ಮೈಸೂರು

ಮೊಮ್ಮಗಳಿಂದಲೇ ಅಜ್ಜಿ-ತಾತನ ಮೇಲೆ ಹಲ್ಲೆ : ಮನೆಗೆ ಬೆಂಕಿ ಹಚ್ಚಿ ಕೊಲ್ಲುವ ಹುನ್ನಾರ

ಮೊಮ್ಮಗಳೇ ತಾತ ಅಜ್ಜಿಯ ಮೇಲೆ  ಹಲ್ಲೆ ನಡಿಸಿದ್ದಲ್ಲದೇ, ಮನೆಗೆ  ಬೆಂಕಿ ಹಚ್ಚಿ ಅವರನ್ನು ಸಾಯಿಸುವ ಹುನ್ನಾರ ನಡೆಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಹೆಬ್ಬಾಳದಲ್ಲಿರುವ ಲಕ್ಷ್ಮಿಕಾಂತ ನಗರದ ಮೊದಲನೆ ಹಂತದ ಎಚ್.ಐ.ಜಿ #486ರಲ್ಲಿ ವಾಸಿಸುತ್ತಿರುವ 85ರ ವಯೋಮನಾದ ಸೋಮಸುಂದರ್ ಹಾಗೂ ಲೀಲಾವತಿ ದಂಪತಿಗಳ ಮೊಮ್ಮಗಳು ಪ್ರಿಯದರ್ಶಿನಿ (22)  ಎಂಬವಳೇ ಈ ದುಷ್ಕೃತ್ಯ ನಡೆಸಿದವಳಾಗಿದ್ದಾಳೆ. ಗುರುವಾರ ಮಧ್ಯಾಹ್ನದ ವೇಳೆ ಮನೆಯ ಮುಂದುಗಡೆ ಇದ್ದ  ಉಯ್ಯಾಲೆಗೆ ಬೆಂಕಿ ಹಚ್ಚಿ ಅಕ್ಕಪಕ್ಕದವರಿಗೆ ವಿಷಯ ಮುಟ್ಟಿಸಿದ್ದಾಳೆ. ಬೆಂಕಿ ಮನೆಯನ್ನೆಲ್ಲ ಆವರಿಸುವುದಕ್ಕೆ ಮೊದಲೇ ಅಕ್ಕಪಕ್ಕದವರು ಪೊಲೀಸರಿಗೆ ಹಾಗೂ ಅಗ್ನಿಶಾಮಕದಳದವರಿಗೆ ಮಾಹಿತಿ ರವಾನಿಸಿದ್ದಾರೆ ಎನ್ನಲಾಗಿದೆ. ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಹೆಬ್ಬಾಳ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳು ಬೆಂಕಿಯನ್ನು ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರತಿದಿನವೂ ಈಕೆ ಅಜ್ಜಿ-ತಾತರಿಗೆ ಹೊಡೆದು ಬಡಿದು ಮಾಡುತ್ತಿದ್ದು, ಇಂದು ನಿಮ್ಮನ್ನು ಸಾಯಿಸುತ್ತೇನೆ ಎಂದು ಹೇಳಿ ಬೆಂಕಿ ಹಚ್ಚಿದ್ದಾಳೆ ಎನ್ನಲಾಗಿದೆ. ಆಕೆಯ  ತಂದೆ ವಿಚ್ಛೇದನ ಪಡೆದ ಹಿನ್ನೆಲೆಯಲ್ಲಿ  ಎರಡು ವರ್ಷದ ಹಿಂದೆ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.  ಪಿಯುಸಿಯಲ್ಲಿ ಅನುತ್ತೀರ್ಣಳಾದ ಈಕೆ  ಬಿಎಲ್ ನಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತಿ ಜೀವನ ನಡೆಸುತ್ತಿದ್ದ  ಅಜ್ಜಿ-ತಾತನ ಜೊತೆ ವಾಸವಿದ್ದಳು ಎನ್ನಲಾಗಿದೆ.   ಲಂಗು-ಲಗಾಮಿಲ್ಲದೇ ಬೆಳೆದಿದ್ದ ಈಕೆಗೆ ಪುಂಡುಪೋಕರಿಗಳ ಸಹವಾಸವೇ ಹೆಚ್ಚಿತ್ತು ಎಂದು ತಿಳಿದುಬಂದಿದೆ.

ಈಕೆ ಪ್ರತಿದಿನ ಅರೆಬೆತ್ತಲೆಯಾಗಿ ತಿರುಗುತ್ತಾಳೆ. ಸಂಜೆಯ ವೇಳೆ ಹುಡುಗರನ್ನು ಕರೆತಂದು ದಾಂಧಲೆ ನಡೆಸುತ್ತಾಳೆ. ಕುಡಿತ, ಡ್ರಗ್ಸ್ ಎಲ್ಲ ಚಟಗಳನ್ನೂ ಮೈಗೂಡಿಸಿಕೊಂಡಿದ್ದು ತೊಂದರೆ ನೀಡುತ್ತಾಳೆ ಎಂದು ಸ್ಥಳೀಯರು ದೂರಿದ್ದಾರೆ.

ಹೆಬ್ಬಾಳು ಠಾಣೆ ಇನ್ಸಪೆಕ್ಟರ್ ತಿಮ್ಮೇಗೌಡ ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ. (ಕೆ.ಎಸ್-ಎಸ್.ಎಚ್)

 

 

 

 

Leave a Reply

comments

Related Articles

error: