ಪ್ರಮುಖ ಸುದ್ದಿ

ಕ್ವಾರೆಂಟೈನ್ ಕೇಂದ್ರದಲ್ಲಿ ಮುಂದುವರೆದ ನಿಗಾವಣೆ : 58 ಜನರ ವರದಿ ನೆಗೆಟಿವ್        

ರಾಜ್ಯ(ಚಾಮರಾಜನಗರ)ಏ.10:-  ತಬ್ಲಿಘಿ ಜಮಾತ್ ಧರ್ಮಸಭೆಯಲ್ಲಿ ಭಾಗವಹಿಸಿದ್ದವರ ಪೈಕಿ 62 ಜನರ ಗಂಟಲಿನ ದ್ರವ ಹಾಗೂ ರಕ್ತದ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಲಾಗಿದ್ದ ವರದಿ ಬಂದಿದ್ದು, 58 ಮಾದರಿಗಳ ವರದಿಯು ನೆಗೆಟಿವ್ ಆಗಿದೆ. ಉಳಿದ ನಾಲ್ವರ ವರದಿ ಫಲಿತಾಂಶ ನಿರೀಕ್ಷಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ತಿಳಿಸಿದ್ದಾರೆ

ತಬ್ಲಿಘಿ ಜಮಾತ್ ಧರ್ಮಸಭೆಯಲ್ಲಿ ಭಾಗವಹಿಸಿದ್ದ 95 ಜನರ ಪೈಕಿ 32 ಜನರನ್ನು ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದ ಕ್ವಾರೆಂಟೈನ್ ಕೇಂದ್ರ ಹಾಗೂ 63 ಜನರನ್ನು ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕ್ವಾರೆಂಟೈನ್ ಕೇಂದ್ರದಲ್ಲಿ ಪ್ರತ್ಯೇಕಿಸಿ ನಿಗಾವಣೆ ಮಾಡಲಾಗುತ್ತಿದೆ. ಫಲಿತಾಂಶ ನೆಗೆಟಿವ್ ಎಂದು ವರದಿಯಾದ ಒಟ್ಟು 79 ಜನರನ್ನು ಕ್ವಾರೆಂಟೈನ್ ಕೇಂದ್ರದಿಂದ ಬಿಡುಗಡೆ ಮಾಡಲಾಗಿದೆ. ಉಳಿದ 16 ಜನ ಹಾಗೂ ಬೇರೆ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸಿದ್ದ ನಾಲ್ವರು ಸೇರಿ ಒಟ್ಟು 20 ಜನರನ್ನು ಡಾ. ಬಿ.ಆರ್. ಅಂಬೇಡ್ಕರ್ ಭವನದ ಕ್ವಾರೆಂಟೈನ್ ಕೇಂದ್ರದಲ್ಲಿ ಪ್ರತ್ಯೇಕಿಸಿ ನಿಗಾವಣೆ ಮಾಡಲಾಗುತ್ತಿದೆ. ಇಂದು ಸಹ 10 ಜನರ ಗಂಟಲಿನ ದ್ರವ ಹಾಗೂ ರಕ್ತದ ಮಾದರಿಯನ್ನು ಪರೀಕ್ಷೆಗಾಗಿ ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದ್ದು, ಫಲಿತಾಂಶ ನಿರೀಕ್ಷಿಸಲಾಗುತ್ತಿದೆ. ಈ ಬಗ್ಗೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ತಿಳಿಸಿದ್ದಾರೆ.

ಕೊರೊನಾ ಪಾಸಿಟಿವ್ ವ್ಯಕ್ತಿಯು ಉದ್ಯೋಗ ಮಾಡುತ್ತಿದ್ದ ಮೈಸೂರು ಜಿಲ್ಲೆಯ ನಂಜನಗೂಡು ಪಟ್ಟಣದ ಜುಬಿಲಿಯೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಚಾಮರಾಜನಗರ ಜಿಲ್ಲೆಯ 52 ವ್ಯಕ್ತಿಗಳು 14 ದಿನಗಳ ಕ್ವಾರೆಂಟೈನ್ ಅವಧಿಯನ್ನು ಪೂರ್ಣಗೊಳಿಸಿರುತ್ತಾರೆ. ವಿದೇಶಗಳಿಂದ ಪ್ರಯಾಣಿಸಿ ಜಿಲ್ಲೆಗೆ ಇದುವರೆಗೆ ಒಟ್ಟು 43 ಜನರು ಬಂದಿದ್ದು ಇವರೆಲ್ಲರೂ ಸಹ 14 ದಿನಗಳ ಹೋಮ್ ಕ್ವಾರೆಂಟೈನ್ ಅವಧಿಯನ್ನು ಪೂರ್ಣಗೊಳಿಸಿರುತ್ತಾರೆ ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: