ಪ್ರಮುಖ ಸುದ್ದಿ

ಲಾಕ್ ಡೌನ್ ನಿಂದ ಮಾರುಕಟ್ಟೆ ತಲುಪದ ಕಲ್ಲಂಗಡಿ : ಔಷಧ ಸಿಂಪಡಿಸಿ ಹಣ್ಣು ಕೊಳೆಯವಂತೆ ಮಾಡಿ ಆರೋಗ್ಯವಂತ ಸಮಾಜ‌ ನಿರ್ಮಾಣಕ್ಕೆ  ಮುಂದಾದ ರೈತ

ರಾಜ್ಯ(ಮಂಡ್ಯ)ಏ..7:-ಕೇಳೋರೆ ಇಲ್ಲಾ ರೈತರ ಗೋಳು. ಲಕ್ಷಾಂತರ ರೂಪಾಯಿ ಕಲ್ಲಂಗಡಿ ಹಣ್ಣು ನಾಶ. ಉಚಿತವಾಗಿ ಊರುಗಳಿಗೆ ಹಂಚೋದಕ್ಕೂ ಅವಕಾಶ ಮಾಡಿಕೊಡ್ತಿಲ್ಲ, ಅತ್ತ ಮಾರುಕಟ್ಟೆಯಲ್ಲೂ ಕೇಳೋರಿಲ್ಲ…!, ಇತ್ತ ವ್ಯಾಪಾರ ಮಾಡೋದಕ್ಕೂ ಆಗ್ತಿಲ್ಲ…! ರೈತರ ಸಂಕಷ್ಟಕ್ಕೆ ಬಾರದ ಅಧಿಕಾರಿಗಳು,‌ ಜನಪ್ರತಿನಿಧಿಗಳು, ತಾಲೂಕು ಆಡಳಿತದ ದಿವ್ಯ ನಿರ್ಲಕ್ಷ್ಯಕ್ಕೆ ರೈತನ ಆಕ್ರೋಶ, ಜಮೀನಿನ ಬಳಿ ಸುರಿದು ಕಲ್ಲಂಗಡಿ ಕೊಳೆಯುವಂತೆ ಔಷಧಿ ಸಿಂಪಡಿಸಿದ ರೈತ. ಕೊರೋನಾದ ನಡುವೆಯೂ ಆರೋಗ್ಯವಂತ ಸಮಾಜ‌ ನಿರ್ಮಾಣಕ್ಕೆ   ರೈತ ಮುಂದಾಗಿದ್ದಾನೆ.

ಎಂಟು ಎಕರೆಯಲ್ಲಿ  ಕಲ್ಲಂಗಡಿ ಹಣ್ಣು ಬೆಳೆದ ರೈತನ ಬದುಕು ಬೀದಿಗೆ ಬಿದ್ದಿದೆ. ಲಕ್ಷಾಂತರ ರೂಪಾಯಿ‌ ಖರ್ಚು ಮಾಡಿ ಲಾಭದ ನಿರೀಕ್ಷೆಯಲ್ಲಿದ್ದ  ಮಂಡ್ಯ‌ ಜಿಲ್ಲೆ ಪಾಂಡವಪುರ ತಾಲೂಕು ರಂಗನಕೊಪ್ಪಲು ರೈತ ಶಂಕರೇಗೌಡರ ಕನಸು ನುಚ್ಚು‌ ನೂರಾಗಿದೆ. ಕೊರೋನಾ ಮಹಾಮಾರಿಯಿಂದಾಗಿ ತಾನು ಬೆಳೆದ ಬೆಳೆಗೆ ಸರಿಯಾದ ಲಾಭ ಸಿಗದೆ ರೈತ ಶಂಕರೇಗೌಡ ಕಂಗಾಲಾಗಿದ್ದಾರೆ.  ಜಮೀನಿನಲ್ಲಿ ಬೆಳೆ‌ ಕಟಾವಿಗೆ ಕೆಲಸಗಾರರು ಬಾರದ ಸ್ಥಿತಿಯಲ್ಲೂ ತಮ್ಮ‌ ಮನೆಯವರೇ ಸೇರಿ ಬೆಳೆ ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸಿದ್ದಾರೆ. ಆದರೆ,‌ಮಾರುಕಟ್ಟೆಯಲ್ಲಿ ಕೊಂಡುಕೊಳ್ಳುವವರಿಲ್ಲದೆ ರೈತ ಬೇಸರಗೊಂಡು ವಾಪಸ್ಸು ಊರಿಗೆ ತಂದಿದ್ದಾರೆ. ಇದೇ ವೇಳೆ ಬೆಳೆ ನಾಶ ಮಾಡಲು ಮನಸು ಬಾರದೆ ಕೆಲ ಹಳ್ಳಿಗಳಿಗೆ  ತೆರಳಿ ಹಂಚಲು ಮುಂದಾಗಿದ್ದಾರೆ. ಆದರೆ, ಹಂಚುವ ವೇಳೆ ಜನರು ನೂಕು ನುಗ್ಗಲು ಉಂಟಾಗಿ ಸಾಮಾಜಿಕ ಅಂತರದ ಸಮಸ್ಯೆ ಉಂಟಾಗಬಹುದೆಂದು ಹೇಳಿದ‌ ಕಾರಣಕ್ಕೆ ಅದಕ್ಕೂ ಅವಕಾಶ ಸಿಗದೆ ತಮ್ಮ ಜಮೀನಿನಲ್ಲೇ ಸುರಿದು ಕೀಟ ನಾಶಕ ಹಾಕಿ ಕೊಳೆಯುವಂತೆ ಮಾಡುತ್ತಿದ್ದಾರೆ. ರಸ್ತೆಯಲ್ಲೋ ಅಥವಾ ಬೇರೆಡೆ ಸುರಿದರೆ ಕಲ್ಲಂಗಡಿಯ ಸಿಹಿಗೆ ನೊಣಗಳು ಹಾಗೂ ಕೊಳೆತ ಮೇಲೆ‌ ಹುಳುಗಳು ಉತ್ಪತ್ತಿಯಾಗಿ ಆರೋಗ್ಯದ ಸಮಸ್ಯೆ ಕಾಡಬಹುದು ಎಂಬ ಕಾರಣಕ್ಕೆ ಹಣ್ಣುಗಳು ಕೊಳೆಯುವ ಕೀಟನಾಶಕ ಸಿಂಪಡಿಸಿ ಜನರ‌ ಆರೋಗ್ಯದ ಕಡೆಗೂ ಗಮನ ಹರಿಸಿದ್ದಾರೆ. ಇಷ್ಟಾದರೂ ಜಿಲ್ಲಾಡಳಿತವಾಗಲಿ, ತಾಲೂಕು ಆಡಳಿತವಾಗಲಿ, ಜನಪ್ರತಿನಿಧಿಗಳಾಗಲಿ ರೈತನ‌ ನೆರವಿಗೆ ಬಾರದಿರುವುದು ರೈತನಿಗೆ ಬೇಸರ ಮೂಡಿಸಿದೆ. ಸ್ಥಳೀಯ ಗ್ರಾಮ‌ ಪಂಚಾಯತ್ ಅಧಿಕಾರಿಗಳು ಈ ವಿಷಯ ಗೊತ್ತಿದ್ದರೂ  ಕನಿಷ್ಠ  ಭರವಸೆಯನ್ನೂ‌ ನೀಡಿಲ್ಲ. ಬೇರೆಯವರಿಗೆ ತಿನ್ನಲು ಅವಕಾಶ ಮಾಡಿಕೊಡ್ತಿಲ್ಲ ಅಂತ ಬೇಸರ ವ್ಯಕ್ತಪಡಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: