ಪ್ರಮುಖ ಸುದ್ದಿಮೈಸೂರು

ತಂಬಾಕು ಬೆಳೆ ವಿಚಾರ : ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ಕರೆದು ಚರ್ಚಿಸಿ ಸೂಕ್ತ ತೀರ್ಮಾನ ಪ್ರಕಟಿಸಲಾಗುವುದು : ಸಚಿವ ಎಸ್.ಟಿ.ಸೋಮಶೇಖರ್

ಮೈಸೂರು,ಏ.15:-  ಕೋವಿಡ್-19 ಹಿನ್ನೆಲೆಯಲ್ಲಿ ತಂಬಾಕು ಬೆಳೆಗೆ ಸಂಬಂಧಿಸಿದಂತೆ ಉಂಟಾಗಿರುವ ಸಮಸ್ಯೆ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಟಿ. ಸೋಮಶೇಖರ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ಸಭೆ ನಡೆಸಲಾಯಿತು.

ಕೋವಿಡ್-19 ಹಿನ್ನೆಲೆಯಲ್ಲಿ ಎದುರಾಗಬಹುದಾದ ಸಮಸ್ಯೆಗಳ ಬಗ್ಗೆ ಕೂಲಂಕಷವಾಗಿ ಚರ್ಚಿಸಲಾಯಿತು.  ಜನಪ್ರತಿನಿಧಿಗಳು, ರೈತ ಮುಖಂಡರು, ತಂಬಾಕು ಮಂಡಳಿಯ ಅಧಿಕಾರಿಗಳ ಹೇಳಿಕೆ ಆಲಿಸಿದ ಉಸ್ತುವಾರಿ ಸಚಿವರು, ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ಕರೆದು, ಜನಪ್ರತಿನಿಧಿಗಳು, ತಂಬಾಕು ಖರೀದಿಸುವ ಕಂಪನಿಗಳ ಪ್ರತಿನಿಧಿಗಳು ಹಾಗೂ ಮಂಡಳಿ ಅಧಿಕಾರಿಗಳೊಂದಿಗೆ ಚರ್ಚಿಸಿ, ಸೂಕ್ತ ತೀರ್ಮಾನ ಪ್ರಕಟಿಸಲಾಗುವುದು ಎಂದು ಹೇಳಿದರು.

ಶಾಸಕರಾದ ಹೆಚ್.ಪಿ.ಮಂಜುನಾಥ್, ಕೆ. ಮಹದೇವ, ಅನಿಲ್ ಚಿಕ್ಕಮಾದು, ಹರ್ಷವರ್ಧನ್ ಅವರು ಈ ಸಂದಿಗ್ಧ ಸಮಯದಲ್ಲಿ ಗೊಬ್ಬರ, ಮಾರುಕಟ್ಟೆ ಬೆಲೆ ಮುಂತಾದ ಎದುರಾಗಬಹುದಾದ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದರು.

ಮಾಜಿ ಸಚಿವರಾದ ಅಡಗೂರು ಹೆಚ್.ವಿಶ್ವನಾಥ್ ಅವರು ಯುರೋಪ್ ದೇಶಗಳು ಕೋವಿಡ್-19 ನಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ನಮ್ಮ ತಂಬಾಕಿಗೆ ಅಲ್ಲಿಂದ ಬೇಡಿಕೆ ಬರದಿದ್ದರೆ ನಮ್ಮ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕುವ ಅಪಾಯವಿದೆ, ಕ್ರಾಪ್ ಹಾಲಿಡೆ ಘೋಷಿಸಿ, ಬೆಳೆಗಾರರಿಗೆ ಪರಿಹಾರ ನೀಡುವ ಹಾಗೂ ಪರ್ಯಾಯ ಬೆಳೆ ಬಗ್ಗೆ ಯೋಚಿಸಬಹುದು ಎಂದರು.

ಸಂಸದರಾದ ಪ್ರತಾಪ್ ಸಿಂಹ  ಮಾತನಾಡಿ, 1990ರ ದಶಕದಲ್ಲಿ ಒಮ್ಮೆ ಆಂಧ್ರಪ್ರದೇಶದಲ್ಲಿ ಕ್ರಾಪ್ ಹಾಲಿಡೆ ಮಾಡಿದ್ದರಿಂದ ನಮ್ಮ ರೈತರಿಗೆ ಒಳ್ಳೆಯ ಅವಕಾಶ ಬಂದಿದೆ. ಈಗ ನಾವು ಕ್ರಾಪ್ ಹಾಲಿಡೇ ಮಾಡಿದರೆ ಅಂತಹ ಅವಕಾಶ ಬೇರೆಯವರಿಗೆ ಸಿಕ್ಕಿ, ನಮಗೆ ನಷ್ಟ ಆಗಬಹದು, ಆದ್ದರಿಂದ ಈ ಬಗ್ಗೆ ಚರ್ಚಿಸಿ ಬೆಳೆಯ ಗಾತ್ರವನ್ನು ಕಡಿಮೆಯಾದರೂ ಮಾಡಿ ನಮ್ಮ ರೈತರು ತಂಬಾಕು ಬೆಳೆಯಲು ಅವಕಾಶ ಮಾಡಿಕೊಡುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬೆಳೆಗೆ ಬೇಕಾದ ಗೊಬ್ಬರ ಒದಗಿಸಲು ಕೇಂದ್ರ ಸರ್ಕಾರ ಎಲ್ಲಾ ರೀತಿಯ ಕ್ರಮವಹಿಸುತ್ತದೆ. ಮಾರಾಟದ ಬಗ್ಗೆ ಮಂಡಳಿ ಅಧಿಕಾರಿಗಳೊಂದಿಗೆ‌ ಚರ್ಚಿಸಿ ಒಂದೆರೆಡು ದಿನದಲ್ಲಿ ತಿಳಿಸುತ್ತೇನೆ ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: