ಕರ್ನಾಟಕಪ್ರಮುಖ ಸುದ್ದಿ

ವಿಚಾರವಾದಿ ಪ್ರೊ. ನರೇಂದ್ರ ನಾಯಕ್ ಕಾರು ನಿಲ್ಲಿಸಲು ಪ್ರಯತ್ನ ; ಹತ್ಯೆ ಸಂಚು ದೂರು ದಾಖಲು

ಮಂಗಳೂರು: ವಿಚಾರವಾದಿ ಪ್ರೊಫೆಸರ್ ನರೇಂದ್ರ ನಾಯಕ್ ಅವರ ಹತ್ಯೆಗೆ ಯತ್ನ ನಡೆಸಿರುವ ಘಟನೆ ಮಂಗಳೂರಿನ ಉರ್ವದಲ್ಲಿ ನಡೆದಿದೆ ಎಂದುತಿಳಿದುಬಂದಿದೆ.

ಪ್ರೊ.ನರೇಂದ್ರ ನಾಯಕ್ ಅವರೇ ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ನಿನ್ನೆ ಕಾರಿನಲ್ಲಿ ನಾನೊಬ್ಬನೇ ತೆರಳುತ್ತಿದ್ದ ವೇಳೆ ಇಬ್ಬರು ಬೈಕ್ ನಲ್ಲಿ ಹಿಂಬಾಲಿಸಿಕೊಂಡು ಬಂದರು. “ಟೈರ್ ಪಂಚರ್ ಆಗಿದೆ ಸರ್” ಎಂದು ಕಾರು ನಿಲ್ಲಿಸಲು ಪ್ರಯತ್ನಿಸಿದ್ದರು. ಅಪಾಯದ ಸೂಚನೆ ಅರಿತ ನಾನು ಕಾರು ನಿಲ್ಲಿಸದೆ ಮುಂದೆ ಸಾಗಿದೆ ಎಂದು ಹೇಳಿದ್ದಾರೆ.

ಟೈರ್ ಪಂಚರ್ ಆಗಿದೆ ಎಂದು ಸುಳ್ಳು ಹೇಳಿದ ದುಷ್ಕರ್ಮಿಗಳು ಕಾರು ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಆದರೆ ನರೇಂದ್ರ ನಾಯಕ್ ಅವರು ಕಾರು ನಿಲ್ಲಿಸದೇ ಕಾರಿನ ಚಕ್ರ ಪಂಚರ್ ಆಗಿದೆಯೋ ಇಲ್ಲವೋ ಎಂಬುದನ್ನು ಪೆಟ್ರೋಲ್ ಬಂಕ್ ಕೆಲಸಗಾರರಿಂದ ಕೇಳಿ ತಿಳಿದುಕೊಂಡಿದ್ದಾರೆ. ಬಳಿಕ ದುಷ್ಕರ್ಮಿಗಳ ಸಂಚು ಖಾತ್ರಿಯಾಗಿದೆ.

ನರೇಂದ್ರ ನಾಯಕ್ ಅವರು ಉರ್ವ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಿದ್ದಾರೆ. ವಿನಾಯಕ ಬಾಳಿಗ ಹತ್ಯೆ ಪ್ರಕರಣ ಸಂಬಂಧ ನಡೆಯುತ್ತಿರುವ ಹೋರಾಟದ ಮುಂಚೂಣಿಯಲ್ಲಿರುವ ಪ್ರೊ.ನರೇಂದ್ರ ಅವರನ್ನು ಹೋರಾಟದಿಂದ ಹಿಂದೆ ಸರಿಯುವಂತೆ ತೀವ್ರ ಒತ್ತಡ ಹಾಕಲಾಗಿತ್ತು. ಹೀಗಾಗಿ ಪೊಲೀಸ್ ಇಲಾಖೆಯಿಂದ ನಾಯಕ್ ಅವರ ರಕ್ಷಣೆಗಾಗಿ ಗನ್‍ಮ್ಯಾನ್ ಒದಗಿಸಲಾಗಿದೆ. ಆದರೆ ನಿನ್ನೆ ಗನ್ ಮನ್ ಇಲ್ಲದೇ ನರೇಂದ್ರ ನಾಯಕ್ ಅವರು ಹೊರಗೆ ಬಂದಿದ್ದು, ಈ ವಿಚಾರ ತಿಳಿದ ದುಷ್ಕರ್ಮಿಗಳು ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ.

ರಾಜ್ಯದಲ್ಲಿ ವಿಚಾರವಾದಿ ಎಂಎಂ ಕಲ್ಬುರ್ಗಿ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದ ಘಟನೆ ಇನ್ನೂ ಹಸಿರಾಗಿರುವಾಗಲೇ ಇದೀಗ ಮತ್ತೊಬ್ಬ ವಿಚಾರವಾದಿ ನರೇಂದ್ರ ನಾಯಕ್ ಅವರನ್ನು ದುಷ್ಕರ್ಮಿಗಳು  ಗುರಿಯಾಗಿಸಿಕೊಂಡಿರುವ ಸಾಧ್ಯತೆ ಇದೆ. ನಾಯಕರ್ ಅವರು ಸ್ವಲ್ಪ ಎಚ್ಚರ ತಪ್ಪಿದ್ದರೂ ಹತ್ಯೆ ನಡೆದುಹೋಗುವ ಸಾಧ್ಯತೆ ಇತ್ತು.

ನರೇಶ್ ಶೆಣೈ ಮೇಲೆ ಶಂಕೆ :

ಪ್ರೊ. ನರೇಂದ್ರ ನಾಯಕ್ ಅವರ ಕೊಲೆ ಯತ್ನಕ್ಕೆ ಸಂಬಂಧಿಸಿದಂತೆ ನರೇಶ್ ಶೆಣೈ ಗ್ಯಾಂಗ್ ಮೇಲೆ ಅನುಮಾನ ವ್ಯಕ್ತಪಡಿಸಲಾಗುತ್ತಿದೆ. ವಿನಾಯಕ ಬಾಳಿಗ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ನರೇಶ್ ಶೆಣೈ, ಜಾಮೀನಿನ ಮೇಲೆ ಜೈಲಿನಿಂದ ಹೊರಗಿದ್ದಾರೆ.

(ಎನ್‍.ಬಿ.ಎನ್‍)

Leave a Reply

comments

Related Articles

error: