ಮೈಸೂರು

ಮನೆಮನೆಗೆ ಪತ್ರಿಕೆ ವಿತರಿಸುವ ಪತ್ರಿಕಾ ವಿತರಕನನ್ನು ಸನ್ಮಾನಿಸಿ, ದಿನಸಿ ವಿತರಿಸಿದ ಸಿದ್ದೇಶ್

ಮೈಸೂರು,ಏ.9:- ಪ್ರಪಂಚಕ್ಕೆ ಕೊರೋನಾ ವೈರಾಣು ಭೀತಿ ಆವರಿಸಿ ದೇಶಕ್ಕೆ ದೇಶವೇ ಲಾಕ್ ಡೌನ್ ಆಗಿರುವ ಸನ್ನಿವೇಶದಲ್ಲಿ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತರು, ಪೊಲೀಸರು, ಪೌರಕಾರ್ಮಿಕರು, ಪತ್ರಕರ್ತರು ಜನರ ಸೇವೆಯಲ್ಲಿ ನಿರತರಾಗಿದ್ದಾರೆ. ಖುದ್ದು ಪ್ರಧಾನಮಂತ್ರಿಗಳ ನೇತೃತ್ವದಲ್ಲಿ ದೇಶದ ಸಮಸ್ತ ಜನ ಈ ಎಲ್ಲರ ಸೇವಾಕಾರ್ಯಕ್ಕೆ ಚಪ್ಪಾಳೆ ಮೂಲಕ ಕೃತಜ್ಞತೆ ಅರ್ಪಿಸಿದ್ದಾರೆ.

ಆದರೆ ಇದುವರೆಗೂ ಮುಕ್ತವಾಗಿ ಪ್ರಶಂಸೆಗೊಳಪಡದ ಸುಪ್ತ ವರ್ಗ ಎಂದರೆ ಅದು ಪತ್ರಿಕಾ ವಿತರಕರದ್ದು. ಪ್ರತಿ ಮನೆ-ಮನೆಗಳಿಗೆ ಸುದ್ದಿ ತಲುಪಿಸುವಲ್ಲಿ ಇವರ ಪಾತ್ರ ಬಹಳ ದೊಡ್ಡದು.  ಇಂದು ರಾಮಕೃಷ್ಣನಗರದ ನಿವಾಸಿಯಾದ ಸಿದ್ದೇಶ್ ಅವರು ವಿಶೇಷವಾದ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡು ತಮ್ಮ 25 ವರ್ಷದಿಂದ ಪತ್ರಿಕಾ ವಿತರಕರಾಗಿದ್ದ ರಾಮಕೃಷ್ಣ ನಗರ ಹಾಗೂ ಸುತ್ತಮುತ್ತಲ ಬಡಾವಣೆಯಲ್ಲಿ  ಪತ್ರಿಕೆ ವಿತರಿಸುವ ರಾಜು ಅವರನ್ನು ಸನ್ಮಾನಿಸಿದ್ದಲ್ಲದೇ ಮೂರು ತಿಂಗಳ ಹಣವನ್ನು ಸಹ ಮುಂಗಡವಾಗಿ ನೀಡಿ ಒಂದು ತಿಂಗಳಿಗೆ ಆಗುವ ದಿನಸಿ ಪದಾರ್ಥಗಳ ಜೊತೆಗೆ ರಾಜು ಅವರ ಪುತ್ರ ಮೊದಲನೇ ವರ್ಷದ ಪಿಯುಸಿ ವ್ಯಾಸಂಗ ಮಾಡುತ್ತಿರುವ ಮಧುಸೂದನ್ ಅವರಿಗೂ ನೋಟ್ ಪುಸ್ತಕಗಳನ್ನು ನೀಡಿ ಶುಭ ಹಾರೈಸಿದರು.

ಈ ವೇಳೆ ಮಾತನಾಡಿದ ಸಿದ್ದೇಶ್  “ಜನಜೀವನ ಲಾಕ್ ಡೌನ್ ಆಗಿರುವ ಸಂದರ್ಭದಲ್ಲಿ ಪತ್ರಿಕಾ ವಿತರಕರು ತಮ್ಮ ಜೀವ ಪಣಕ್ಕಿಟ್ಟು ನಮಗೆ ಪತ್ರಿಕೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ, ದಯಮಾಡಿ ಸಾರ್ವಜನಿಕರು ತಮ್ಮ ಮನೆಗೆ ಪತ್ರಿಕೆ ವಿತರಿಸುವವರಿಗೆ ಸೂಕ್ತ ಸಮಯದಲ್ಲಿ ಹಣ ತಲುಪಿಸಿ ಜೊತೆಗೆ ಸ್ಯಾನಿಟೈಸರ್ ಹಾಕಿ ಕಳುಹಿಸಿ” ಎಂದು ವಿನಂತಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: