ಕರ್ನಾಟಕ

ಡಾ. ಬಾಬು ಜಗಜೀವನ ರಾಮ್ ಆದರ್ಶ ಪಾಲಿಸಲು ಯುವಕರಿಗೆ ಸಿಎಂ ಕರೆ

ಬೆಂಗಳೂರು (ಏ.6):  ಹಸಿರು ಕ್ರಾಂತಿ ಹರಿಕಾರ , ಮಾಜಿ ಉಪಪ್ರಧಾನ ಮಂತ್ರಿಗಳಾದ ದಿ. ಡಾ. ಬಾಬು ಜಗಜೀವನ ರಾಮ್ ಅವರ ಆದರ್ಶಗಳು, ವಿಚಾರಧಾರೆಗಳು ಎಂದೆಂದೂ ಮಾದರಿಯಾಗಿದ್ದು, ಅವರ ವಿಚಾರಧಾರೆಗಳನ್ನು ಯುವಪೀಳಿಗೆಯು ಅಧ್ಯಯನ ಮಾಡಿ, ಪಾಲಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಯುವಕರಿಗೆ ಕರೆ ನೀಡಿದರು.

ಡಾ. ಬಾಬು ಜಗಜೀವನ ರಾಮ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ಏ.5ರಂದು ವಿಧಾನಸೌಧದ ಆವರಣದಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಗೌರವ ಸಮರ್ಪಿಸಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯಾ ನಂತರ ದೇಶದಲ್ಲಿ ಆಹಾರ ಸಮಸ್ಯೆ ತಲೆದೂರಿ ಜನತೆ ತಲ್ಲಣಗೊಂಡ ಸಂದರ್ಭದಲ್ಲಿ ಸುಧಾರಿತ ಬಿತ್ತನೆ ಬೀಜಗಳ ತಳಿಗಳನ್ನು ಬಳಕೆ ಮಾಡುವ ಮೂಲಕ ಕೃಷಿ ವಲಯದಲ್ಲಿ ಪ್ರಗತಿ ಸಾಧಿಸಿ, ಹಸಿರು ಕ್ರಾಂತಿ ಮಾಡಿದರು.

ಆಹಾರ ಉತ್ಪಾದನೆಯಲ್ಲಿ ಅಪರಿಮಿತ ಸಾಧನೆಗೈದರು. ಇದರಿಂದ ಜನತೆಯ ಹಸಿವನ್ನು ನೀಗಿಸಲಾಯಿತು. ಡಾ. ಬಾಬು ಜಗಜೀವನ ರಾಮ್ ಅವರು ಹಸಿರು ಕ್ರಾಂತಿಯ ಹರಿಕಾರರೆಂದೇ ಹೆಸರುವಾಸಿಯಾದರು. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕೃಷಿ ಸಚಿವರಾಗಿ ಅಮೋಘ ಸೇವೆ ಸಲ್ಲಿಸಿದ್ದಾರೆ. ಕೇಂದ್ರ ರಕ್ಷಣಾ ಸಚಿವರಾಗಿ ಮಾಡಿದ ಸಾಧನೆ ಉಲ್ಲೇಖನೀಯವಾದುದು. ರೈತ ಮತ್ತು ಯೋಧ ಇವರ ಸಲುವಾಗಿ ಅವರು ಶ್ರಮಿಸಿದ ಶ್ರಮ ಅಪರಿಮಿತವಾದುದು. ಕೃಷಿ, ರಕ್ಷಣಾ ವಲಯದಲ್ಲಿ ಅವರ ಮಾರ್ಗದರ್ಶನ, ನಾಯಕತ್ವ ಅವಿಸ್ಮರಣೀಯವಾದುದು.

ಅವರು ದೇಶ ಕಂಡ ಅಪರೂಪದ ರಾಷ್ಟ್ರ ನಾಯಕರಾಗಿದ್ದಾರೆ. ಅವರು ಶೋಷಿತರ ಹಕ್ಕಿಗಾಗಿ ನಿರಂತರ ಶ್ರಮವಹಿಸಿ, ಶೋಷಿತರ ಏಳಿಗಾಗಿ ಅಪಾರವಾಗಿ ಶ್ರಮಿಸಿ ಶೋಷಿತರ ಆಶಾಕಿರಣವಾಗಿದ್ದಾರೆ. ಯುವ ಪೀಳಿಗೆಯು ಡಾ. ಬಾಬು ಜಗಜೀವನ ರಾಮ್ ಅವರ ಕುರಿತು ಅಧ್ಯಯನ ಮಾಡಿ, ಅವರ ಆದರ್ಶಗಳನ್ನು ಅನುಸರಿಸಬೇಕು. ಅವರ ಸಾಮಾಜಿಕ ಮತ್ತು ರಾಜಕೀಯ ವಿಚಾರಧಾರೆಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿಯವರು ತಿಳಿಸಿದರು.

ಉಪಮುಖ್ಯಮಂತ್ರಿಯವರಾದ ಗೋವಿಂದ ಎಂ ಕಾರಜೋಳ, ವಸತಿ ಸಚಿವರಾದ ವಿ. ಸೋಮಣ್ಣ ಅವರು ಡಾ. ಬಾಬು ಜಗಜೀವನ ರಾಮ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಸಂಸದ ನಾರಾಯಣ ಸ್ವಾಮಿ, ಮಾಜಿ ಸಚಿವ ಹೆಚ್. ಆಂಜನೇಯ, ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ. ವಿಜಯಬಾಸ್ಕರ್,ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕುಮಾರ ನಾಯಕ್, ಸಲಹೆಗಾರರಾದ ಇ. ವೆಂಕಟಯ್ಯ, ಆಯುಕ್ತರಾದ ಪೆದ್ದಪ್ಪಯ್ಯ, ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾದ ಅನಿಲ್ ಕುಮಾರ್, ಬಾಬು ಜಗಜೀವನರಾಮ್ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ. ಹೆಚ್. ನಟರಾಜ್, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ನಿರ್ದೇಶಕ ಸಂಗಪ್ಪ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಹಣಾಧಿಕಾರಿ ಶ್ರೀ ರಾಘವೇಂದ್ರ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಮಗದ ವ್ಯವಸ್ಥಾಪಕ ನಿರ್ದೇಶಕ ಹನುಮನರಸಯ್ಯ, ಉಪಮುಖ್ಯಮಂತ್ರಿಯರವ ಆಪ್ತಕಾರ್ಯದರ್ಶಿ ವಿ. ಶ್ರೀನಿವಾಸ, ಅಪರ ನಿರ್ದೇಶರಾದ ನಾಗೇಶ್ ಮತ್ತು ಶ್ರೀಮತಿ ಸತ್ಯಶ್ರೀ, ವಿವಿಧ ಪರಿಶಿಷ್ಟ ಜಾತಿ ಮತ್ತು ಪಂಗಡದ ಹಾಗೂ ಪ್ರಗತಿ ಪರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. (ಎನ್.ಬಿ)

Leave a Reply

comments

Related Articles

error: