಐಎಎಸ್ ಅಧಿಕಾರಿ ಹರ್ಷಗುಪ್ತಾ ಅವರ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಮನವಿ ಮಾಡಲಾಗಿದ್ದು, ತನಿಖೆ ವರದಿ ಸಲ್ಲಿಸುವವರೆಗೂ ಕಾರ್ಖಾನೆ ಮರು ಆರಂಭಕ್ಕೆ ಅವಕಾಶ ನೀಡದಂತೆ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗಿದೆ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: