ಕರ್ನಾಟಕಪ್ರಮುಖ ಸುದ್ದಿ

ತಬ್ಲೀಗ್ ಜಮಾತ್‍ನ 19 ಜನರ ವಿರುದ್ಧ ಎಫ್‌ಐಆರ್

ವೀಸಾ ನಿಯಮ ಉಲ್ಲಂಘಿಸಿ ಬೆಂಗಳೂರಲ್ಲಿ ವಿವಿಧ ದೇಶದ ಪ್ರಜೆಗಳ ಓಡಾಟ!

ಬೆಂಗಳೂರು (ಏ.8): ತಬ್ಲೀಗ್ ಜಮಾತ್ ಧಾರ್ಮಿಕ ಸಭೆಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ 19 ಜನರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲು ಮಾಡಿದ್ದಾರೆ. ಸಭೆಗೆ ಜನರನ್ನು ಸಂಘಟಿಸಲು ನಗರದಲ್ಲಿ ಇವರು ಸಂಚಾರ ನಡೆಸಿದ್ದರು ಎಂಬ ಮಾಹಿತಿ ಸಿಕ್ಕಿದೆ.

ಇಂಡೋನೇಷಿಯಾ ಸೇರಿದಂತೆ ವಿವಿಧ ದೇಶಗಳ 19 ಪ್ರಜೆಗಳ ವಿರುದ್ಧ ಜಗಜೀವನ್‌ರಾಮ್ ನಗರ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಂಡಿದ್ದಾರೆ. ವೀಸಾ ನಿಯಮಗಳನ್ನು ಉಲ್ಲಂಘನೆ ಮಾಡಿದ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಮಾರ್ಚ್ 9ರಂದು ಬೆಂಗಳೂರಿಗೆ ಬಂದಿದ್ದ ಇವರು ಮಾರ್ಚ್ 16ರ ತನಕ ನಗರದಲ್ಲಿ ಸಂಚಾರ ನಡೆಸಿದ್ದರು. ನವದೆಹಲಿಯ ಮರ್ಕಜ್ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ತಬ್ಲೀಗ್ ಜಮಾತ್ ಧಾರ್ಮಿಕ ಸಭೆಗೆ ಜನರನ್ನು ಸಂಘಟಿಸಿದ್ದರು. ಪಾದರಾಯನಪುರ ವ್ಯಾಪ್ತಿಯಲ್ಲಿ ಬರುವ ಮಸೀದಿಯಲ್ಲಿ ವಾಸ್ತವ್ಯ ಹೂಡಿದ್ದರು ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಕೇಂದ್ರ ಸರ್ಕಾರ ನೀಡಿದ ಮಾಹಿತಿ ಅನ್ವಯ ಬಿಬಿಎಂಪಿ ಇವರನ್ನು ಪತ್ತೆ ಹಚ್ಚಿದ್ದು, ಕ್ವಾರಂಟೈನ್‌ನಲ್ಲಿ ಇಡಲಾಗಿದೆ.

ಕೆಂಗೇರಿ ಉಪ ವಿಭಾಗದ ಎಸಿಪಿ ಕೃಷ್ಣ ಕುಮಾರ್ ಈ ಕುರಿತು ಮಾಹಿತಿ ನೀಡಿದ್ದು, “ಮಾರ್ಚ್ 30ರಂದು ಎಲ್ಲರನ್ನೂ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗಾಗಿ ಕರೆದುಕೊಂಡು ಹೋಗಲಾಗಿತ್ತು. ಎಲ್ಲರನ್ನೂ ಹಜ್ ಭವನದಲ್ಲಿ ಕ್ವಾರಂಟೈನ್‌ನಲ್ಲಿ ಇಡಲಾಗಿದೆ” ಎಂದು ಹೇಳಿದ್ದಾರೆ.

ಎಲ್ಲರೂ ಪ್ರವಾಸಿ ವೀಸಾ ಪಡೆದು ಬೆಂಗಳೂರಿಗೆ ಆಗಮಿಸಿದ್ದರು. ಇಲ್ಲಿ ಧಾರ್ಮಿಕ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದರು ಎಂಬುದು ತನಿಖೆಯಿಂದ ಖಚಿತವಾಗಿದೆ. ಎಲ್ಲರನ್ನು ಅವರ ದೇಶಕ್ಕೆ ಗಡಿಪಾರು ಮಾಡಲು ಒಪ್ಪಿಗೆ ನೀಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಕೆ ಮಾಡಲಾಗಿದೆ.

(ಎನ್.ಬಿ)

Leave a Reply

comments

Related Articles

error: