ಮೈಸೂರು

ದಿನಗೂಲಿ ಅಡುಗೆ ಕೆಲಸಗಾರರ ಜೀವನ ಭದ್ರತೆಗೆ ಅಡುಗೆ ಕೆಲಸಗಾರರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಹೆಚ್.ಎನ್.ಶ್ರೀಧರಮೂರ್ತಿ ಒತ್ತಾಯ

ಮೈಸೂರು, ಏ.9:- ದಿನಗೂಲಿ ಅಡುಗೆ ಕೆಲಸ ಮಾಡಿಕೊಂಡು ಜೀವನ ನಿರ್ವಹಿಸುವ ಅಡುಗೆ ಕೆಲಸಗಾರರ ಅಸಂಘಟಿತ ಜೀವನ ವಲಯಕ್ಕೆ ಸರ್ಕಾರವು ಜೀವನ ಭದ್ರತೆಯನ್ನು ಒದಗಿಸಿಕೊಡಬೇಕೆಂದು ನಗರದ ಅಡುಗೆ ಕೆಲಸಗಾರರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷರಾದ ಹೆಚ್.ಎನ್.ಶ್ರೀಧರಮೂರ್ತಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಈ ಕುರಿತು ಮಾಧ್ಯಮ  ಹೇಳಿಕೆ ನೀಡಿರುವ ಅವರು ಅಡುಗೆ ಕೆಲಸಗಾರರು ಹಗಲಿರುಳು ಎನ್ನದೇ ಸದಾ ಬೆಂಕಿಯ ಒಲೆಯ ಮುಂದೆ ನಿಂತುಕೊಂಡು ತಮಗೆ ಗೊತ್ತಿರುವ ಭಕ್ಷ, ಭೋಜನಗಳ ಅಡುಗೆ ತಯಾರಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಕಾಯಕವನ್ನು ನಡೆಸಿಕೊಂಡು ಅಭದ್ರತೆಯಿಂದ ಜೀವನವನ್ನು ಸಾಗಿಸುತ್ತಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಕೂಡ ಮಹಾಮಾರಿ ಕೋವಿಡ್-19 ಕೊರೊನಾ ರೋಗವು ವಿಶ್ವ ವ್ಯಾಪಿ ಹರಡಿರುವುದರಿಂದ ರಾಜ್ಯ ಲಾಕ್‍ಡೌನ್ ಆಗಿದ್ದರೂ ಸಹ, ನೊಂದ ಅಸಹಾಯಕ ಕುಟುಂಬಗಳಿಗೆ ಊಟ, ಉಪಹಾರವನ್ನು ದಾನಿಗಳ ಮೂಲಕ ಒದಗಿಸಿ, ತಮ್ಮ ಜೀವನವನ್ನು ನಿರ್ವಹಿಸುತ್ತಿದ್ದಾರೆ.
ಸರ್ಕಾರವು ನಿತ್ಯವೂ ಅಭದ್ರತೆಯಿಂದ ಜೀವನ ನಡೆಸುವ ಅಡುಗೆ ದಿನಗೂಲಿ ನೌಕರರಿಗೆ ಕಾರ್ಮಿಕ ವಿಮೆ, ಜೀವವಿಮೆ ಹಾಗೂ ಮಾಸಿಕ ಗೌರವ ವೇತನ ಮತ್ತು ಆರೋಗ್ಯ ವಿಮೆಯನ್ನು ಒದಗಿಸಿಕೊಡಬೇಕೆಂದು ಮೈಸೂರು ನಗರ ಅಡುಗೆ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷರಾದ ಶ್ರೀ ಕೇಟರರ್ಸ್‍ನ ಮಾಲೀಕ ಹೆಚ್.ಎನ್.ಶ್ರೀಧರಮೂರ್ತಿಯವರು ಒತ್ತಾಯಿಸಿದ್ದಾರೆ.
ಮೈಸೂರಿನ ಸುತ್ತಮುತ್ತ ಎರಡು ಸಾವಿರಕ್ಕೂ ಅಧಿಕ ದಿನಗೂಲಿ ಅಡುಗೆ ಕೆಲಸಗಾರರಿದ್ದು, ಅವರು ಈ ಕೊರೊನಾ ವೈರಾಣುವಿನ ಭೀತಿಯಿಂದಾಗಿ ಸಭೆ, ಸಮಾರಂಭಗಳು, ಮದುವೆ ಕಾರ್ಯಕ್ರಮಗಳು ರದ್ದಾಗಿದ್ದು, ಮುಂದೂಡಲ್ಪಟ್ಟಿವೆ. ಜೀವನ ನಿರ್ವಹಣೆ ಮಾಮೂಲಿನ ದಿನಕ್ಕಿಂತಲೂ ತುಂಬಾ ದುಸ್ಥಿತಿಯಿಂದ ಕೂಡಿದ್ದು, ಅಡುಗೆ ಕೆಲಸವಿಲ್ಲದೆ ಕಂಗೆಟ್ಟು, ದಿಕ್ಕು ತೋಚದ ಪರಿಸ್ಥಿತಿ ಹೊಂದಿ ಜೀವನ ನಿರ್ವಹಿಸುವುದು ಕಷ್ಟಕರವಾದ ವಿಷಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರವು ಕನಿಷ್ಟ ಪಡಿತರ ಅಂಗಡಿಗಳಲ್ಲಿ ಉಚಿತವಾಗಿ ನೀಡುವ ಅಕ್ಕಿ, ಬೇಳೆ ಹಾಗೂ ಇನ್ನಿತರ ಪದಾರ್ಥಗಳನ್ನು ಸರ್ಕಾರ ಹಾಗೂ ಸ್ಥಳೀಯ ಶಾಸಕರು ಮತ್ತು ಜನಪ್ರತಿನಿದಿಗಳು ನೊಂದ ಅಡುಗೆ ಕುಟುಂಬ ವರ್ಗಕ್ಕೆ ಮನೆಮನೆಗೆ ತೆರಳಿ ತಲುಪಿಸುವಂತಾಗಬೇಕೆಂದು ಅಡುಗೆ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಹೆಚ್.ಎನ್.ಶ್ರೀಧರಮೂರ್ತಿ ಒತ್ತಾಯಿಸಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: