ದೇಶ

ಮಲೇರಿಯಾ ಔಷಧಿ ರಫ್ತಿನ ಮೇಲಿನ ನಿಷೇಧ ತೆರವುಗೊಳಿಸಿದ ಭಾರತ

ನವದೆಹಲಿ​,ಏ.7-ಮಾರಣಾಂತಿಕ ಕೊರೊನಾ ವೈರಸ್ ಗೆ ಅಮೆರಿಕಾ ತತ್ತರಿಸಿ ಹೋಗಿದೆ. ಕೊರೊನಾ ವೈರಸ್ ಸೋಂಕಿಗೆ ಮಲೇರಿಯಾ ನಿಯಂತ್ರಣಕ್ಕೆ ಬಳಸುವ ಹೈಡ್ರೋಕ್ಸಿಕ್ಲೋರೋಕ್ವಿನ್​ ಔಷಧಿ ಪರಿಣಾಮಕಾರಿ ಎಂದು ಮನಗಂಡಿರುವ ಅಮೆರಿಕಾ ಅದನ್ನು ರಫ್ತು ಮಾಡುವಂತೆ ಭಾರತಕ್ಕೆ ಮನವಿ ಮಾಡಿದೆ.

ಜೊತೆಗೆ ಭಾರತ ಸರ್ಕಾರ ಅಮೆರಿಕಾಕ್ಕೆ ಹೈಡ್ರೋಕ್ಸಿಕ್ಲೋರೋಕ್ವಿನ್​ ಔಷಧಿ ರಫ್ತು ಮಾಡದಿದ್ದರೆ, ಅಮೆರಿಕಾ ಕೂಡ ಇದಕ್ಕೆ ತಕ್ಕ ತಿರುಗೇಟು ನೀಡುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದರು.

ಇದೀಗ ಅಮೆರಿಕಾ ಅಧ್ಯಕ್ಷರ ಮನವಿಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿರುವ ಭಾರತ ಹೈಡ್ರೋಕ್ಸಿಕ್ಲೋರೋಕ್ವಿನ್​ ಔಷಧವನ್ನು ಅಮೆರಿಕಾಕ್ಕೆ ರಫ್ತು ಮಾಡುತ್ತದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ವಿದೇಶಾಂಗ ವ್ಯವಹಾರಗಳ ಇಲಾಖೆ ವಕ್ತಾರ ಅನುರಾಗ್​ ಶ್ರೀವಾಸ್ತವಾ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಕೊರೊನಾ ವೈರಸ್​ ವಿರುದ್ಧ ಪರಿಣಾಮಕಾರಿಯಾಗಿರುವ ಹೈಡ್ರೋಕ್ಸಿಕ್ಲೋರೋಕ್ವಿನ್​ ಸೇರಿ ಅಗತ್ಯ ಔಷಧಗಳನ್ನು ನಾವು ನೆರೆ ರಾಷ್ಟ್ರಗಳಿಗೆ ಕಳಿಸುತ್ತೇವೆ. ಈ ಮೂಲಕ ಸಾಂಕ್ರಾಮಿಕ ರೋಗದಿಂದ ಪಾರಾಗಲು ಸಹಕರಿಸುತ್ತೇವೆ. ಹಾಗೇ ಇದೇ ವಿಚಾರವಿಟ್ಟುಕೊಂಡು ರಾಜಕೀಯ ಮಾಡುವುದನ್ನು, ಊಹಾಪೋಹಗಳನ್ನು ಹಬ್ಬಿಸುವುದನ್ನು ಖಂಡಿತ ಇಷ್ಟಪಡುವುದಿಲ್ಲ ಎಂದಿದ್ದಾರೆ. ಈ ಮೂಲಕ ಟ್ರಂಪ್​ಗೂ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.

ಕೊರೊನಾ ವೈರಸ್​ ಸಾಂಕ್ರಾಮಿಕ ತೀವ್ರವಾಗಿ ಬಾಧಿಸುತ್ತಿರುವ ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಗ್ಗಟ್ಟಾಗಿರಬೇಕು ಎಂಬುದನ್ನು ಭಾರತ ಮೊದಲಿನಿಂದಲೂ ಹೇಳುತ್ತಾ ಬಂದಿದೆ. ಮಾನವೀಯತೆಯ ನೆಲೆಗಟ್ಟಿನ ಮೇಲೆ ಭಾರತ ಇತರ ನೆರೆ ರಾಷ್ಟ್ರಗಳಿಗೆ ಹೈಡ್ರೋಕ್ಸಿಕ್ಲೋರೋಕ್ವಿನ್ ಮತ್ತು ಪ್ಯಾರೆಸಿಟಮಾಲ್ ಕಳಿಸಲಿದೆ ಎಂದಿದ್ದಾರೆ. ಹಾಗೇ ಈ ವಿಚಾರದಲ್ಲಿ ಅನಗತ್ಯ ವಿವಾದ ಸೃಷ್ಟಿಸುವ ಅಗತ್ಯವೂ ಇಲ್ಲ ಎಂದಿದ್ದಾರೆ.

ಇನ್ನು ಹೈಡ್ರೋಕ್ಸಿಕ್ಲೋರೋಕ್ವಿನ್ ರಫ್ತು ನಿಷೇಧ ಮಾಡಿದ್ದರ ಬಗ್ಗೆ ಮಾತನಾಡಿದ ಅವರು, ಎಲ್ಲ ಜವಾಬ್ದಾರಿಯುತ ಸರ್ಕಾರಗಳ ಮೊದಲ ಆದ್ಯತೆ ನಮ್ಮ ದೇಶ ಮತ್ತು ಜನರು. ಈಗ ಭಾರತದಲ್ಲೂ ಕೊರೊನಾ ದಿನೇ ದಿನೇ ಹೆಚ್ಚುತ್ತಿದೆ. ಹೀಗಿರುವಾಗ ಔಷಧ ಸಂಗ್ರಹವೂ ಮುಖ್ಯವೇ. ಅದೇ ಕಾರಣಕ್ಕೆ ರಫ್ತು ನಿಷೇಧ ಮಾಡಲಾಗಿತ್ತು ಎಂದರು.

ಕೊರೋನಾ ವೈರಸ್ ಸೋಂಕಿಗೆ ಸಂಬಂಧಿಸಿದಂತೆ ಅಮೆರಿಕಾದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಟಾಸ್ಕ್ ಫೋರ್ಸ್ ಸಭೆಯಲ್ಲಿ ಮಾತನಾಡಿ ಟ್ರಂಪ್, ಭಾರತಕ್ಕೆ ಅಮೆರಿಕಾದ ಬಗ್ಗೆ ತಿಳಿದಿದೆ. ಭಾರತ, ಅಮೆರಿಕಾಕ್ಕೆ ಹೈಡ್ರೋಕ್ಸಿಕ್ಲೋರೋಕ್ವಿನ್ ಔಷಧಿ ರಫ್ತು ಮಾಡುತ್ತದೆ ಎಂಬ ವಿಶ್ವಾಸವಿದೆ. ನಾನು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿದ್ದು, ಔಷಧಿ ರಫ್ತು ಮೇಲಿನ ನಿಷೇಧವನ್ನು ತೆರವುಗೊಳಿಸುವಂತೆ ಕೇಳಿದ್ದೇನೆ. ಅಲ್ಲದೆ ಅಮೆರಿಕಾಕ್ಕೆ ಅತೀ ಹೆಚ್ಚಿನ ಪ್ರಮಾಣದಲ್ಲಿ ಔಷಧಿ ರಫ್ತು ಮಾಡುವಂತೆ ಕೇಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರೂ ಕೂಡ ಈ ಬಗ್ಗೆ ಸಕಾರಾತ್ಮಕವಾಗಿ ಮಾತನಾಡಿದ್ದಾರೆ. ಒಂದು ವೇಳೆ ಭಾರತ ಔಷಧಿ ರಫ್ತು ಮಾಡದಿದ್ದರೂ ನಮಗೆ ಅಚ್ಚರಿಯೇನಿಲ್ಲ. ನಾವು ಇದಕ್ಕೆ ಪರ್ಯಾಯ ಮಾರ್ಗ ಹುಡುಕಿದ್ದೇವೆ. ಅಂತೆಯೇ ಭಾರತಕ್ಕೆ ಈ ಕುರಿತ ತಕ್ಕ ತಿರುಗೇಟು ನೀಡುತ್ತೇವೆ ಎಂದು ಹೇಳಿದ್ದರು.

ಇನ್ನು ಹೈಡ್ರೋಕ್ಸಿಕ್ಲೋರೋಕ್ವಿನ್ ಔಷಧಿಗಾಗಿ ಅಮೆರಿಕ ಸೇರಿದಂತೆ ವಿಶ್ವದ 30ಕ್ಕೂ ಅಧಿಕ ರಾಷ್ಟ್ರಗಳು ಭಾರತಕ್ಕೆ ದುಂಬಾಲು ಬೀಳುತ್ತಿವೆ. ಕೊರೋನಾ ವೈರಸ್ ಗೆ ರಾಮಬಾಣವಾಗಿ ಮಲೇರಿಯಾ ಔಷಧ ಕೆಲಸ ಮಾಡುತ್ತದೆ ಎಂದು ಆರೋಗ್ಯ ಇಲಾಖೆ, ಆರೋಗ್ಯ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಭಾರತ ಸರ್ಕಾರ ಈ ಔಷಧಿಯ ರಫ್ತು ಮಾಡುವುದನ್ನು ನಿಷೇಧಿಸಿತ್ತು.

ಹೈಡ್ರಾಕ್ಸಿಕ್ಲೋರೋಕ್ವಿನ್ ತಯಾರಿಕೆಯಲ್ಲಿ ಭಾರತ ಮುಂಚೂಣಿಯಲ್ಲಿದ್ದು, ಈ ಔಷಧಿ ರಫ್ತು ಮಾಡುವ ದೇಶಗಳ ಪಟ್ಟಿಯಲ್ಲಿ ಭಾರತ ಪ್ರಮುಖಸ್ಥಾನದಲ್ಲಿದೆ. ಈ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯು ನೊವೆಲ್ ಪಥಗಾನ್ ನಂತಹ ರೋಗಾಣುಗಳ ಮೇಲೆ ಪರಿಣಾಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. (ಎಂ.ಎನ್)

Leave a Reply

comments

Related Articles

error: