
ಪ್ರಮುಖ ಸುದ್ದಿ
ಎತ್ತು ಖರೀದಿಸಲು ತೆರಳಿದ ವ್ಯಕ್ತಿ ಶವವಾಗಿ ಪತ್ತೆ
ರಾಜ್ಯ( ಮಡಿಕೇರಿ )ಏ.11:- : ಎತ್ತೊಂದನ್ನು ಖರೀದಿಸಲು ತೆರಳಿದ್ದ ವ್ಯಕ್ತಿಯೋರ್ವರು ಕಳೆದ ನಾಲ್ಕು ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದು ಇಂದು ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದಾರೆ .
ವಿರಾಜಪೇಟೆ ಸಮೀಪದ ಬೇಟೋಳಿ ಗುಂಡಿಕೆರೆ ನಿವಾಸಿಯಾಗಿದ್ದ, 65 ವರ್ಷ ಪ್ರಾಯದ ಎಂ.ಎಂ.ಮೂಸ ಎಂಬುವರೇ ಕಳೆದ ನಾಲ್ಕು ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿರುವ ವ್ಯಕ್ತಿಯಾಗಿದ್ದರು. ಇವರು ಕಾಣೆಯಾಗಿರುವ ಕುರಿತು ವಿರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೃಷಿಕರಾಗಿದ್ದ ಎಂ.ಎಂ.ಮೂಸ ಅವರು ಇದೇ ತಿಂಗಳ 7ರಂದು ಮಂಗಳವಾರ ಬೆಳಿಗ್ಗೆ ಗುಂಡಿಕೆರೆಯ ತಮ್ಮ ಮನೆಯಿಂದ ಹೊರಟಿದ್ದಾರೆ. ಮಧ್ಯಾಹ್ನ ನಂತರ ಬಿಟ್ಟಂಗಾಲ ಸಮೀಪದ ಕೊಳತ್ತೋಡು ಗ್ರಾಮದ ಮುರುವಂಡ ರಾಜ ಎಂಬುವರಿಗೆ ಸೇರಿದ್ದ ಎತ್ತೊಂದನ್ನು ರೂ.18000 ಹಣಕ್ಕೆ ಖರೀದಿಸಿ ಅದೇ ಎತ್ತಿನೊಂದಿಗೆ ಕಾಲ್ನಡಿಗೆಯಲ್ಲಿ ಮರಳಿದ್ದಾರೆ ಎನ್ನಲಾಗಿದೆ.
ಕೊಳತ್ತೋಡಿನಿಂದ ಹೊರಟ ಎಂ.ಎಂ.ಮೂಸ ಅವರು ರಾತ್ರಿಯಾದರೂ ಮನೆಗೆ ತಲುಪಲಿಲ್ಲ. ಕಾಲ್ನಡಿಗೆಯಲ್ಲೇ ಬರುವುದರಿಂದ ತಡರಾತ್ರಿಯಾದರೂ ಮನೆಗೆ ಬರುತ್ತಾರೆಂಬ ಭರವಸೆಯೊಂದಿಗೆ ಕಾದು ಕುಳಿತ ಮನೆಯವರಿಗೆ ಬುಧವಾರ ಬೆಳಗಿನ ಜಾವದವರೆಗೂ ಮೂಸ ಅವರು ಮನೆ ಸೇರದಿರುವುದು ಸಂಶಯ ಮೂಡಿಸಿದೆ. ಇದರಿಂದ ಆತಂಕಗೊಂಡ ಮನೆಯವರು, ಸಂಬಂಧಿಕರಿಗೆ ವಿಷಯ ತಿಳಿಸಿದಾಗ ಮೂಸ ಅವರನ್ನು ಹುಡುಕಲು ಆರಂಭಿಸಲಾಯಿತು. ಎಷ್ಟೇ ಹುಡುಕಾಡಿದರೂ ಈ ವೇಳೆ ಯಾವುದೇ ಸುಳಿವು ದೊರೆಯದಿದ್ದಾಗ ವಿರಾಜಪೇಟೆ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಯಿತು.
ದೂರು ದಾಖಲಿಸಿಕೊಂಡ ಪೊಲೀಸರು ಮೂಸ ಅವರಿಗೆ ಎತ್ತು ಮಾರಾಟ ಮಾಡಿದವರನ್ನು ವಿಚಾರಿಸಿದಾಗ, ಹಣ ಪಡೆದು ಎತ್ತು ನೀಡಿದ್ದು ನಿಜ ಎಂದಿದ್ದಾರೆ. ಆದರೆ ಇಂದು ಬೆಳಿಗ್ಗೆ ಎತ್ತು ಹಾಗೂ ಮೂಸ ಅವರ ಶವ ಬಿಟ್ಟಂಗಾಲ ಸಮೀಪ ಪೆಗ್ಗರಿ ಕಾಡು ಎಂಬಲ್ಲಿ ಪತ್ತೆಯಾಗಿದ್ದು ಇದೊಂದು ಕೊಲೆ ಎಂದು ಸಂಶಯಿಸಲಾಗಿದೆ. ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಯಿತು. ಪೋಲೀಸರು ತನಿಖೆ ನಡೆಸುತಿದ್ದಾರೆ. (ಕೆಸಿಐ,ಎಸ್.ಎಚ್)