ಪ್ರಮುಖ ಸುದ್ದಿ

ಪರಿಸ್ಥಿತಿ ನಿಯಂತ್ರಣದಲ್ಲಿದ್ದರು ನಿರ್ಲಕ್ಷ್ಯ ಬೇಡ : ಶಾಸಕ ಕೆ.ಜಿ.ಬೋಪಯ್ಯ ಸೂಚನೆ

ರಾಜ್ಯ( ಮಡಿಕೇರಿ) ಏ.10 :- ಜಿಲ್ಲೆಯಲ್ಲಿ ಕೊರೊನಾ ವೈರಸ್ ಹರಡದಂತೆ ಸಾಕಷ್ಟು ಕ್ರಮ ಕೈಗೊಳ್ಳಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದ್ದರೂ ಯಾರೂ ನಿರ್ಲಕ್ಷ್ಯ ವಹಿಸಬಾರದು ಎಂದು ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಗರದ ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಹೋಬಳಿ ಮಟ್ಟದಲ್ಲಿ ನೇಮಕ ಮಾಡಲಾಗಿರುವ ನೋಡಲ್ ಅಧಿಕಾರಿಗಳು ಸೇರಿದಂತೆ ಎಲ್ಲಾ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಎಪಿಲ್ ಮತ್ತು ಬಿಪಿಎಲ್ ಕಾರ್ಡುದಾರರಿಗೆ ಸರಿಯಾದ ರೀತಿಯಲ್ಲಿ ಪಡಿತರ ವಿತರಣೆಯಾಗಬೇಕು. ನ್ಯಾಯಬೆಲೆ ಅಂಗಡಿಗಳಲ್ಲಿ ಹೆಚ್ಚು ಜನ ಜಮಾವಣೆಯಾಗದಂತೆ ನೋಡಿಕೊಂಡು ಎಲ್ಲರಿಗೂ ಪಡಿತರ ವಿತರಣೆ ಮಾಡಿ. ನ್ಯಾಬೆಲೆ ಅಂಗಡಿಗಳೂ ಸಹ ಸರ್ಕಾರದ ನಿರ್ದೇಶನದಂತೆ ಸಮಯಪಾಲನೆ ಮಾಡುವ ಬಗ್ಗೆ ಗಮನಹರಿಸಬೇಕು ಎಂದರು.
ರೈತರು ಕೃಷಿ ಉಪಕರಣಗಳನ್ನು ಸಾಗಿಸುವ ಸಂಧರ್ಭದಲ್ಲಿ ಪೊಲೀಸರು ರೈತರಿಗೆ ಸಹಕಾರ ನೀಡಬೇಕು. ಕೆಲವೊಮ್ಮೆ ರೈತರಿಗೆ ಉಪಕರಣಗಳ ಬಿಲ್ಲು ನೀಡುವ ಸಂಧರ್ಭ ತಡವಾಗುತ್ತದೆ. ಉಪಕರಣಗಳನ್ನು ರೈತರು ಸಾಗಿಸುವಾಗ ಅವರಿಗೆ ತೊಂದರೆಯಾಗದಂತೆ ಎಚ್ಚರವಹಿಸಿ. ಜೊತೆಗೆ ದಿನಗೂಲಿಗೆ ಬಾಡಿಗೆಗೆ ಆಟೋ ಓಡಿಸುವ ಮಂದಿ ಇದ್ದು, ಆರ್ಥಿಕವಾಗಿ ಹಿಂದುಳಿದ ಚಾಲಕರು ಮತ್ತವರ ಕುಟುಂಬಕ್ಕೂ ಪಡಿತರ ಒದಗಿಸಲು ಕ್ರಮ ವಹಿಸಿ ಎಂದು ಶಾಸಕರು ಸಲಹೆ ನೀಡಿದರು.
ಇದೇ ವೇಳೆ ಆಹಾರ ಇಲಾಖೆಯ ಉಪನಿರ್ದೇಶಕರಾದ ಗೌರವ್ ಕುಮಾರ್ ಶೆಟ್ಟಿ ಅವರು ಮಾತನಾಡಿ, ಜಿಲ್ಲೆಯಾದ್ಯಂತ ಈಗಾಗಲೆ ಪಡಿತರ ವಿತರಣೆ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಶೇ. 60 ರಷ್ಟು ಪಡಿತರ ವಿತರಣೆ ಕಾರ್ಯ ಮುಗಿದಿದೆ. ಇನ್ನುಳಿದಂತೆ ಪಡಿತರ ವಿತರಣೆ ನಡೆಯುತ್ತಿದ್ದು ಶೀಘ್ರವೇ ಈ ಕಾರ್ಯ ಮುಗಿಯಲಿದೆ ಎಂದು ತಿಳಿಸಿದರು.
ಎಲ್ಲೆಲ್ಲಿ ಹೆಚ್ಚು ಜನಸಂದಣಿ ಇದೆಯೋ ಅಲ್ಲಿ ಮ್ಯಾನಯುಯಲ್ ಆಗಿಯೇ ವಿತರಣಾ ಕಾರ್ಯ ನಡೆಯುತ್ತಿದೆ. ಜೊತೆಗೆ ಕಡ್ಡಾಯವಾಗಿ ನ್ಯಾಯಬೆಲೆ ಅಂಗಡಿಗಳು ನಿರ್ಧಿಷ್ಟ ಸಮಯಕ್ಕೆ ತೆಗೆದು ಸಾರ್ವಜನಿಕರಿಗೆ ಪಡಿತರ ವಿತರಿಸುವಂತೆ ತಿಳಿಸಲಾಗಿದೆ ಎಂದು ಅವರು ಸಭೆಯ ಗಮನಕ್ಕೆ ತಂದರು.
ರ್ಯಾಪಿಡ್ ಟೆಸ್ಟಿಂಗ್ ಕಿಟ್ ಬರಲಿದೆ
ಆರ್‍ಸಿಎಚ್ ಅಧಿಕಾರಿಗಳಾದ ಡಾ.ಗೋಪಿನಾಥ್ ಅವರು ಮಾತನಾಡಿ, ಸರ್ಕಾರದಿಂದ ಮುಂದಿನ ವಾರದಲ್ಲಿ ರ್ಯಾಪಿಡ್ ಟೆಸ್ಟಿಂಗ್ ಕಿಟ್ ಬರಲಿದ್ದು ಈ ಮೂಲಕ ಹೆಚ್ಚಿನ ಸ್ಯಾಂಪಲ್ ಪರೀಕ್ಷೆಗೆ ನೆರವಾಗಲಿದೆ. ಜೊತೆಗೆ ಗ್ರಾಮಿಣ ಪ್ರದೆಶಗಳಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದರು.
ತಾಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ಲಕ್ಷ್ಮೀ ಅವರು ಮಾತನಾಡಿ, ನೋಡಲ್ ಅಧಿಕಾರಿಗಳು ಹೋಬಳಿ ಮಟ್ಟದಲ್ಲಿ ಯಾವುದೇ ರೀತಿಯ ಲೋಪವಾಗದಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು. ಅಲ್ಲದೆ ಬಿಸಿಯೂಟದ ಆಹಾರ ಪದಾರ್ಥವನ್ನು ಸಂಬಂಧಪಟ್ಟ ಶಾಲೆಗಳ ಮೂಲಕ ಪೋಷಕರ ಮುಖಾಂತರ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಈಗಾಗಲೇ ಎಲ್ಲರ ಶ್ರಮದ ಫಲವಾಗಿ ಜಿಲ್ಲೆಯು ಕೊರೊನಾ ವೈರಸ್‍ನಿಂದ ಮುಕ್ತವಾಗಿದೆ. ಇನ್ನು ಮುಂದೆಯೂ ಸಹ ಗಡಿ ಭಾಗಗಳಲ್ಲಿ ಹೆಚ್ಚಿನ ಎಚ್ಚರ ವಹಿಸಬೇಕು. ಹೊರ ರಾಜ್ಯ, ಜಿಲ್ಲೆಗಳಿಂದ ಯಾರೂ ಸಹ ಅಕ್ರಮವಾಗಿ ಗಡಿ ಪ್ರವೇಶಿಸದಂತೆ ಎಚ್ಚರ ವಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಅಬಕಾರಿ ಉಪ ಆಯುಕ್ತರಾದ ಪಿ.ಬಿಂದುಶ್ರೀ, ಡಿವೈಎಸ್‍ಪಿ ದಿನೇಶ್ ಕುಮಾರ್, ತಹಶೀಲ್ದಾರ ಮಹೇಶ್, ಜಿಲ್ಲಾ ಉದ್ಯೋಗವಿನಿಮಯಾಧಿಕಾರಿ ಸಿ.ಜಗನ್ನಾಥ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಇತರರು ಹಾಜರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: