ಪ್ರಮುಖ ಸುದ್ದಿ

ಶಬ್ಬೇ ಬರಾಅತ್ ಸಂದರ್ಭ ಮನೆಯಲ್ಲೇ ಪ್ರಾರ್ಥಿಸಿ : ವಕ್ಫ್ ಸಮಿತಿ ಮನವಿ

ರಾಜ್ಯ( ಮಡಿಕೇರಿ) ಏ.7 :- ಮುಸಲ್ಮಾನ ಸಮುದಾಯಕ್ಕೆ ಏ.9 ಶಬ್ಬೇ ಬರಾಅತ್ ಆಚರಣೆಯ ಶುಭದಿನವಾಗಿದೆ. ಆದರೆ ಕೊರೋನಾ ಹಿನ್ನೆಲೆ ದೇಶವ್ಯಾಪಿ ಲಾಕ್‍ಡೌನ್ ಆದೇಶ ಇರುವುದರಿಂದ ಮತ್ತು ಪ್ರತಿಯೊಬ್ಬರ ಆರೋಗ್ಯದ ಹಿತದೃಷ್ಟಿಯಿಂದ ಯಾರೂ ಹೊರ ಹೋಗದೆ ಮನೆಯಲ್ಲೇ ವಿಶೇಷ ಪ್ರಾರ್ಥನೆ ಸಲ್ಲಿಸಬೇಕೆಂದು ವಕ್ಫ್ ಸಲಹಾ ಸಮಿತಿಯ ಜಿಲ್ಲಾಧ್ಯಕ್ಷ ಕೆ.ಎ.ಯಾಕುಬ್ ಮನವಿ ಮಾಡಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಶಬ್ಬೇ ಬರಾಅತ್ ಸಂದರ್ಭ ಯಾರೂ ಕೂಡ ಮಸೀದಿ, ದರ್ಗಾ ಮತ್ತು ಕಬರ್‍ಸ್ತಾನ್‍ಗಳಿಗೆ ತೆರಳದೆ ಮನೆಯಲ್ಲೇ ಪ್ರಾರ್ಥನೆ ಸಲ್ಲಿಸುವ ಮೂಲಕ ಜಿಲ್ಲಾಡಳಿತದ ಕ್ರಮಗಳಿಗೆ ಸಹಕಾರ ನೀಡಬೇಕೆಂದು ತಿಳಿಸಿದ್ದಾರೆ.
ಈ ಕುರಿತು ರಾಜ್ಯ ವಕ್ಫ್ ಸಮಿತಿಯಿಂದಲೂ ಸೂಚನೆ ಬಂದಿದ್ದು, ಮುಸಲ್ಮಾನರು ನಿಯಮವನ್ನು ಪಾಲಿಸಲೇಬೇಕಾಗಿದೆ. ಪ್ರತಿಯೊಬ್ಬರ ಆರೋಗ್ಯವನ್ನು ರಕ್ಷಿಸಲು ಜಾತಿ, ಮತ, ಭೇದವಿಲ್ಲದೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಆರೋಗ್ಯ ಸಿಬ್ಬಂದಿಗಳು ಸೇರಿದಂತೆ ಅನೇಕರು ರಾತ್ರಿ ಹಗಲೆನ್ನದೆ ಶ್ರಮಿಸುತ್ತಿದ್ದಾರೆ. ಇವರುಗಳ ಪ್ರಯತ್ನದೊಂದಿಗೆ ಕೈಜೋಡಿಸಲು ಸಾಮೂಹಿಕ ಪ್ರಾರ್ಥನೆಯನ್ನು ಕೈಬಿಟ್ಟು ತಮ್ಮ ತಮ್ಮ ಮನೆಗಳಲ್ಲೇ ಪ್ರಾರ್ಥಿಸುವ ಮೂಲಕ ಕೊರೋನಾ ವೈರಸ್ ಹರಡದಂತೆ ಆತ್ಮ ಸ್ಥೈರ್ಯವನ್ನು ಹೆಚ್ಚಿಸಿಕೊಳ್ಳಬೇಕಾಗಿದೆ ಎಂದು ಯಾಕುಬ್ ತಿಳಿಸಿದ್ದಾರೆ.
ಶಿಕ್ಷೆಯಾಗಲಿದೆ
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮತ್ತು ಧರ್ಮ ನಿಂದನೆಯ ಪ್ರಚೋದನಾಕಾರಿ ಪೋಸ್ಟ್‍ಗಳು ಹರಿದಾಡುತ್ತಿವೆ. ಈ ರೀತಿ ಅಪ್ರಚಾರದಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಇಲಾಖೆ ತಿಳಿಸಿದೆ. ಕೋಮು ಸೌಹಾರ್ದತೆಯ, ಪ್ರಜ್ಞಾವಂತರ ಜಿಲ್ಲೆಯಾಗಿರುವ ಕೊಡಗಿನಲ್ಲಿ ಯಾರೂ ಪರಸ್ಪರ ಧರ್ಮ ದ್ವೇಷದಲ್ಲಿ ತೊಡಗದೆ, ಅಪಪ್ರಚಾರಕ್ಕೆ ಕಿವಿಗೊಡದೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಆಧಾರ ರಹಿತ ಮಾಹಿತಿಗಳನ್ನು ಗಂಭೀರವಾಗಿ ಪರಿಗಣಿಸದೆ ಆತಂಕವನ್ನು ಸೃಷ್ಟಿಸಿರುವ ಕೊರೋನಾ ವೈರಸ್ ವಿರುದ್ಧ ಒಗ್ಗಟ್ಟಾಗಿ ಹೋರಾಟ ನಡೆಸಬೇಕೆಂದು ಯಾಕುಬ್ ಮನವಿ ಮಾಡಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: