ಮೈಸೂರು

ಸುಳ್ಳು ಸುದ್ದಿ ಹರಡಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿ : ಕಾನೂನು ರೀತ್ಯಾ ಕ್ರಮ

ಮೈಸೂರು,ಏ.9:- ಏ.8ರಂದು ಬೆಳಿಗ್ಗೆ 9ಗಂಟೆಯ ವೇಳೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಹುಲ್ಲಹಳ್ಳಿ ಹೋಬಳಿ ಶೆಟ್ಟಹಳ್ಳಿ ಗ್ರಾಮದ ಬಳಿ ಜಮೀನಿನಲ್ಲಿ ಕೇರಳದವರು ಶುಂಠಿ ಬೇಸಾಯ ಕೆಲಸಕ್ಕೆ ನೂರಾರು ಕೂಲಿ ಕೆಲಸಗಾರರನ್ನು ಕೇರಳ ರಾಜ್ಯದಿಂದ ಕರೆದುಕೊಂಡು ಬಂದು ಶುಂಠಿ ಬೇಸಾಯದ ಕೆಲಸ ಮಾಡುತ್ತಿರುವುದಾಗಿ ಸುಳ್ಳು ಸುದ್ದಿ ಹೇಳಿದ ವ್ಯಕ್ತಿಯ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗಿದೆ.

ಶೆಟ್ಟಹಳ್ಳಿ ಗ್ರಾಮದ ನಿವಾಸಿ ಜಯಶಂಕರ್ ಬಿನ್ ರಾಜಪ್ಪ(21) ಶೆಟ್ಟಹಳ್ಳಿ ಗ್ರಾಮದವರು ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಸುದ್ದಿ ಮುಟ್ಟಿಸಿದ್ದು, ಆ ವಾಹಿನಿ ಈ ಬಗ್ಗೆ ಸುದ್ದಿಯನ್ನು ಪ್ರಸಾರ ಮಾಡಿದೆ. ತಕ್ಷಣ ಹುಲ್ಲಹಳ್ಳಿ ಠಾಣಾ ಪಿಎಸ್ ಐ ಸುರೇಂದ್ರ ಬಿ.ಅವರು ಮತ್ತು ಸಿಬ್ಬಂದಿಯವರ ಜೊತೆ ಶೆಟ್ಟಹಳ್ಳಿ ಗ್ರಾಮಕ್ಕೆ ಹೋಗಿ ಜಮೀನಿಗೆ ಭೇಟಿ ನೀಡಿ ಪರಿಶೀಲಿಸಲಾಗಿ ಜಮೀನಿನಲ್ಲಿ ಕೇರಳ ರಾಜ್ಯದ ಕೂಲಿಕೆಲಸಗಾರರು ಯಾರೂ ಸಹ ಇರಲಿಲ್ಲ. ಯಾರೂ ಸಹ ಜಮೀನುಗಳಲ್ಲಿ ಶುಂಠಿ ಬೇಸಾಯ ಮಾಡುತ್ತಿರಲಿಲ್ಲ. ರಾಜ್ಯದಲ್ಲಿ ಕೋವಿಡ್ 19 ಸಂಬಂಧ ಲಾಕ್ ಡೌನ್ ಜಾರಿಯಲ್ಲಿದ್ದರೂ ಸಹ ಶೆಟ್ಟಹಳ್ಳಿ ಗ್ರಾಮದ ಜಮೀನಿನಲ್ಲಿ ಕೇರಳ ರಾಜ್ಯದಿಂದ ನೂರಾರು ಕೂಲಿ ಕಾರ್ಮಿಕರನ್ನು ಕೆಲಸಕ್ಕೆ ಕರೆತಂದು ಶುಂಠಿ ಬೇಸಾಯ ಮಾಡುತ್ತಿರುವುದಾಗಿ ಸುಳ್ಳು ಮಾಹಿತಿಯನ್ನು ಜಯಶಂಕರ್ ಸುಳ್ಳು ಸುದ್ದಿ ಹಬ್ಬಿಸಿ ಸುಳ್ಳು ಪ್ರಚಾರ ಮಾಡಿದ್ದು, ಸಾರ್ವಜನಿಕರಲ್ಲಿ ಭಯವನ್ನುಂಟು ಮಾಡಿದ್ದಾರೆ.

ಆದ್ದರಿಂದ ಜಯಶಂಕರ್ ಅವರ ಮೇಲೆ ಠಾಣಾ ಮೊ.ನಂ.42/2020 ಕಲಂ 505 ಐಪಿಸಿ ಮತ್ತು ಕಲಂ 54 ವಿಪತ್ತು ನಿರ್ವಹಣಾ ಕಾಯ್ದೆ-2005ರೀತ್ಯಾ ಕ್ರಮ ಕೈಗೊಳ್ಳಲಾಗಿದೆ ಎಂದು ನಂಜನಗೂಡು ತಾಲೂಕು ಹುಲ್ಲಹಳ್ಳಿ ಪೊಲೀಸ್ ಠಾಣೆ ಪೊಲೀಸ್ ಸಬ್ ಇನ್ಸಪೆಕ್ಟರ್ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: