ಪ್ರಮುಖ ಸುದ್ದಿ

ಎಲ್ಲಾ ಬಡಾವಣೆಗಳ ಬಡವರಿಗೂ ಉಚಿತ ಹಾಲು ವಿತರಿಸಲು ಒತ್ತಾಯ

ರಾಜ್ಯ( ಮಡಿಕೇರಿ) ಏ.10 :- ಕೊರೋನಾ ಲಾಕ್ ಡೌನ್ ಹಿನ್ನೆಲೆ ಸರ್ಕಾರದ ಆದೇಶದಂತೆ ಮಡಿಕೇರಿ ನಗರಸಭೆ ವತಿಯಿಂದ ನಗರದ ವಿವಿಧ ಬಡಾವಣೆಗಳಲ್ಲಿ ಉಚಿತ ಹಾಲು ವಿತರಣೆಯಾಗುತ್ತಿದೆ. ಆದರೆ ಬಿಪಿಎಲ್ ಕಾರ್ಡುದಾರರು ಎಲ್ಲಾ ವಾರ್ಡ್‍ಗಳಲಿದ್ದರೂ ಕೇವಲ ನಾಲ್ಕು ಬಡಾವಣೆಗಳಿಗೆ ಮಾತ್ರ ಉಚಿತ ಹಾಲು ವಿತರಣೆಯಾಗುತ್ತಿದೆ ಎಂದು ಜಿಲ್ಲಾ ಜಾತ್ಯತೀತ ಜನತಾದಳದ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಲೀಲಾಶೇಷಮ್ಮ ಆರೋಪಿಸಿದ್ದಾರೆ.
ಮಾಧ್ಯಮ ಪ್ರಕಟಣೆ ನೀಡಿರುವ ಅವರು ಅಧಿಕಾರಿಗಳು ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡು ಹೊಂದಿರುವ ಪ್ರತಿಯೊಬ್ಬ ಫಲಾನುಭವಿಗೂ ಹಾಲು ನೀಡಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಕಳೆದ ಎರಡು ದಿನಗಳಿಂದ ನಗರದ ಇಂದಿರಾನಗರ, ಚಾಮುಂಡೇಶ್ವರಿ ನಗರ, ಮಂಗಳಾದೇವಿ ನಗರ ಮತ್ತು ತ್ಯಾಗರಾಜ ನಗರ ಬಡಾವಣೆಗಳಿಗೆ ಮಾತ್ರ ಉಚಿತ ಹಾಲು ವಿತರಣೆಯಾಗುತ್ತಿದೆ. ಆದರೆ ಮಲ್ಲಿಕಾರ್ಜುನ ನಗರ, ರಾಣಿ ಪೇಟೆ ಮತ್ತು ಅಂಬೇಡ್ಕರ್ ಬಡಾವಣೆಗಳಲ್ಲಿ ಕೂಡ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡು ಹೊಂದಿರುವ ಫಲಾನುಭವಿಗಳಿದ್ದಾರೆ. ಈ ಬಗ್ಗೆ ಪೌರಾಯುಕ್ತರನ್ನು ಕೇಳಿದರೆ ಸ್ಲಮ್ ಏರಿಯಾಗಳಿಗೆ ಮಾತ್ರ ಹಂಚಿಕೆ ಮಾಡಲಾಗುತ್ತಿದೆ ಎಂದು ಸಮಜಾಯಿಷಿಕೆ ನೀಡುತ್ತಿರುವುದಾಗಿ ಲೀಲಾಶೇಷಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೊರೋನಾ ಸೋಂಕು ಹರಡದಂತೆ ಲಾಕ್‍ಡೌನ್ ಆದೇಶ ಜಾರಿಯಲ್ಲಿರುವುದರಿಂದ ಎಲ್ಲಾ ಬಡಾವಣೆಗಳಲ್ಲೂ ಸಂಕಷ್ಟಕ್ಕೆ ಸಿಲುಕಿರುವ ಬಡವರಿದ್ದಾರೆ. ಉಚಿತ ಹಾಲು ಹಂಚಿಕೆಯಲ್ಲೂ ತಾರತಮ್ಯವೇಕೆ ಎಂದು ಪ್ರಶ್ನಿಸಿರುವ ಅವರು ಅಧಿಕಾರಿಗಳು ಸ್ಲಮ್ ಏರಿಯಾಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳದೆ ಸೂಕ್ತ ರೀತಿಯಲ್ಲಿ ಸರ್ವೆ ಕಾರ್ಯ ನಡೆಸಿ ಎಲ್ಲಾ ಬಡವರನ್ನೂ ಸರ್ಕಾರದ ಸೌಲಭ್ಯದ ಫಲಾನುಭವಿಗಳೆಂದು ಗುರುತಿಸುವಂತೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕೆ ಎಂದು ಲೀಲಾಶೇಷಮ್ಮ ಹೇಳಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: