ಮೈಸೂರು

ಸರ್ಕಾರಿ ಕ್ವಾರೆಂಟೈನ್ ಗೆ ತಮ್ಮ ತ್ರಿ ಸ್ಟಾರ್ ಹೋಟೆಲ್ ಬಿಟ್ಟುಕೊಟ್ಟ ಹೋಟೆಲ್ ಮಾಲೀಕರ ಸಂಘದ ಮಾಜಿ ಅಧ್ಯಕ್ಷ ರಾಜೇಂದ್ರ!

ಮೈಸೂರು, ಏ.7:- ಕೊರೋನಾ ವೈರಸ್ ಸೋಂಕು  ಪ್ರಕರಣಗಳು ಮೈಸೂರಿನಲ್ಲಿ ದಿನೇ ದಿನೇ ಹೆಚ್ಚುತ್ತಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಕೊರೋನಾ ವೈರಸ್ ಶಂಕಿತರೆಂದು ಹಲವರನ್ನು ಹೋಂ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಹೀಗಾಗಿ, ಅಕ್ಕಪಕ್ಕದವರು ಮಾತನಾಡಿಸುವುದಿರಲಿ, ಹತ್ತಿರಕ್ಕೂ ಸುಳಿಯುತ್ತಿಲ್ಲ. ಹೀಗಾಗಿ, ಕ್ವಾರಂಟೈನ್‌ನಲ್ಲಿ ಇರುವವರಿಗೆ ನೆರವಾಗಲು ಮೈಸೂರಿನ ಹೋಟೆಲ್‌ ಮಾಲೀಕ, ಹೋಟೆಲ್ ಮಾಲೀಕರ ಸಂಘದ ಮಾಜಿ ಅಧ್ಯಕ್ಷ ರಾಜೇಂದ್ರ ಮುಂದೆ ಬಂದಿದ್ದು, ಕ್ವಾರೆಂಟೈನ್‌ನಲ್ಲಿ ಇರುವವರಿಗಾಗಿ ತಮ್ಮ ತ್ರಿ ಸ್ಟಾರ್‌ ಹೋಟೆಲ್‌ ಬಿಟ್ಟು  ಕೊಟ್ಟಿದ್ದಾರೆ.

ವಿದೇಶದಿಂದ ಬಂದವರು ಅಥವಾ ಹೋಂ ಕ್ವಾರೆಂಟೈನ್‌ನಲ್ಲಿ ಇರುವವರಿಗಾಗಿ ತಮ್ಮ ತ್ರೀ ಸ್ಟಾರ್ ಹೋಟೆಲ್ ಅನ್ನು ಸ್ವಯಂ ಪ್ರೇರಿತರಾಗಿ ಬಿಟ್ಟು ಕೊಟ್ಟಿದ್ದು,   ತಮ್ಮ ವೈಸ್‌ರಾಯ್ ಹೋಟೆಲ್‌ನಲ್ಲಿ ಸರ್ಕಾರಿ ಕ್ವಾರಂಟೈನ್‌ ಮಾಡುವಂತೆ ಕೇಳಿಕೊಂಡಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ರಾಜೇಂದ್ರ ಈಗ ಹೋಟೆಲ್ ಗಳನ್ನು ತೆರೆಯವಂತೆಯೂ ಇಲ್ಲ, ನಾವು ಬಳಸುತ್ತಿಲ್ಲ ಅಂದ ಮೇಲೆ ನಮ್ಮಿಂದ ಕಿಂಚಿತ್ ಆದರೂ ಉಪಕಾರವಾಗಲೆಂದು ಜಿಲ್ಲಾಧಿಕಾರಿಯವರ ಬಳಿ ಕೇಳಿದೆ. ರಾಜೇಂದ್ರ ಭವನ ಸೇರಿದಂತೆ ಹೋಟೆಲ್ ಗಳನ್ನು ಬಳಸಿಕೊಳ್ಳುವಂತೆ ಕೇಳಿದೆ. ಅದಕ್ಕವರು ವೈಸರಾಯ್ ಹೋಟೆಲ್ ಆಯ್ಕೆ ಮಾಡಿಕೊಂಡರು. ಅವರಿಗೆ ಕಿಚನ್ ಸೇರಿದಂತೆ ಎಲ್ಲವನ್ನೂ ಬಿಟ್ಟುಕೊಟ್ಟಿದ್ದೇವೆ ಎಂದರು. ಹೋಟೆಲ್ ಮಾಲೀಕರು ಇದೇ ರೀತಿ ಮಾಡಿದರೆ ತುಂಬಾ ಸಹಾಯವಾಗಲಿದೆ. ನಾನೂ ಕೂಡ ಹೊಟೇಲ್ ಮಾಲೀಕರ ಸಂಘದ ಮಾಜಿ ಅಧ್ಯಕ್ಷನಾಗಿದ್ದವನು. ಅದಕ್ಕಾಗಿ ಹಣವನ್ನೆ ತೆಗೆದುಕೊಳ್ಳುವುದಿಲ್ಲ. ನನ್ನ ಕೈಲಾದ ಕಿಂಚಿತ್ ಸೇವೆ ಎಂದು ಕೊಳ್ಳುತ್ತೇನೆ ಎಂದು ತಿಳಿಸಿದರು.

ಕಳೆದ ಕೆಲವು ದಿನಗಳ ಹಿಂದಷ್ಟೇ ನಗರದ ಹೋಟೆಲ್‌ ಒಂದರಲ್ಲಿ ಕ್ವಾರೆಂಟೈನ್‌ ವಿಚಾರವಾಗಿ ಜನರು ಅಸಮಾಧಾನ ತೋರ್ಪಡಿಸಿದ ಬೆನ್ನಲ್ಲೇ, ರಾಜೇಂದ್ರ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಸುಮಾರು 25ಕ್ಕೂ ಹೆಚ್ಚು ಜನರನ್ನು ಸರ್ಕಾರಿ ಕ್ವಾರಂಟೈನ್ ಮಾಡಿ ಎಲ್ಲಾ ಸೌಲಭ್ಯ ನೀಡುವುದಾಗಿ ಜಿಲ್ಲಾಡಳಿತಕ್ಕೂ ಸಹ ತಿಳಿಸಿದ್ದಾರೆ.  ತಮ್ಮದಲ್ಲದ ತಪ್ಪಿಗೆ  ಕ್ವಾರೆಂಟೈನ್ ನಲ್ಲಿ ಇರುವವರಿಗೆ ಹಾಲು ಕೊಡದೆ, ತರಕಾರಿ ನೀಡದೆ ಇಲ್ಲಿಗೆ ಬರಬೇಡಿ ಹೊರಟುಹೋಗಿ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿರುವ ಈ ದಿನಗಳಲ್ಲಿ ರಾಜೇಂದ್ರ ಅವರು ತ್ರಿ ಸ್ಟಾರ್ ಹೋಟೆಲ್ ಬಿಟ್ಟುಕೊಟ್ಟಿರುವುದು ನಿಜಕ್ಕೂ ಶ್ಲಾಘನೀಯ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: