ಪ್ರಮುಖ ಸುದ್ದಿ

ಬೆಳೆಗಾರರಿಗೆ ಸ್ಪಂದನೆ : ಕಾಫಿ ದಾಸ್ತಾನು ಯೋಜನೆ ಆರಂಭ

ರಾಜ್ಯ( ಮಡಿಕೇರಿ) ಏ.9 :- ಜಿಲ್ಲೆಯ ಬೆಳೆಗಾರರು ತಾವು ಬೆಳೆದಿರುವ ಕಾಫಿಯನ್ನು ಮಾರಾಟ ಮಾಡಲಾಗದೆ ಆರ್ಥಿಕ ಸಂಕಷ್ಟದಲ್ಲಿದ್ದು, ಅವರಿಗೆ ನೆರವಾಗುವ ಉದ್ದೇಶದಿಂದ ಕೊಡಗು ಜಿಲ್ಲಾ ಕಾಫಿ ಬೆಳೆಗಾರರ ಸಹಕಾರ ಸಂಘವು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸಹಯೋಗದಲ್ಲಿ ಕಾಫಿ ದಾಸ್ತಾನು ಯೋಜನೆಯನ್ನು ಆರಂಭಿಸಿದೆ.
ನಗರದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಂಘದ ಅಧ್ಯಕ್ಷ ಎಂ.ಬಿ.ದೇವಯ್ಯ ಅವರು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಭಾಗವಹಿಸಿದ್ದ ಸಭೆಯಲ್ಲಿ ಈ ಯೋಜನೆ ಆರಂಭಿಸುವ ಕುರಿತು ಪ್ರಸ್ತಾಪವಾಗಿದ್ದು, ಅದರಂತೆ ಸಂಘದಲ್ಲಿ ಆರ್ಥಿಕ ಸಂಕಷ್ಟ ಇರುವುದರಿಂದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನಿಂದ ಒಂದು ಕೋಟಿ ರೂ. ಸಾಲ ಪಡೆಯಲು ನಿರ್ಧರಿಸಲಾಗಿದೆ. ಅಲ್ಲದೆ ಕಾಫಿ ದಾಸ್ತಾನು ಯೋಜನೆಯನ್ನು ಪಾರದರ್ಶಕವಾಗಿ ನಡೆಸುವ ದೃಷ್ಟಿಯಿಂದ ಸಂಘ ಹಾಗೂ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ಜಂಟಿ ಸುಪರ್ದಿಯಲ್ಲಿ ಇರಿಸುವಂತೆ ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಹಾಲಿ ಯೋಜನೆಯಡಿ ಸಂಘವು ಬೆಳೆಗಾರರಿಂದ ಚೀಲ ಒಂದರ 1000ರೂ. ಮುಂಗಡ ಹಣ ನೀಡಿ ಕಾಫಿಯನ್ನು ದಾಸ್ತಾನು ಮಾಡಿಕೊಳ್ಳಲಿದ್ದು, ಒಬ್ಬ ಬೆಳೆಗಾರನಿಂದ ಗರಿಷ್ಠ 2 ಲಕ್ಷ ರೂ. ಮೊತ್ತದ ಕಾಫಿಯನ್ನು ಮಾತ್ರ ದಾಸ್ತಾನು ಮಾಡಿಕೊಳ್ಳಲಿದೆ. ಈ ಕಾಫಿಯನ್ನು ಬೆಳೆಗಾರರು ತಮಗೆ ಸೂಕ್ತವಾದ ಸಂದರ್ಭದಲ್ಲಿ ಮಾರಾಟ ಮಾಡಿ ಸಂಘಕ್ಕೆ ಹಣವನ್ನು ಮರು ಪಾವತಿಸಬಹುದಾಗಿದೆ. ಅಲ್ಲದೆ ಸಂಘದ ಸಂಸ್ಕರಣಾ ಘಟಕದಲ್ಲಿಯೇ ಕಾಫಿಯನ್ನು ಸಂಸ್ಕರಣೆ ಮಾಡುವುದಿದ್ದಲ್ಲಿ ಅವರ ಕಾಫಿಯನ್ನು ಮೂರು ತಿಂಗಳವರೆಗೆ ಯಾವುದೇ ಬಾಡಿಗೆ ಇಲ್ಲದೆ ಇರಿಸಿಕೊಳ್ಳಲಾಗುವುದು. ಅದಕ್ಕಿಂತ ಹೆಚ್ಚಿನ ಅವಧಿಯಲ್ಲಿ ದಾಸ್ತಾನು ಮಾಡುವುದಿದ್ದಲ್ಲಿ ಆಡಳಿತ ಮಂಡಳಿಯು ಮುಂದಿನ ದಿನಗಳಲ್ಲಿ ಕನಿಷ್ಟ ಬಾಡಿಗೆ ದರವನ್ನು ನಿಗದಿಪಡಿಸಲಿದೆ ಎಂದು ಹೇಳಿದರು.
ಪ್ರಸಕ್ತ ಸಂಘದ ಹುಣಸೂರು ಕಾಫಿ ಸಂಸ್ಕರಣಾ ಘಟಕದಲ್ಲಿ ಸಾಮಥ್ರ್ಯಕ್ಕೆ ತಕ್ಕಂತೆ ಕಚ್ಚಾ ಕಾಫಿ ಪೂರೈಕೆಯಾಗದಿರುವುದರಿಂದ ಅಗತ್ಯಕ್ಕಿಂತ ಹೆಚ್ಚಿನ ಗೋದಾಮುಗಳನ್ನು ಬಾಡಿಗೆ ನೀಡಲಾಗಿದ್ದು,ಇದೀಗ ಗೋದಾಮಿನ ಕೊರತೆ ಉಂಟಾಗುತ್ತಿದೆ. ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಸಂಘವು ಮಡಿಕೇರಿ ಹಾಗೂ ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರಾಟ ಸಮಿತಿಗಳ ಗೋದಾಮುಗಳನ್ನು ಉಚಿತವಾಗಿ ನೀಡುವಂತೆ ಕೋರಿದ್ದು, ಇದಕ್ಕೆ ಸ್ಪಂದನ ದೊರಕಿದರೆ ಸಂಘವು ಕಾಫಿ ಶೇಖರಣೆಗೆ ತ್ವರಿತವಾಗಿ ಕ್ರಮಕೈಗೊಳ್ಳಲಿದೆ ಎಂದು ದೇವಯ್ಯ ನುಡಿದರು.
ಮುಖ್ಯಮಂತ್ರಿಗಳಿಗೆ ಮನವಿ: ರಾಜ್ಯದಲ್ಲಿ ಇತರ ಬೆಳೆಗಳನ್ನು ಬೆಳೆಯುವ ರೈತರಂತೆ ಕಾಫಿ ಬೆಳೆಗಾರರು ಕೂಡಾ ಅರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ರಾಜ್ಯ ಸರಕಾರ ಬೆಳೆಗಾರರ ನೆರವಿಗೆ ಬರಬೇಕು ಎಂದು ಮನವಿ ಮಾಡಿದ ಅವರು, ರಾಜ್ಯ ಸರಕಾರ ಕಾಫಿ ಬೆಳೆಗಾರರ ಸಹಕಾರ ಸಂಘಕ್ಕೆ ಕನಿಷ್ಟ 10 ಕೋಟಿ ರೂ.ಗಳ ಬಡ್ಡಿ ರಹಿತ ಸಾಲ ನೀಡಿದಲ್ಲಿ ಸಂಘವು ಬೆಳೆಗಾರರಿಗೆ ಮತ್ತಷ್ಟು ನೆರವು ನೀಡಲು ಸಹಕಾರಿಯಾಗಲಿದೆ ಎಂದು ತಿಳಿಸಿದರಲ್ಲದೆ ಈ ನಿಟ್ಟಿನಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಪ್ರಯತ್ನಿಸಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಎನ್.ಕೆ.ಅಯ್ಯಣ್ಣ, ನಿರ್ದೇಶಕರಾದ ನಾಪಂಡ ರವಿ ಕಾಳಪ್ಪ ಹಾಗೂ ಬಿ.ಸಿ.ಕಾವೇರಪ್ಪ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: