ಮೈಸೂರು

ವಿನಾಯಿತಿ ನೀಡಿ ನೇರಕೊಳ್ಳಿರೆಂದು ವ್ಯಾಪಾರಸ್ಥರಿಗೆ ಹೇಳುವುದಲ್ಲ ಸರ್ಕಾರವೇ ನೇರವಾಗಿ ರೈತರ ಹೊಲಗಳಿಗೆ ಹೋಗಿ ಉತ್ಪನ್ನಗಳನ್ನು ಕೊಳ್ಳಿ : ಬಡಗಲಪುರ ನಾಗೇಂದ್ರ ಒತ್ತಾಯ

ಮೈಸೂರು,ಏ.7:- ಮಾರುಕಟ್ಟೆ ವ್ಯವಹಾರ ನಿಯಂತ್ರಣ ಮತ್ತು ಅಭಿವೃದ್ಧಿ ಅಧಿನಿಯಮ ಕಲಂ8(2)ಕ್ಕೆ ವಿನಾಯಿತಿ ನೀಡಿ ನೇರಕೊಳ್ಳಿ ಎಂದು ವ್ಯಾಪಾರಸ್ಥರಿಗೆ ಹೇಳುವುದಲ್ಲ. ಸರ್ಕಾರವೇ ನೇರವಾಗಿ ರೈತರ ಹೊಲಗಳಿಗೆ ಹೋಗಿ ಉತ್ಪನ್ನಗಳನ್ನು ಕೊಳ್ಳಿ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾರುಕಟ್ಟೆ ಸಚಿವ ಎಸ್.ಟಿ.ಸೋಮಶೇಖರ್ ಅವರನ್ನು ಒತ್ತಾಯಿಸಿದ್ದಾರೆ.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನೀವು ಏನೇ ಹೇಳಿ ಸರ್ಕಾರ ಏನು ಹೇಳಿದರೂ ರೈತರ ಉತ್ಪನ್ನ ಮಾರಾಟವಾಗುತ್ತಿಲ್ಲ. ಕಣ್ಣೊರೆಸುವ ತಂತ್ರ ಬಿಡಿ. ಸರ್ಕಾರದ ಅಧಿಕಾರಿಗಳನ್ನು ಕರೆದು ತೀರ್ಮಾನಿಸಿ ಖರೀದಿಗೆ ಹಳ್ಳಿಗೆ ಹೋಗಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ರೈತರ ಉತ್ಪನ್ನಗಳನ್ನು ಕೊಳ್ಳುವುದಾಗಿ ಗಂಟೆಗೆ ಐದು ಸಲ ದೃಶ್ಯಮಾಧ್ಯಮಗಳ ಮೂಲಕ ಜಾಹೀರಾತು ಮಾಡುತ್ತೀರಿ, ರೈತರು ತಮ್ಮ ತರಕಾರಿ, ಹಣ್ಣು, ರೇಷ್ಮೆಗಳನ್ನು ರಸ್ತೆಗೆ ಸುರಿಯುತ್ತಿರುವುದನ್ನು ಅದೇ ದೃಶ್ಯ ಮಾಧ್ಯಮಗಳು ತೋರಿಸುತ್ತಿವೆ. ಅವು ನಿಮ್ಮ ಕಣ್ಣಿಗೆ ಕಾಣುವುದಿಲ್ಲವೇ? ಯಡಿಯೂರಪ್ಪನವರೇ , ಬಿ.ಸಿ.ಪಾಟೀಲರೇ ಸೋಮಶೇಖರ್ ಅವರೇ ಎಂದು ಕಠುವಾಗಿ ಟೀಕಿಸಿದ್ದಾರೆ.

ಕಾಲುವೆಗಳಿಗೆ ನೀರು ಹರಿಸಿ

ಕನ್ನಂಬಾಡಿ ಕಟ್ಟೆಯಲ್ಲಿ 103ಅಡಿ ನೀರು ಇದೆ. ಆದರೆ ಕಾವೇರಿ /ಕೆಆರ್ ಎಸ್ ಅಚ್ಚುಕಟ್ಟಿನ ಫಸಲು ಒಣಗುತ್ತಿವೆ. ಕೂಡಲೇ ಕೆಆರ್ ಎಸ್ ಅಚ್ಚುಕಟ್ಟಿನ ಎಲ್ಲ ನಾಲೆಗಳಿಗೂ ನೀರು ಹರಿಸಿ ಫಸಲು ಉಳಿಸಿ ಎಂದು ಆಗ್ರಹಿಸಿದರು.

ದಿನಕ್ಕೆ ಹತ್ತು ಗಂಟೆ ವಿದ್ಯುತ್ ನೀಡಿ

ಲಾಕ್ ಡೌನ್ ನಿಂದ ವಿದ್ಯುತ್ ಹೆಚ್ಚುವರಿ ಉಳಿತಾಯವಾಗಲಿದೆ ಎಂದು ಚೆಸ್ಕಾಂ ಹೇಳಿದೆ. ಈ ಸಂದರ್ಭದಲ್ಲಾದರೂ ರೈತರ ಪಂಪ್ ಸೆಟ್ ಗಳಲ್ಲಿ ಹಗಲು ಹತ್ತು ಗಂಟೆ ವಿದ್ಯುತ್ ನೀಡಿ ಎಂದು ಒತ್ತಾಯಿಸಿದರು.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: