ಪ್ರಮುಖ ಸುದ್ದಿ

ಪೊಲೀಸರ ಆರೋಗ್ಯದ ಬಗ್ಗೆ ಕಾಳಜಿ : ಮಡಿಕೇರಿಯಲ್ಲಿ ಆರೋಗ್ಯ ಶಿಬಿರ

ರಾಜ್ಯ( ಮಡಿಕೇರಿ) ಏ.7:- ಕೊರೋನಾ ಸೋಂಕು ಹರಡುವುದನ್ನು ತಪ್ಪಿಸಲು ಜಿಲ್ಲಾಡಳಿತ ತೆಗೆದುಕೊಂಡಿರುವ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಪೊಲೀಸ್ ಇಲಾಖೆ ರಾತ್ರಿ ಹಗಲೆನ್ನದೆ ಶ್ರಮಿಸುತ್ತಿದೆ.
ಸಾವಿರಕ್ಕೂ ಹೆಚ್ಚು ಪೊಲೀಸರು ಕರ್ತವ್ಯದಲ್ಲಿ ತೊಡಗಿದ್ದು, ಇವರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುವ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ಮಾಡಿದ್ದಾರೆ.
ನಗರದ ಮೈತ್ರಿ ಪೊಲೀಸ್ ಭವನದಲ್ಲಿ ಪೊಲೀಸ್ ಸಿಬ್ಬಂದಿಗಳಿಗಾಗಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಕೊಡಗು ಜಿಲ್ಲೆಯಲ್ಲಿ 1 ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳನ್ನು ವಿವಿಧ ಕಡೆಗಳಲ್ಲಿ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ. ಹತ್ತಕ್ಕೂ ಹೆಚ್ಚು ಚೆಕ್‍ಪೋಸ್ಟ್‍ಗಳಲ್ಲೂ ಪೊಲೀಸರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಏ.14ರ ವರೆಗೆ ಪ್ರತಿ ಸರ್ಕಲ್ ಮಟ್ಟದಲ್ಲಿ ಪೊಲೀಸ್ ಸಿಬ್ಬಂದಿಗಳ ಆರೋಗ್ಯ ತಪಾಸಣೆ ನಡೆಯಲಿದೆ ಎಂದು ಎಸ್‍ಪಿ ಇದೇ ಸಂದರ್ಭ ಮಾಹಿತಿ ನೀಡಿದರು. ಕೊರೋನಾ ವೈರಸ್‍ನ ಲಕ್ಷಣಗಳು ಕಂಡು ಬಂದಲ್ಲಿ ಅಂತಹ ಸಿಬ್ಬಂದಿಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆಯನ್ನು ನೀಡಲಾಗುತ್ತದೆ ಎಂದು ತಿಳಿಸಿದರು.
ಮಡಿಕೇರಿ ಡಿವೈಎಸ್‍ಪಿ ದಿನೇಶ್ ಕುಮಾರ್, ನಗರ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಈ ಸಂದರ್ಭ ಹಾಜರಿದ್ದರು. ಸಿವಿಲ್ ಪೊಲೀಸ್, ಜಿಲ್ಲಾ ಸಶಸ್ತ್ರ ಪೊಲೀಸ್ ದಳ, ಮಹಿಳಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಶಿಬಿರದಲ್ಲಿ ಹಾಜರಾಗಿ ಆರೋಗ್ಯ ತಪಾಸಣೆಗೆ ಒಳಗಾದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: