ಕರ್ನಾಟಕಪ್ರಮುಖ ಸುದ್ದಿ

ಮಂಡ್ಯ, ಗದಗದಲ್ಲಿ ಮೊದಲ ಕೊರೊನಾ ಸೋಂಕು ದೃಢ: ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 175ಕ್ಕೆ ಏರಿಕೆ

ಬೆಂಗಳೂರು,ಏ.7-ಮಂಡ್ಯ ಹಾಗೂ ಗದಗದಲ್ಲಿ ಇದೇ ಮೊದಲ ಬಾರಿಗೆ ಕೊರೊನಾ ವೈರಸ್ ಪ್ರಕರಣಗಳು ದೃಢಪಟ್ಟಿವೆ. ರಾಜ್ಯದಲ್ಲಿ ಹೊಸದಾಗಿ 12 ಜನರಿಗೆ ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಇದರಿಂದಾಗಿ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 175ಕ್ಕೆ ಏರಿಕೆಯಾಗಿದೆ.

ಹೊಸದಾಗಿ ಬೆಳಕಿಗೆ ಬಂದ 12 ಪ್ರಕರಣಗಳಲ್ಲಿ 3 ಮಂಡ್ಯ ಜಿಲ್ಲೆಗೆ ಸೇರಿದ್ದರೆ, 2 ಕೇಸ್‌ಗಳು ಕಲಬುರಗಿಯಿಂದ ವರದಿಯಾಗಿವೆ. ಬಾಗಲಕೋಟೆಯಲ್ಲಿ ಮತ್ತೆರಡು ಪ್ರಕರಣಗಳು ವರದಿಯಾಗಿದ್ದು, ಗದಗದಲ್ಲಿ 1, ಬೆಂಗಳೂರಿನಲ್ಲಿ 3 ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ 1 ಪ್ರಕರಣ ದೃಢಪಟ್ಟಿದೆ.

ಜಿಲ್ಲೆಯ ಮಳವಳ್ಳಿ ತಾಲೂಕಿನ ಮೂರು ಮಂದಿಗೆ ಕೊರೋನಾ ಸೋಂಕು ಇರುವುದು ಇಂದು ದೃಢಪಟ್ಟಿದೆ. ಇದರಿಂದ ಜನರಲ್ಲಿ ಆತಂಕ ಮನೆ ಮಾಡಿದೆ. ಈ ಮೂವರು ಸೋಂಕಿತರು ಸಹ ದೆಹಲಿಯ ತಬ್ಲಿಘೀ ಜಮಾತ್​ನಲ್ಲಿ ಭಾಗಿಯಾಗಿದ್ದ ಧರ್ಮಗುರುಗಳ ಸಂಪರ್ಕದಲ್ಲಿದ್ದವರು ಎಂದು ತಿಳಿದು ಬಂದಿದೆ. ಮಳವಳ್ಳಿಯ ಒಟ್ಟು 7 ಮಂದಿ ಧರ್ಮಗುರುಗಳ ಸಂಪರ್ಕದಲ್ಲಿದ್ದರು. 7 ಜನರಲ್ಲಿ ಮೂವರಿಗೆ ಕೊರೊನಾ ಸೋಂಕು ತಗುಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿಯ ನಿಜಾಮುದ್ದೀನ್​ ಮಸೀದಿಯಿಂದ 10 ಜನ ಧರ್ಮಗುರುಗಳು ಮಂಡ್ಯದ ಮಳವಳ್ಳಿಗೆ ಆಗಮಿಸಿದ್ದರು. ಮಾರ್ಚ್ 23ರಿಂದ 30ರವರೆಗೆ ಮಳವಳ್ಳಿಯಲ್ಲೇ ಈ ಧರ್ಮಗುರುಗಳು ತಂಗಿದ್ದರು. ಇವರ ಜೊತೆ ಮಳವಳ್ಳಿಯ 7 ಮಂದಿ ಮುಸ್ಲಿಂಮರು ಸಂಪರ್ಕದಲ್ಲಿದ್ದರು. ಈ 7 ಜನರ ಪೈಕಿ ಮೂವರಿಗೆ ಕೊರೊನಾ ಹರಡಿದೆ ಎಂಬುದು ದೃಢಪಟ್ಟಿದೆ.

ಬಾಗಲಕೋಟೆ ಜಿಲ್ಲೆಯಲ್ಲಿ ಮುಧೋಳದ 33 ವರ್ಷದ ಪುರುಷ, 45 ವರ್ಷದ ಮಹಿಳೆಗೆ ಸೋಂಕು ತಗುಲಿದೆ. ಮುಧೋಳದ ವ್ಯಕ್ತಿ ದಿಲ್ಲಿಯ ತಬ್ಲೀಗ್‌ ಜಮಾತ್‌ನಲ್ಲಿ ಭಾಗವಹಿಸಿ ಬಂದಿದ್ದರು. ಬಾಗಲಕೋಟೆಯ ಆಸ್ಪತ್ರೆಯಲ್ಲಿ ಇವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಹಿಳೆಯು 125ನೇ ರೋಗಿಯ ನೆರೆಮನೆಯವರಾಗಿದ್ದಾರೆ. ಇವರನ್ನು ಬಾಗಲಕೋಟೆಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗದಗದಲ್ಲಿ 80 ವರ್ಷದ ಮಹಿಳೆಗೆ ಸೋಂಕು ತಗುಲಿದ್ದು, ಇವರಿಗೆ ಸೋಂಕು ಹೇಗೆ ಬಂದಿದ್ದು ಎಂಬುದು ತಿಳಿದು ಬಂದಿಲ್ಲ. ಆದರೆ ತೀವ್ರ ಉಸಿರಾಟದ ಸೋಂಕಿನ ಇತಿಹಾಸ ಇವರಿಗಿದೆ. ಜಿಲ್ಲೆಯ ಆಸ್ಪತ್ರೆಯಲ್ಲಿ ಇವರು ಚಿಕಿತ್ಸೆಗೆ ದಾಖಲಾಗಿದ್ದಾರೆ.

ಬೆಂಗಳೂರಿನ 29, 50 ವರ್ಷದ ಇಬ್ಬರಲ್ಲಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸೇರಿದ 35 ವರ್ಷದ ವ್ಯಕ್ತಿಯುಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಇವರು ದಿಲ್ಲಿ ತಬ್ಲೀಗ್‌ ಜಮಾತ್‌ನಲ್ಲಿ ಪಾಲ್ಗೊಂಡವರಾಗಿದ್ದಾರೆ. ಮೂವರಿಗೂ ಬೆಂಗಳೂರು ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಂಗಳೂರಿನವರೇ ಆದ 68 ವರ್ಷದ ವ್ಯಕ್ತಿಗೆ ಸೋಂಕು ತಗುಲಿದ್ದು, ದುಬೈಗೆ ಪ್ರಯಾಣ ಬೆಳೆಸಿದ ಹಿನ್ನೆಲೆ ಇವರಿಗಿದೆ. ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಕಲಬುರಗಿಯ 28 ವರ್ಷದ ಮಹಿಳೆ ಮತ್ತು 57 ವರ್ಷದ ಪುರುಷನಿಗೆ ಸೋಂಕು ತಗುಲಿದೆ. 28 ವರ್ಷದ ಮಹಿಳೆಯು 125ನೇ ರೋಗಿಯ ಸೊಸೆಯಾಗಿದ್ದಾರೆ. (ಎಂ.ಎನ್)

 

 

Leave a Reply

comments

Related Articles

error: