ಮೈಸೂರು

ಸುಳ್ಳು ದೂರು ಹಾಗೂ ಮಾಹಿತಿ ನೀಡಿ ಪರಿಹಾರದ ಆಹಾರ ಸಾಮಗ್ರಿಗಳ ಕಿಟ್ ಪಡೆಯಲು ಯತ್ನಿಸಿದ ವ್ಯಕ್ತಿಗೆ ಅಧಿಕಾರಿಗಳಿಂದ ತರಾಟೆ

ಮೈಸೂರು,ಏ.10:- ಮೈ‌‌ಸೂರು ಜಿಲ್ಲಾಧಿಕಾರಿಗಳಿಗೆ ‌ಸುಳ್ಳು ದೂರು ಹಾಗೂ ಮಾಹಿತಿ ನೀಡಿ ಪರಿಹಾರದ ಆಹಾರ ಸಾಮಗ್ರಿಗಳ ಕಿಟ್ ನ್ನು ಪಡೆಯಲು ಯತ್ನಿಸಿದ ವ್ಯಕ್ತಿಯೋರ್ವನಿಗೆ ಕಾರ್ಮಿಕ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ಪಿರಿಯಾಪಟ್ಟಣ ತಾಲೂಕಿನ ಬೈಲುಕೂಪ್ಪದ ಹಳೆಯೂರಿನಲ್ಲಿ ನಡೆದಿದೆ.

ಹಳೆಯೂರಿನ ನಿವಾಸಿ ಉಮಾಶಂಕರ್ ಆಲಿಯಾಸ್ ಶಂಕರ್ ಎಂಬಾತನೇ ಅಧಿಕಾರಿಗಳಿಂದ ತರಾಟೆಗೂಳಗಾಗಿದ್ದು ಮೂಲತಃ ಈತ ಉತ್ತರ ಪ್ರದೇಶದವನಾಗಿದ್ದಾನೆ. ಇತ್ತೀಚೆಗೆ ತನ್ನ ಸಂಸಾರದ ಸಮೇತ ಹಳೆಯೂರಿನ ಬಾಡಿಗೆ ಮನೆಯಲ್ಲಿ ವಾಸವಿದ್ದು   8-4-2020 ರಂದು ಮೈಸೂರು ಜಿಲ್ಲಾಧಿಕಾರಿಗಳಿಗೆ ಆನ್ಲೈನ್ ಮೂಲಕ ತನ್ನ ಕುಟುಂಬ ಊಟವಿಲ್ಲದೇ ಪರದಾಡುವಂತಾಗಿದೆ. ನಾನು ವೃತ್ತಿಯಲ್ಲಿ ಪಾನಿಪೂರಿ ವ್ಯಾಪಾರಿಯಾಗಿದ್ದು ಲಾಕ್ ಡೌನ್ ನಿಂದಾಗಿ ನನಗೆ  ವ್ಯಾಪಾರ ವಹಿವಾಟು ಸ್ಥಗಿತಗೂಂಡಿರುವ ಕಾರಣ ನನ್ನ ಕುಟುಂಬವು ತೀರಾ ಸಂಕಷ್ಟದಲ್ಲಿದ್ದು ತಾವು ಆಹಾರ ಸಾಮಾಗ್ರಿಗಳ ಪರಿಹಾರದ ಕಿಟ್ ನೀಡಬೇಕೆಂದು ಸುಳ್ಳು ದೂರು ನೀಡಿದ್ದ.  ಆದರೆ ಇಂದು ಈತನಿಗೆ ಆಹಾರ ಸಾಮಾಗ್ರಿಗಳ ಪರಿಹಾರದ ಕಿಟ್  ನೀಡಲು ಈತನ ಮನೆಗೆ ಆಗಮಿಸಿದ ಕಾರ್ಮಿಕ ನಿರೀಕ್ಷಕ ಜಯಣ್ಣ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಕೆಲಕಾಲ ದಿಗ್ಭ್ರಮೆಗೂಂಡರು. ಕಾರಣ ಸುಮಾರು ಒಂದು ತಿಂಗಳಿಗೂ ಅಧಿಕ ಕಾಲದವರೆಗೂ ಸಾಕಾಗುವಷ್ಟು ಆಹಾರ ಸಾಮಗ್ರಿಗಳು ಈತನ ಮನೆಯಲ್ಲಿ ದಾಸ್ತಾನು ಇದ್ದು ಶಂಕರನಿಗೆ ಸ್ಥಳದಲ್ಲಿಯೇ   ಅಧಿಕಾರಿಗಳು ತೀವ್ರ ತರಾಟೆಗೆ ತೆಗೆದುಕೊಂಡರು.  ಬಳಿಕ ಮಾಧ್ಯಮದೂಂದಿಗೆ ಮಾತನಾಡಿದ ಕಾರ್ಮಿಕ ನಿರೀಕ್ಷಕರಾದ  ಜಯಣ್ಣ ಜಿಲ್ಲಾಧಿಕಾರಿಗಳ ಆದೇಶದಂತೆ   ನಮ್ಮ ಅಧಿಕಾರಿಗಳ ತಂಡವು ಹಳೆಯೂರಿನ ಉಮಾಶಂಕರ್ ನಿವಾಸಕ್ಕೆ ಪಡಿತರ ದಿನಸಿ ಸಾಮಗ್ರಿಗಳನ್ನು ನೀಡಲೆಂದು ಬಂದಿದ್ದೆವು. ಆದರೆ ಈತನ ಮನೆಯಲ್ಲಿ ಸುಮಾರು ಒಂದು ತಿಂಗಳಿಗೂ ಅಧಿಕ ಕಾಲದವರೆಗೆ ಸಾಕಾಗುವಷ್ಟು ಆಹಾರ ಸಾಮಗ್ರಿಗಳು ದಾಸ್ತಾನು ಇದ್ದು ಈತ ಜಿಲ್ಲಾಧಿಕಾರಿಗಳಿಗೆ ಸುಳ್ಳು ದೂರು ನೀಡಿದ್ದಾನೆ. ತಾಲೂಕಿನಾದ್ಯಂತ ಇಂತಹ ಅದೆಷ್ಟೋ ದೂರುಗಳು ಇದ್ದು ನೈಜ ಫಲಾನುಭವಿಗಳಿಗೆ ಅನ್ಯಾಯ ವಾಗುವುದನ್ನು ತಡೆಗಟ್ಟುವ ಸಲುವಾಗಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈ ಸಂದರ್ಭ ಕಾರ್ಮಿಕ ಇಲಾಖೆಯ ಭಾಸ್ಕರ್, ಕಂದಾಯ ನಿರೀಕ್ಷಕರಾದ ಆನಂದ್,ಪ್ರದೀಪ್,ಗ್ರಾಮ ಲೆಕ್ಕಿಗರಾದ ನವೀನ್,ಸಹಾಯಕ ರಾಘವ್ ‌ಸೇರಿದಂತೆ ಇನ್ನಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: