ದೇಶಪ್ರಮುಖ ಸುದ್ದಿ

ಕೊರೊನಾ ವಿರುದ್ಧದ ಯುದ್ಧದಲ್ಲಿ ಗೆಲ್ಲುವುದೇ ಭಾರತದ ಗುರಿ: ಪ್ರಧಾನಿ ಮೋದಿ

ನವದೆಹಲಿ,ಏ.6-ಕೊರೊನಾ ವೈರಸ್ ವಿರುದ್ಧದ ಯುದ್ಧದಲ್ಲಿ ಗೆಲ್ಲುವುದೇ ಭಾರತದ ಗುರಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

 ಬಿಜೆಪಿಯ 40ನೇ ಸಂಸ್ಥಾಪನಾ ದಿನದ ನಿಮಿತ್ತ ಮೋದಿಯವರು ಇಂದು ಪಕ್ಷದ ಕಾರ್ಯಕರ್ತರು, ನಾಯಕರಿಗೆ ಕೆಲವು ಕಿವಿಮಾತು ಹೇಳಿದರು ಹಾಗೇ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದರು.

ನಮ್ಮ ದೇಶವಷ್ಟೇ ಅಲ್ಲ, ಇಡೀ ಜಗತ್ತೇ ಅತ್ಯಂತ ಕಷ್ಟದ ಸಮಯದಲ್ಲಿದೆ. ಈಗ ಅಕ್ಷರಶಃ ಯುದ್ಧದ ಸನ್ನಿವೇಶ ಎದುರಾಗಿದೆ. ಈ ಸುದೀರ್ಘ ಯುದ್ಧದ ಜವಾಬ್ದಾರಿ ಹೊರಲು ಸಿದ್ಧ. ನಾವು ಈ ಹೋರಾಟದಲ್ಲಿ ಆಯಾಸಗೊಳ್ಳಬಾರದು ಮತ್ತು ವಿಶ್ರಾಂತಿ ತೆಗೆದುಕೊಳ್ಳಬಾರದು. ಅವಿರತವಾಗಿ ಶ್ರಮಿಸಿ ಜಯಗಳಿಸಲೇಬೇಕು. ಕೊರೊನಾ ವಿರುದ್ಧದ ಯುದ್ಧದಲ್ಲಿ ಗೆಲ್ಲುವುದೇ ಸದ್ಯ ನಮ್ಮ ದೇಶಕ್ಕೆ ಇರುವ ಗುರಿ ಮತ್ತು ಸಂಕಷ್ಟಗಳಿಗೆಲ್ಲ ಪರಿಹಾರ ಎಂದಿದ್ದಾರೆ.

ಸ್ವಚ್ಛತೆ, ಶಿಸ್ತು ಮತ್ತು ಸಾಮಾಜಿಕ ಅಂತರವೆಂಬುದು ಸದ್ಯ ಜಗತ್ತಿನ ಮಂತ್ರವಾಗಿದೆ. ನೀವು ಹೊರಗೆ ಹೋಗುವಾಗ ಮುಖವನ್ನು ಹೇಗೆ ಮಾಸ್ಕ್​ನಿಂದ ಮುಚ್ಚಿಕೊಳ್ಳುತ್ತಿರೋ, ಅದೇ ರೀತಿ ಮನೆಯಲ್ಲಿ ಇದ್ದಾಗಲೂ ಮಾಸ್ಕ್​ ಧರಿಸಿಯೇ ಇರಿ ಎಂದು ಸಲಹೆ ನೀಡಿದರು.

ಮನುಕುಲವನ್ನು ಸಂರಕ್ಷಣೆ ಮಾಡಿಕೊಳ್ಳುವ ಸವಾಲು ನಮ್ಮ ಎದುರು ಇದೆ. ಹೋರಾಟಕ್ಕೆ ಹಲವರು ಆರ್ಥಿಕ ನೆರವು ನೀಡಿದ್ದಾರೆ. ಈ ಸಂದರ್ಭದಲ್ಲಿ ಪ್ರತಿ ಬಿಜೆಪಿ ಕಾರ್ಯಕರ್ತನಲ್ಲೂ ಒಂದು ಮನವಿ ಮಾಡಿಕೊಳ್ಳುತ್ತೇನೆ.  ಪಿಎಂ ಕೇರ್ಸ್​ ಫಂಡ್​ಗೆ ಪ್ರತಿಯೊಬ್ಬರೂ ನಿಮ್ಮ ಕೈಲಾದಷ್ಟು ಕೊಡುಗೆ ನೀಡಿ. ಹಾಗೇ ಓರ್ವ ಕಾರ್ಯಕರ್ತ 40 ಜನರನ್ನು ದೇಣಿಗೆ ನೀಡಲು ಪ್ರೇರೇಪಿಸಬೇಕು ಎಂದಿದ್ದಾರೆ.

ನಮ್ಮ ದೇಶದ 130 ಕೋಟಿ ಜನರಲ್ಲಿ ಒಗ್ಗಟ್ಟು, ಏಕತೆಯ ಭಾವ ಎಷ್ಟಿದೆ ಎಂಬುದು ನಿನ್ನೆ ರಾತ್ರಿ 9ಗಂಟೆಗೆ ಜಗತ್ತಿನೆದುರು ಸಾಬೀತಾಯಿತು. ಎಲ್ಲ ಸಮಾಜದ, ಎಲ್ಲ ವಯಸ್ಸಿನ ಜನರೂ ಒಟ್ಟಾಗಿ ದೀಪ ಹಚ್ಚುವ ಮೂಲಕ ಕೊರೊನಾ ಮಣಿಸಲು ನಾವೆಲ್ಲ ಸಿದ್ಧ ಎಂಬ ಐಕ್ಯತಾ ಬಲವನ್ನು ಪ್ರದರ್ಶಿಸಿದರು ಎಂದು ಹೇಳಿದರು.

ಕೊರೊನಾ ವೈರಸ್​ನಿಂದ ಉಂಟಾದ ಈ ಬಿಕ್ಕಟ್ಟಿನ ನಿರ್ವಹಣೆ ಮಾಡಲು ಭಾರತ ಸಮಗ್ರವಾಗಿ ಸಿದ್ಧತೆ ಮಾಡಿಕೊಂಡಿದೆ. ನಾವು ತೆಗೆದುಕೊಳ್ಳುತ್ತಿರುವ ಕ್ರಮದ ಬಗ್ಗೆ ಭಾರತೀಯರಷ್ಟೇ ಅಲ್ಲದೆ, ವಿಶ್ವ ಆರೋಗ್ಯ ಸಂಸ್ಥೆಯೂ ಮೆಚ್ಚುಗೆ ವ್ಯಕ್ತಪಡಿಸಿದೆ. ಇದು ಎಲ್ಲ ದೇಶಗಳೂ ಒಂದಾಗಿ ಹೋರಾಡುವ ಸಮಯ. ಹಾಗಾಗಿ ವಿಡಿಯೋ ಕಾನ್ಫರೆನ್ಸ್​ ಮೂಲಕ ನಡೆದ ಸಾರ್ಕ್​ ದೇಶಗಳ ಹಾಗೂ ಜಿ 20 ನಾಯಕರ ಸಭೆಯಲ್ಲಿ ಭಾರತವೂ ಸಕ್ರಿಯವಾಗಿ ಪಾಲ್ಗೊಂಡಿತ್ತು ಎಂದರು.

ಭಾರತ ತೆಗೆದುಕೊಂಡಿರುವ ಕ್ರಮಗಳು, ಮಾಡುತ್ತಿರುವ ಪ್ರಯತ್ನಗಳು ವಿಶ್ವದ ಎದುರು ಮಾದರಿಯಾಗುತ್ತಿವೆ. ರೋಗದ ವಿರುದ್ಧ ಭಾರತ ಸಮಯಕ್ಕೆ ಸರಿಯಾಗಿ ಯುದ್ಧ ಪ್ರಾರಂಭ ಮಾಡಿದೆ. ಮಾ.24ರಿಂದ ಲಾಕ್​ಡೌನ್​ ವಿಧಿಸಲಾಗಿದೆ. ದೇಶದ ಜನರು ಅದಕ್ಕೆ ಸಹಕಾರ ನೀಡಿ ಪ್ರಬುದ್ಧತೆ ಮೆರೆದರು. ದೊಡ್ಡಮಟ್ಟದ ಜನಸಂಖ್ಯೆ ಇರುವ ದೇಶದಲ್ಲಿ ಲಾಕ್​ಡೌನ್​ ಪರಿಪಾಲನೆ ಅಷ್ಟು ಸುಲಭವಲ್ಲ. ಅಂಥದ್ದರಲ್ಲಿ ಜನರು ಇಷ್ಟು ಅಭೂತಪೂರ್ವವಾಗಿ ಸ್ಪಂದಿಸುತ್ತಾರೆ, ಅತ್ಯಂತ ವಿಧೇಯತೆಯಿಂದ ಮತ್ತು ಸೇವಾ ಪ್ರಜ್ಞೆಯಿಂದ ಅದನ್ನು ಪಾಲಿಸುತ್ತಾರೆಂದು ಯಾರೂ ಊಹಿಸಿರಲಿಲ್ಲ ಎಂದು ಹೇಳಿದರು.

ನಮ್ಮ ಕೇಂದ್ರ ಸರ್ಕಾರ ಆರೋಗ್ಯ ಸೇತು ಆ್ಯಪ್ ಅ​​ನ್ನು ಅಭಿವೃದ್ಧಿಪಡಿಸಿದೆ. ಅದರ ಬಗ್ಗೆ ಎಲ್ಲರಲ್ಲೂ ಅರಿವು ಮೂಡಿಸಬೇಕು. ಈ ಆ್ಯಪ್  ಬಗ್ಗೆ ತಿಳಿದಿರುವ ಓರ್ವ ವ್ಯಕ್ತಿ 40 ಜನರ ಮೊಬೈಲ್​​ನಲ್ಲಿ ಇದನ್ನು ಇನ್​​ಸ್ಟಾಲ್​ ಮಾಡಿಸಬೇಕು. ಆರೋಗ್ಯ ಸೇತು ಆ್ಯಪ್ ನಿಂದ ನಮ್ಮ ಸುತ್ತಮುತ್ತ ಎಷ್ಟು ಜನ ಕೊರೊನಾ ಸೋಂಕಿತರು ಇದ್ದಾರೆ ಎಂಬುದರ ಬಗ್ಗೆ ಮಾಹಿತಿ ಪಡೆಯಲು ಅನುಕೂಲವಾಗುತ್ತದೆ ಎಂದು ಮಾಹಿತಿ ನೀಡಿದರು. (ಎಂ.ಎನ್)

Leave a Reply

comments

Related Articles

error: