ಪ್ರಮುಖ ಸುದ್ದಿ

‘ಕೊರೋನಾ ಇಡೀ ಮಾನವ ಸಂಕುಲಕ್ಕೆ ಅಪಾಯ ತಂದೊಡ್ಡಿರುವ ಹಿನ್ನೆಲೆ : ಪಕ್ಷ, ಧರ್ಮಗಳ ವ್ಯತ್ಯಾಸ ಬದಿಗಿಟ್ಟು ಒಟ್ಟಾಗಿ ಹೋರಾಟ ; ಕೆಪಿಸಿಸಿ ಅಧ್ಯಕ್ಷ ಡಿಕೆಶಿ

ರಾಜ್ಯ(ಬೆಂಗಳೂರು)ಏ.7:- ‘ಕೊರೋನಾ ಇಡೀ ಮಾನವ ಸಂಕುಲಕ್ಕೆ ಅಪಾಯ ತಂದೊಡ್ಡಿರುವ ಹಿನ್ನೆಲೆಯಲ್ಲಿ ನಾವೆಲ್ಲರೂ ಪಕ್ಷ, ಧರ್ಮಗಳ ವ್ಯತ್ಯಾಸ ಬದಿಗಿಟ್ಟು ಒಟ್ಟಾಗಿ ಹೋರಾಟ ನಡೆಸಬೇಕಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಕ್ವೀನ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಮುಖ್ಯ ಕಚೇರಿಯಲ್ಲಿ ಪಕ್ಷದಲ್ಲಿ ಸಭೆ ನಡೆಸಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್ ಅವರು ಹೇಳಿದ್ದಿಷ್ಟು‘ಕರ್ನಾಟಕ ರಾಜ್ಯದಲ್ಲಿ ಮೊದಲ ಬಾರಿಗೆ ಮಾಜಿ ಆರೋಗ್ಯ ಸಚಿವರ ಅಧ್ಯಕ್ಷತೆಯಲ್ಲಿ ರಾಜ್ಯದಲ್ಲಿ ಆರೋಗ್ಯ, ವೈದ್ಯಕೀಯ ಶಿಕ್ಷಣ ಇಲಾಖೆ ಜವಾಬ್ದಾರಿ ನಿಭಾಯಿಸಿದ ಎಲ್ಲ ಮಾಜಿ ಸಚಿವರು, ವೈದ್ಯಕೀಯ ಮಾಡಿರುವ ಶಾಸಕರುಗಳು ಹಾಗೂ ಪಕ್ಷದ ಕಾರ್ಯಕರ್ತರನ್ನು ಒಳಗೊಂಡು ಸಮಿತಿ ರಚಿಸಿದ್ದೇವೆ. ಅವರು ವಿವಿಧ ವಿಭಾಗಗಳನ್ನು ಮಾಡಿಕೊಂಡು ಈ ಪರಿಸ್ಥಿತಿಯನ್ನು ಯಾವ ರೀತಿ ಎದುರಿಸಬೇಕು ಎಂದು ಕೂತು ಚರ್ಚೆ ನಡೆಸಿ ಸಲಹೆ ನೀಡುತ್ತಿದ್ದಾರೆ. ಅವರ ಸಲಹೆ ಮೇರೆಗೆ ನಾವು ಶಾಸಕರಾದ ಕೃಷ್ಣಭೈರೇಗೌಡರ ಅಧ್ಯಕ್ಷತೆಯಲ್ಲಿ ರಾಜ್ಯ ಮಟ್ಟದ ವಾರ್ ರೂಮ್ ಅನ್ನು ಆರಂಭಿಸಿದ್ದೇವೆ. ಅವರು ಪ್ರತಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ವಾರ್ ರೂಮ್ ರಚನೆ ಮಾಡಿಸಿ. ಜನರಿಂದ ಸಮಸ್ಯೆ ಹಾಗೂ ಅವರ ಅಹವಾಲುಗಳನ್ನು ಸ್ವೀಕರಿಸಿ, ನಂತರ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿದ್ದಾರೆ. ಅಗತ್ಯವಿರುವ ಜನರಿಗೆ ಸಹಾಯ, ಆಹಾರ ವಿತರಣೆ ಸೇರಿದಂತೆ ಆರೋಗ್ಯ ರಕ್ಷಣೆಗೆ ಬೇಕಾಗಿರುವ ಸಾಮಾಗ್ರಿ ಹಂಚುತ್ತಿದ್ದಾರೆ. ಈ ಮೂಲಕ ನಮ್ಮ ವಾರ್ ರೂಮ್ ಮತ್ತು ಕಾರ್ಯಪಡೆ ಜನರಿಗೆ ಸಹಾಯ ಹಸ್ತವಾಗಿ ಕಾರ್ಯನಿರ್ವಹಿಸುತ್ತಿದೆ.

ಈ ಮಧ್ಯೆ ಸಾಕಷ್ಟು ಸರ್ಕಾರೇತರ ಸಂಸ್ಥೆಗಳು, ಸಂಘಟನೆಗಳು ಏನನ್ನೂ ಅಪೇಕ್ಷಿಸದೇ ಮಾನವೀಯ ಸೇವೆ ನೀಡುತ್ತಿವೆ. ಈ ಸಂಘ ಸಂಸ್ಥೆಗಳ ಜತೆಗೆ ಆರೋಗ್ಯ, ಪೊಲೀಸ್, ಪೌರ ಕಾರ್ಮಿಕರು ಸೇರಿದಂತೆ ಸರ್ಕಾರದ ಎಲ್ಲ ಇಲಾಖೆಗಳ ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ.

ಈ ವಿಚಾರವಾಗಿ ಸರ್ವಪಕ್ಷ ಸಭೆ ಕರೆಯಬೇಕು ಅಂತಾ ನಾನು ಮೊದಲ ಬಾರಿಗೆ ಆಗ್ರಹ ಮಾಡಿದೆ. ತಕ್ಷಣ ಮುಖ್ಯಮಂತ್ರಿಗಳು ಸ್ಪಂದಿಸಿ ಎಲ್ಲ ಪಕ್ಷಗಳ ನಾಯಕರ ಸಭೆ ಕರೆದು ನಮ್ಮ ಅಹವಾಲು ಹಾಗೂ ಸಲಹೆಗಳನ್ನು ಸ್ವೀಕರಿಸಿದ್ದಾರೆ. ನಾವು ನಮ್ಮ ವಿಚಾರಗಳನ್ನು ಸರ್ಕಾರಕ್ಕೆ ತಿಳಿಸಿದ್ದೆವು. ನಿಮ್ಮಲ್ಲಿರುವ ಗೊಂದಲ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಳ್ಳಬೇಕು. ನಮ್ಮಂತ ವಿರೋಧ ಪಕ್ಷಗಳೇ ಸಹಕರಿಸುತ್ತಿರುವಾಗ ಸರ್ಕಾರದಲ್ಲಿ ಭಿನ್ನಭಿಪ್ರಾಯ ಇರಬಾರದು ಎಂದು ತಿಳಿಸಿದ್ದೆವು. ಅದಕ್ಕೂ ಅವರು ಸ್ಪಂದಿಸಿದ್ದಾರೆ. ಕೇಂದ್ರ ಸರ್ಕಾರಕ್ಕೂ ಸರ್ವಪಕ್ಷ ಸಭೆ ಕರೆಯುವ ಬಗ್ಗೆ ಒತ್ತಾಯ ಮಾಡಿದ್ದೆ ಅಲ್ಲೂ ಕೂಡ ಪ್ರಧಾನಿಗಳು ಈಗಾಗಲೇ ನಮ್ಮ ನಾಯಕರ ಬಳಿ ಮಾತನಾಡುತ್ತಿದ್ದಾರೆ. ಸರ್ವಪಕ್ಷ ಸಭೆಯನ್ನೂ ಕರೆದಿದ್ದಾರೆ. ವಿರೋಧ ಪಕ್ಷಗಳ ಮಾತನ್ನು ಅವರು ಪರಿಗಣಿಸುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ.

ಇದರಲ್ಲಿ ನಾವು ರಾಜಕಾರಣ ಮಾಡುವುದರಲ್ಲಿ ಅರ್ಥವಿಲ್ಲ. ವಿಎಚ್ ಪಿ, ಆರೆಸ್ಸೆಸ್ ಸೇರಿದಂತೆ ಇತರೆ ಸಂಘಟನೆಗಳು ಒಂದೊಂದು ರಾಜಕೀಯ ಹೇಳಿಕೆ ನೀಡುತ್ತಿರಬಹುದು. ಮತ್ತೆ ಕೆಲವರು ತಪ್ಪು ಮಾಹಿತಿ ಹರಿಬಿಟ್ಟು ಅಭಿಯಾನ ಮಾಡುತ್ತಿರುವುದನ್ನು ನಾವು ಗಮನಿಸಿದ್ದೇವೆ.  ದಯವಿಟ್ಟು ಇದನ್ನು ನಿಯಂತ್ರಣ ಮಾಡಿ. ಪಕ್ಷ, ಧರ್ಮ ಎಲ್ಲ ವ್ಯತ್ಯಾಸ ಬಿಟ್ಟು ಮಾನವ ಸೇವೆಗೆ ಒಗ್ಗಟ್ಟಿನಿಂದ ಕೆಲಸ ಮಾಡುವ ಅಗತ್ಯವಿದೆ.

ಈ ಸಮಸ್ಯೆ ಬಗೆಹರಿದ ನಂತರ ನಾವೆಲ್ಲ ದೊಡ್ಡ ಆರ್ಥಿಕ ಸವಾಲು ಎದುರಿಸಬೇಕಿದೆ. ನಮ್ಮ ಪಕ್ಷ ರಾಷ್ಟ್ರಮಟ್ಟದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ತಜ್ಞರನ್ನು ಕರೆದು ಚರ್ಚೆ ಮಾಡುವಂತೆ ಸಲಹೆ ನೀಡಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಮಾಜಿ ಸಚಿವ ಆರ್.ವಿ ದೇಶಪಾಂಡೆ ಅವರ ನೇತೃತ್ವದಲ್ಲಿ ರಾಜ್ಯಸಭಾ ಸದಸ್ಯರಾದ ರಾಜೀವ್ ಗೌಡ ಅವರು ಸಂಚಾಲಕರಾಗಿ ಮಾಡಿ ‘ವಿಷನ್ ಕರ್ನಾಟಕ’ ಎಂಬ ಸಮಿತಿ ರಚಿಸಲಾಗಿದೆ. ಈ ಸಮಿತಿಗೆ 10 ಜನ ಸದಸ್ಯರ ನೇಮಕವನ್ನು ಅವರ ಆಯ್ಕೆಗೆ ಬಿಡಲಾಗಿದೆ. ಅವರೆಲ್ಲ ಸೇರಿ ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯ ಆರ್ಥಿಕ ಸವಾಲನ್ನು ಹೇಗೆ ಎದುರಿಸಬೇಕು. ಎಲ್ಲ ವರ್ಗದ ಜನರಿಗೆ ಹೇಗೆ ಸಹಾಯ ಮಾಡಬೇಕು. ಯಾವ ಪ್ಯಾಕೇಜ್ ಗಳನ್ನು ನಾವು ನೀಡಬೇಕು ಎಂದು ಮಾರ್ಗಸೂಚಿ ರಚಿಸಲು ಈ ಸಮಿತಿ ರಚಿಸಲಾಗಿದೆ.

ಈ ಬಗ್ಗೆ ದೇಶಪಾಂಡೆ ಅವರು ಕೆಲಸ ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಲಿದ್ದಾರೆ. ಎಲ್ಲ ವರ್ಗದ ಜನರ ಬಳಿ ಮಾತನಾಡಿ ಅವರ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಒಂದು ವಿರೋಧ ಪಕ್ಷವಾಗಿ ನಮ್ಮ ಮುಂದೆ ದೊಡ್ಡ ಜವಾಬ್ದಾರಿ ಇದೆ. ನನಗೆ ನೋಡಲು ಎರಡು ಕಣ್ಣಿದೆ. ಆದರೆ ಆರು ಕೋಟಿ ಜನರೂ ನನ್ನನ್ನು ಗಮನಿಸುತ್ತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಈ ಆರು ಕೋಟಿ ಜನರ ಜೀವನದಲ್ಲಿ ಬದಲಾವಣೆ ತರುವ ದೃಷ್ಠಿಯಿಂದ ಈ ವಿಷನ್ ಕರ್ನಾಟಕವನ್ನು ಆರಂಭಿಸಿದ್ದೇವೆ.

ಸಾರ್ವಜನಿಕರು, ವರ್ತಕರು, ಉದ್ಯೋಗ ಸೃಷ್ಠಿ ಮಾಡಿರುವವರು ಸೇರಿದಂತೆ ಪ್ರತಿ ನಿತ್ಯ ಕಷ್ಟಪಡುತ್ತಿರುವ ಎಲ್ಲ ವರ್ಗದ ಜನರ ಸಲಹೆ ಸಹಕಾರ ಅಭಿಪ್ರಾಯ ನೋವು ಎಲ್ಲವನ್ನು ತಿಳಿಸಿ ನಿಮ್ಮ ಜೀವನ ಸುಗಮಗೊಳಿಸಲು ಕಾಂಗ್ರೆಸ್ ಪಕ್ಷ ಬದ್ಧವಾಗಿದೆ. ನಮಗೆ ರಾಜಕಾರಣ ಮುಖ್ಯವಲ್ಲ. ನಿಮ್ಮ ಬದುಕು ಹಸನಾಗುವುದು ಮುಖ್ಯ.

ನಿಜಾಮುದ್ದೀನ್ ಪ್ರಕರಣದಲ್ಲಿ ಪೊಲೀಸರ ವರದಿ ಮುಖ್ಯ

ಈ ಪ್ರಕರಣದ ಕುರಿತು ಮಾಧ್ಯಮಗಳ ಮೂಲಕ ಎಲ್ಲ ಬೆಳವಣಿಗೆ ಗಮನಿಸುತ್ತಿದ್ದೇನೆ. ನಮ್ಮ ಹಳ್ಳಿಗಳಲ್ಲಿ ಒಂದು ಮಾತಿದೆ. ‘ಸುಟ್ಟುಹೋದವನ ಮನೆಯಲ್ಲಿ ಸಿಗರೇಟ್ ಹಚ್ಚಿಕೊಳ್ಳುವಂತೆ’, ನಮ್ಮಲ್ಲಿ ಕೆಲವರು ಈ ಕಠಿಣ ಪರಿಸ್ಥಿತಿಯಲ್ಲೂ ಕೆಲವರು ರಾಜಕೀಯ ಲಾಭ ಮಾಡಿಕೊಳ್ಳಲು ಮುಂದಾಗುತ್ತಿದ್ದಾರೆ. ಇದು ಸರಿ ಇಲ್ಲ. ಈ ಪ್ರಕರಣದಲ್ಲಿ ಬೆಂಗಳೂರು ಪೊಲೀಸ್ ಅಧಿಕಾರಿಗಳು ಏನು ಉತ್ತರ ಕೊಡಬೇಕೋ ಅದನ್ನು ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಧರ್ಮದ ವಿಚಾರದಲ್ಲಿ ರಾಜಕೀಯ ಮಾಡಬಾರದು.

15 ದಿನ ಉಚಿತ ಆಹಾರ ನೀಡುವುದರಲ್ಲಿ ತಪ್ಪಿಲ್ಲ, ಕೊಡಲಿ

ಇಂದಿರಾ ಕ್ಯಾಂಟೀನ್ ನಲ್ಲಿ 5-10 ರೂಪಾಯಿಗೆ ಊಟ ನೀಡಲಾಗುತ್ತಿತ್ತು. ಸದ್ಯ ಬಂದ್ ಆಗಿರುವ ಹಿನ್ನೆಲೆಯಲ್ಲಿ ಉಚಿತ ಊಟ ನೀಡಬೇಕು. ಇದರಲ್ಲಿ ಯಾವುದೇ ತಪ್ಪಿಲ್ಲ. ಸರ್ಕಾರಕ್ಕೆ ಹೊರೆಯಾಗುವುದಾದರೆ, ನಾನು ಈಗಾಗಲೇ ಹೇಳಿರುವಂತೆ ಯಾವುದಾದರೂ ಒಂದೆರಡು ಅಭಿವೃದ್ಧಿ ಯೋಜನೆಗಳನ್ನು ಕೈ ಬಿಡಲಿ. ಸದ್ಯ ಜನರನ್ನು ಹಸಿವಿನಿಂದ ಕಾಪಾಡಬೇಕಿದೆ. ನಾನು ಕೂಡ ಇಂದಿರಾ ಕ್ಯಾಂಟೀನ್ ಗೆ ಸದ್ಯದಲ್ಲೇ ಭೇಟಿ ನೀಡಲಿದ್ದು, ಅಲ್ಲಿನ ಆಹಾರ ಗುಣಮಟ್ಟ ಪರಿಶೀಲಿಸಲಿದ್ದೇನೆ.

ಶೇ.60ರಷ್ಟು ಶಾಸಕರಿಂದ ಈಗಾಗಲೇ ದೇಣಿಗೆ

ಕೊರೋನಾ ಪರಿಸ್ಥಿತಿ ನಿಭಾಯಿಸಲು ಕಾಂಗ್ರೆಸ್ ಕೊರೋನಾ ಪರಿಹಾರ ನಿಧಿಯನ್ನು ಸ್ಥಾಪಿಸಿದ್ದು, ಇದರಲ್ಲಿ ಪಕ್ಷದ ಶಾಸಕರು ವಿಧಾನ ಪರಿಷತ್ ಸದಸ್ಯರು ಕನಿಷ್ಠ 1 ಲಕ್ಷ ದೇಣಿಗೆ ನೀಡುವಂತೆ ಹೇಳಿದ್ದೆವು. ನಮ್ಮ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹಾಗೂ ಎಸ್ ಆರ್ ಪಾಟೀಲ್ ಅವರು ಶಾಸಕರಿಗೆ ಮನವಿ ಮಾಡಿದ್ದಾರೆ. ಈಗಾಗಲೇ ಶೇ.60ರಷ್ಟು ಶಾಸಕರು ದೇಣಿಗೆ ನೀಡಿದ್ದಾರೆ. ಕೆಲವು ಹೊರ ಊರುಗಳಲ್ಲಿ ಇರುವುದರಿಂದ ಚೆಕ್ ತಲುಪಿಸಲು ಪ್ರಯತ್ನಿಸುತ್ತಿದ್ದಾರೆ. ಮತ್ತೆ ಕೆಲವರು ಆರ್ ಟಿಜಿಎಸ್ ಮಾಡುತಿದ್ದಾರೆ. ಇನ್ನು ಮಾಜಿ ಶಾಸಕರು, ಕಾರ್ಯ ಕರ್ತರಿಗೂ ಮನವಿ ಮಾಡಿದ್ದು, ಸ್ಥಳೀಯವಾಗಿ ನಿಮ್ಮ ಸೇವೆ ಮಾಡಿ ನಂತರ ಕೈಲಾದಷ್ಟು ದೇಣಿಗೆ ನೀಡಿ ಎಂದು ಮನವಿ ಮಾಡಿದ್ದೇವೆ. ಎಲ್ಲವೂ ಕಲೆಹಾಕಿದ ನಂತರ ಅದನ್ನು ಹೇಗೆ ಬಳಸಿಕೊಳ್ಳಬೇಕು ಎಂದು ಕಾರ್ಯಪಡೆ ಸಲಹೆ ನೀಡಲಿದೆ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: