ಮೈಸೂರು

ಗೋಲಕದಲ್ಲಿ ಕೂಡಿಟ್ಟ ಹಣವನ್ನು ಜನ್ಮದಿನದ ಪ್ರಯುಕ್ತ ಸಿಎಂ ಪರಿಹಾರ ನಿಧಿಗೆ ಉಸ್ತುವಾರಿ ಸಚಿವರ ಮೂಲಕ ನೀಡಿದ 6ನೇ ತರಗತಿಯ ಪೋರ

ಮೈಸೂರು,ಏ.9:- ಕೊರೋನಾ ವೈರಸ್ ನ ಕರಾಳ ದಿನಗಳಲ್ಲಿ ಭಾರತ ಲಾಕ್ಡೌನ್ ನ ಹಿನ್ನೆಲೆಯಲ್ಲಿ ಜನರು ಸಂಕಷ್ಟ ಪರಿಸ್ಥಿತಿಯಲ್ಲಿ ಇರುವುದನ್ನು ಮನಗಂಡು ಮೈಸೂರಿನ ಕೇಂದ್ರೀಯ ವಿದ್ಯಾಲಯ ಶಾಲೆಯಲ್ಲಿ 6 ನೇ ತರಗತಿಯಲ್ಲಿ ಓದುತ್ತಿರುವ ಮಹದೇವಪುರ ನಿವಾಸಿ ಜಯಸಿಂಹ ಶ್ರೀಧರ್, ಶ್ರೀಲಕ್ಷಿ ಅವರ ಪುತ್ರ  ಪ್ರಮುಖ್ ಸಿಂಹ ಎಂಬ ಬಾಲಕ  ತಾನು ಗೋಲಕದಲ್ಲಿ ಕೂಡಿಟ್ಟ ಹಣವನ್ನು ತನ್ನ ಜನ್ಮದಿನದ ಪ್ರಯುಕ್ತ ಮೈಸೂರು ಬೆಂಗಳೂರು ರಸ್ತೆಯಲ್ಲಿರುವ ಸರ್ಕಾರಿ ಅತಿಥಿ ಗೃಹ ದಲ್ಲಿಂದು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ,ಸಂಸದರಾದ ಪ್ರತಾಪಸಿಂಹ ಅವರಿಗೆ ಮತ್ತು ಪೊಲೀಸ್ ಕಮಿಷನರ್  ಡಾ.ಚಂದ್ರಗುಪ್ತ ಅವರಿಗೆ ನೀಡುವ ಮುಖಾಂತರ ಮಾನವೀಯತೆ ಮೆರೆದಿದ್ದಾನೆ.

ಈ ಪುಟ್ಟಬಾಲಕ ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾನೆ. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಬಾಲಕ  ನನ್ನ ಹುಟ್ಟಿದ ಹಬ್ಬದ ಪ್ರಯುಕ್ತ ಒಂದು ಒಳ್ಳೆಯ ಕೆಲಸ ಮಾಡಬೇಕೆಂದು ತುಂಬಾ ದಿನಗಳಿಂದ ಆಸೆಯಿತ್ತು.  ಆದರೆ ನಮ್ಮ ದೇಶ ಇಂತಹಾ ಕಠಿಣ ಪರಿಸ್ಥಿತಿ ಎದುರಿಸುತ್ತಿರುವಾಗ ನಾನು ಹುಟ್ಟುಹಬ್ಬ  ಆಚರಣೆ ಮಾಡುವುದು ಬೇಡ ಎನಿಸಿ ವರ್ಷದಿಂದ ಕೂಡಿಟ್ಟ ಹುಂಡಿ ಹಣವನ್ನು ಕಷ್ಟ ಎದುರಿಸುತ್ತಿರುವ ಜನರಿಗೆ ಸ್ವಲ್ಪ ನೆರವಾಗಲಿ ಎಂದು ನೀಡಿದ್ದೇನೆ.  ಇದೇ ನನ್ನ ಆಚರಣೆ ಇದಕ್ಕೆ ನಮ್ಮ ಶಾಲೆಯವರ ಮತ್ತು ಕುಟುಂಬದ ಬೆಂಬಲವಿದೆ ಎಂದು ತಿಳಿಸಿದ್ದಾನೆ.

ತನ್ನ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಗೋಲಕದಲ್ಲಿ ಕೂಡಿಟ್ಟ ಹಣವನ್ನೆಲ್ಲ ಸಚಿವರಿಗೆ ಹಸ್ತಾಂತರ ಮಾಡಿದ ವೇಳೆ ಸಚಿವ ವಿ.ಸೋಮಣ್ಣ ಅವರು ಗೋಲಕಕ್ಕೆ ಎರಡು ಸಾವಿರವನ್ನು ಹಾಕಿ   ಆ ಗೋಲಕವನ್ನು ಪೊಲೀಸ್ ಕಮಿಷನರ್  ಡಾ. ಚಂದ್ರಗುಪ್ತರಿಗೆ ನೀಡಿದರಲ್ಲದೇ, ಅಲ್ಲಿರುವ ಹಣವನ್ನು ಲೆಕ್ಕ ಹಾಕಿ ಸರ್ಕಾರಕ್ಕೆ ಕಳುಹಿಸಿ ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: