ಮೈಸೂರು

ಮೈಸೂರು ನಾಗರಿಕರ ವೇದಿಕೆಯಿಂದ ದಿನಸಿ ಪದಾರ್ಥಗಳ ವಿತರಣೆ

ಮೈಸೂರು,ಏ.7-ಮೈಸೂರು ನಾಗರಿಕರ ವೇದಿಕೆ ವತಿಯಿಂದ ಇಂದು ಗಿರಿಬೋವಿಪಾಳ್ಯದ ಜೆ‌ಎಸ್ಎಸ್ ಶಾಲೆಯಲ್ಲಿ ಸಾರ್ವಜನಿಕರಿಗೆ ದಿನಸಿ ಪದಾರ್ಥಗಳನ್ನು ವಿತರಿಸಲಾಯಿತು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರು ದಿನಸಿ ಪದಾರ್ಥಗಳನ್ನು ವಿತರಿಸಿದರು. ಸುಮಾರು 3000 ಮಂದಿಗೆ 5 ಕೆಜಿ ಅಕ್ಕಿ, 1 ಕೆಜಿ ಬೇಳೆ, 1 ಕೆಜಿ ಸಕ್ಕರೆ, 1 ಕೆಜಿ ಉಪ್ಪು, ಚಹಾ ಪುಡಿ, ಅಡುಗೆ ಎಣ್ಣೆಯುಳ್ಳ ದಿನಸಿ ಪದಾರ್ಥಗಳ ಬಾಕ್ಸ್ ಅನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸುತ್ತೂರು ಶ್ರೀಗಳು, ಲಾಕ್ ಡೌನ್ ನಿಂದಾಗಿ ರೈತರು, ಕಾರ್ಮಿಕರು, ದಿನಗೂಲಿಯಿಂದಲೇ ಜೀವನ ನಡೆಸುತ್ತಿದ್ದವರ ಜೀವನ ದುಸ್ತರವಾಗಿದೆ. ಇವರಿಗೆ ಅನೇಕ ಸಂಘ ಸಂಸ್ಥೆಗಳು ಸಹಾಯ ಮಾಡುತ್ತಿದ್ದಾರೆ. ಇಂದು ಮೈಸೂರು ನಾಗರಿಕರ ವೇದಿಕೆಯವರು ಅಗತ್ಯ ದಿನಸಿ ಪದಾರ್ಥಗಳನ್ನು ನೀಡಿದ್ದಾರೆ. ಸಾರ್ವಜನಿಕರು ಸಹ ಸರ್ಕಾರ ನೀಡುತ್ತಿರುವ ಸಲಹೆ ಸೂಚನೆಗಳನ್ನು ಪಾಲಿಸಿ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಹಿಸಬೇಕು ಎಂದು ಮನವಿ ಮಾಡಿದರು.

ಲಾಕ್ ಡೌನ್ ನಿಯಮ ಉಲ್ಲಂಘನೆ: ದಿನಸಿ ಪದಾರ್ಥಗಳನ್ನು ಕೊಡುವ ವೇಳೆ ಸಾರ್ವಜನಿಕರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಮುಗ್ಗಿಬಿದ್ದ ಘಟನೆ ನಡೆಯಿತು. ಈ ವೇಳೆ ಸಾರ್ವಜನಿಕರು ನಿಯಂತ್ರಿಸಲು ಸಾಧ್ಯವಾಗದೆ ದಿನಸಿ ಪದಾರ್ಥಗಳನ್ನು ಕೆಲ ಸಮಯದ ಬಳಿಕ ನೀಡಲಾಗುವುದು ಎಂದು ಪದಾರ್ಥಗಳನ್ನು ನೀಡುವುದನ್ನು ನಿಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಮೇಯರ್ ತಸ್ನೀಂ, ಉಪ ಮೇಯರ್ ಶ್ರೀಧರ್, ನಗರಪಾಲಿಕೆ ಆಯುಕ್ತ ಗುರುದತ್ ಹೆಗಡೆ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಪಿ.ಎಸ್.ಕಾಂತರಾಜು, ಡಾ.ಸಿ.ಜಿ.ಬೆಟಸೂರ ಮಠ್, ಸಂಕಲ್ಪ ಭಟ್, ವಾಸುದೇವ ಭಟ್, ಇತರರು ಉಪಸ್ಥಿತರಿದ್ದರು. (ಎಚ್.ಎನ್, ಎಂ.ಎನ್)

Leave a Reply

comments

Related Articles

error: