ಪ್ರಮುಖ ಸುದ್ದಿವಿದೇಶ

ಚೀನಾದ ವುಹಾನ್ ನಲ್ಲಿ 76 ದಿನಗಳ ಬಳಿಕ ಲಾಕ್‌ಡೌನ್ ತೆರವು

ವುಹಾನ್,(ಚೀನಾ),ಏ.8-ಮಾರಣಾಂತಿಕ ಕೊರೊನಾ ವೈರಸ್ ವಿಶ್ವದಲ್ಲೇ ಮೊದಲ ಬಾರಿಗೆ ಕಾಣಿಸಿಕೊಂಡ ಚೀನಾದ ವುಹಾನ್ ನಗರದಲ್ಲಿ ಲಾಕ್ ಡೌನ್ ತೆರವುಗೊಳಿಸಲಾಗಿದೆ. ಬರೋಬ್ಬರಿ 76 ದಿನಗಳ ಬಳಿಕ ಜನರು ಮನೆಯಿಂದ ಹೊರಗೆ ಬಂದಿದ್ದಾರೆ.

76 ದಿನಗಳಿಂದ ಮನೆಯೊಳಗೆ ಬಂಧಿಗಳಾಗಿದ್ದ ಜನರು ಈಗ ರಸ್ತೆಗೆ ಇಳಿದಿದ್ದಾರೆ. ವುಹಾನ್ ನಗರದಲ್ಲಿ ಈಗ ಸ್ಥಳೀಯ ಸಾರಿಗೆಗೆ ಅವಕಾಶ ಕಲ್ಪಿಸಲಾಗಿದೆ. ಅಂಗಡಿ ಮುಂಗಟ್ಟುಗಳಿಗೆ, ಸಣ್ಣಪುಟ್ಟ ವ್ಯಾಪಾರದಿಂದ ಆರಂಭವಾಗಿ ಬೃಹತ್ ಪ್ರಮಾಣದ ವ್ಯಾಪಾರಗಳಿಗೆ ಅವಕಾಶ ನೀಡಲಾಗಿದೆ.

ಲಾಕ್‌ಡೌನ್ ತೆರವುಗೊಳಿಸಿದ್ದರೂ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿರುವ ಚೀನಾ ಸರ್ಕಾರ ಪ್ರತಿಯೊಬ್ಬರೂ ಆರೋಗ್ಯಕ್ಕೆ ಸಂಬಂಧಿಸಿದ ನಿಯಮಗಳನ್ನು ಪಾಲಿಸುವಂತೆ ಆದೇಶ ಹೊರಡಿಸಿದೆ. ಚೀನಾ ಹುಬೇ ನಗರದಲ್ಲಿ ಮಾರ್ಚ್ 25ರಂದು ಲಾಕ್‌ಡೌನ್ ತೆರವುಗೊಳಿಸಲಾಗಿತ್ತು. ಆದರೆ, ಅತ್ಯಂತ ಹೆಚ್ಚು ಸಾವು ಕಂಡು ಬಂದ ವುಹಾನ್ ನಗರದಲ್ಲಿ ಲಾಕ್‌ಡೌನ್ ಮುಂದುವರಿಸಲಾಗಿತ್ತು.

ಚೀನಾ ಸರ್ಕಾರ ಪ್ರತಿಯೊಬ್ಬರಿಗೂ ಕ್ಯುಆರ್ ಕೋಡ್ ನೀಡಿದೆ. ಇದು ಅವರ ಆರೋಗ್ಯದ ಸ್ಥಿತಿಯನ್ನು ತಿಳಿಸಲಿದೆ. ಹಸಿರು ಬಣ್ಣದ ಕ್ಯುಆರ್ ಕೋಡ್ ನೀಡಿರುವ ವ್ಯಕ್ತಿಗಳು ಉತ್ತಮ ಆರೋಗ್ಯ ಹೊಂದಿದವರಾಗಿದ್ದು, ಕೆಲವು ನಿಯಮಗಳನ್ನು ಪಾಲಿಸಿ ಹೊರಗೆ ತಿರುಗಾಡಬಹುದು. ಇತರೆ ನಗರಗಳಿಗೆ ತೆರಳಬಹುದು.

ಇದೇ ಆಧಾರದಲ್ಲಿ 55 ಸಾವಿರ ಮಂದಿ ಹಸಿರು ಕ್ಯುಆರ್ ಕೋಡ್ ಹೊಂದಿದ್ದು ರೈಲಿನ ಮೂಲಕ ವುಹಾನ್ ನಗರದಿಂದ ಚೀನಾದ ಇತರ ಕಡೆಗಳಿಗೆ ಪ್ರಯಾಣಿಸಿದ್ದಾರೆ ಎಂದು ಸ್ಥಳೀಯ ರೈಲ್ವೆ ಇಲಾಖೆಯ ವರದಿಗಳು ತಿಳಿಸಿವೆ.

ಸೋಂಕು ತಡೆಗಟ್ಟಲು ಲಾಕ್‌ಡೌನ್ ಪರಿಣಾಮಕಾರಿ ಮಾರ್ಗ ಎಂಬುದನ್ನು ಅರಿತ ಚೀನಾ ಇದನ್ನು ಅನುಸರಿಸಲು ಅತ್ಯಂತ ಕಠಿಣವಾದರೂ 76 ದಿನಗಳ ಕಾಲ ಲಾಕ್‌ಡೌನ್ ಜಾರಿಗೊಳಿಸಿ ಕೊರೊನಾ ಸೋಂಕು ತಡೆಗಟ್ಟುವಲ್ಲಿ ಯಶಸ್ವಿಯಾಗಿದೆ. ಜನವರಿಯಿಂದ ಆರಂಭವಾಗಿದ್ದ ಲಾಕ್‌ಡೌನ್ ನಿಂದಾಗಿ ವುಹಾನ್ ನಗರದಲ್ಲಿ ಜನ ಮನೆಯೊಳಗೆ ಬಂಧಿಗಳಾಗಿದ್ದರು. (ಎಂ.ಎನ್)

Leave a Reply

comments

Related Articles

error: