ಮೈಸೂರು

ಅಂಗವಿಕಲ ಮಹಿಳೆಗೆ ಪಡಿತರ ಕಿಟ್ ವಿತರಿಸಿದ ಶಾಸಕ ಜಿ.ಟಿ.ದೇವೇಗೌಡ

ಮೈಸೂರು,ಏ.7:- ಚಾಮುಂಡೇಶ್ವರಿ ಕ್ಷೇತ್ರದ ಶಾಸಕರಾದ ಜಿ.ಟಿ.ದೇವೇಗೌಡರ ಸೂಚನೆಯ ಮೇರೆಗೆ ಮೈಸೂರು ತಾಲೂಕು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಿ.ಪಿ.ಎಲ್ ಮತ್ತು ಎಪಿಎಲ್ ಕಾರ್ಡ್ ಹೊಂದಿರದ ನಿರ್ಗತಿಕರನ್ನು ಗುರುತಿಸಲು ಹಾಗೂ ಅಂತಹವರಿಗೆ ಪಡಿತರವನ್ನು ವಿತರಿಸಲು ತಹಶೀಲ್ದಾರ್   ಮತ್ತು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳ ನೇತೃತ್ವದಲ್ಲಿ ಟಾಸ್ಕ್ ಪೋರ್ಸ್ ರಚಿಸಲಾಗಿದ್ದು, ತಂಡವು ಈಗಾಗಲೇ ಬಿ.ಪಿ.ಎಲ್ ಮತ್ತು ಎಪಿಎಲ್  ಕಾರ್ಡ್ ಹೊಂದಿರದ ನಿರ್ಗತಿಕರ ಪಟ್ಟಿಯನ್ನು ಮಾಡಲು ಕಾರ್ಯೋನ್ಮುಖವಾಗಿದೆ. ಇದಕ್ಕಾಗಿ ದಾನಿಗಳಿಂದ ಆಹಾರ ಪಡಿತರವನ್ನು ಪಡೆಯಲು ಎಂಡಿಸಿಸಿ ಬ್ಯಾಂಕ್ ನ ಮುಖ್ಯ ಶಾಖೆಯಲ್ಲಿ ಆಹಾರ ಧಾನ್ಯಗಳನ್ನು ಸ್ವೀಕರಿಸುವ ಕೇಂದ್ರವನ್ನು ತೆರೆಯಲಾಗಿದ್ದು, ಎಂ.ಡಿ.ಸಿ.ಸಿ.ಬ್ಯಾಂಕ್ ಹತ್ತಿರ ಇಂದು ಅಂಗವಿಕಲ ಮಹಿಳೆಗೆ ಶಾಸಕ ಜಿ.ಟಿ. ದೇವೇಗೌಡ ಪಡಿತರ ಕಿಟ್ ವಿತರಿಸಿದರು.

ಆಹಾರ ಧಾನ್ಯವನ್ನು ಸ್ವೀಕರಿಸುವ ಕೇಂದ್ರದಲ್ಲಿ ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ, ಆಹಾರ ಇಲಾಖೆಯ  ಅಧಿಕಾರಿಗಳ ಒಂದು ತಂಡವನ್ನು ರಚಿಸಿದ್ದು, ಈ ಅಧಿಕಾರಿಗಳ ತಂಡವು ಬೆಳಿಗ್ಗೆ ಹತ್ತು ಗಂಟೆಯಿಂದ ಸಂಜೆ6ರವರೆಗೆ ಕೇಂದ್ರದಲ್ಲಿದ್ದು, ದಾನಿಗಳಿಂದ ಆಹಾರ ಪದಾರ್ಥವನ್ನು ಸ್ವೀಕರಿಸುತ್ತಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ ಶಾಸಕರಾದ ಜಿ.ಟಿ.ದೇವೇಗೌಡ ಮತ್ತು ಎಂ.ಸಿ.ಡಿಸಿಸಿ ಬ್ಯಾಂಕ್   ಅಧ್ಯಕ್ಷರಾದ ಜಿ.ಡಿ.ಹರೀಶ್  ಗೌಡ ವೈಯುಕ್ತಿಕವಾಗಿ ಈಗಾಗಲೇ ಕ್ಷೇತ್ರದಲ್ಲಿ 37,000ಮಾಸ್ಕ್ ಗಳನ್ನು ವಿತರಿಸಿದ್ದಾರೆ. ನಿರ್ಗತಿಕರಿಗೆ ಆಹಾರ ಪದಾರ್ಥಗಳನ್ನು ವಿತರಿಸಲು 10ಟನ್ ಅಕ್ಕಿ, 4ಟನ್ ಬೇಳೆ, 3000ಲೀಟರ್ ಎಣ್ಣೆ, 3ಟನ್ ಗೋಧಿ ಹಿಟ್ಟನ್ನು ಆಹಾರ ಧಾನ್ಯಗಳನ್ನು ಸ್ವೀಕರಿಸುವ ಕೇಂದ್ರಕ್ಕೆ ನೀಡಿರುತ್ತಾರೆ. ಜೊತೆಗೆ  ಎಂಸಿಡಿಸಿಸಿ ಬ್ಯಾಂಕ್ ನೌಕರರು ಅಧ್ಯಕ್ಷರಾದ ಜಿ.ಡಿ.ಹರೀಶ್ ಗೌಡರ ನೇತೃತ್ವದಲ್ಲಿ ಆಹಾರ ಧಾನ್ಯಗಳನ್ನು ನೀಡಲು ಒಂದು ದಿನದ ವೇತನವನ್ನು ನೀಡಿದರು.

ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಹೊಂದಿರದ ನಿರ್ಗತಿಕ ಕುಟುಂಬಗಳಿಗೆ ನೀಡುವ ಸಲುವಾಗಿ ಪ್ರತಿ ಕುಟುಂಬಕ್ಕೆ ಹತ್ತು ಕೆಜಿ, ಅಕ್ಕಿ, 1ಕೆಜಿ ಬೇಳೆ, 1ಕೆ.ಜಿಗೋಧಿ ಹಿಟ್ಟು, 1ಕೆ.ಜಿ.ಉಪ್ಪು ಹಾಗೂ ಒಂದು ಲೀಟರ್ ಅಡುಗೆ ಎಣ್ಣೆಯನ್ನು ಹೊಂದಿರುವ ಒಂದು ಕಿಟ್ ನ್ನು ತಯಾರು ಮಾಡಲಾಗುತ್ತಿದೆ.

ಈ ಕಿಟ್ ಗಳನ್ನು ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಹೊಂದಿರದ ನಿರ್ಗತಿಕ ಕುಟುಂಬಗಳ ಮನೆಗಳಿಗೆ ಟಾಸ್ಕ್ ಪೋರ್ಸ್ ತಂಡ ತೆರಳಿ ವಿತರಣೆ ಮಾಡಲಿದೆ. ಗೋಪಾಲಪುರ ಗ್ರಾಮಸ್ಥರು 6ಕ್ವಿಂಟಲ್ ಅಕ್ಕಿ, 6ಕ್ವಿಂಟಲ್ ರಾಗಿಯನ್ನು ಮನೆಮನೆಗಳಿಂದ ಪಡೆದು ನೀಡಿದ್ದಾರೆ.

ಕೆಂಚಲಗೂಡು ಗ್ರಾಮದಲ್ಲಿರುವ 122 ನಿರಾಶ್ರಿತ ಕುಟುಂಬಗಳಿಗೆ ಇಂದೇ ಪಡಿತರ ಕಿಟ್ ವಿತರಿಸಲಾಯಿತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: