
ಪ್ರಮುಖ ಸುದ್ದಿ
ನಾಲ್ವರ ವರದಿಯು ನೆಗೆಟಿವ್ ಬಂದಿದೆ : ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಮಾಹಿತಿ
ರಾಜ್ಯ(ಚಾಮರಾಜನಗರ)ಏ.15:- ಜಿಲ್ಲೆಯಿಂದ ಪ್ರಯೋಗಶಾಲೆಗೆ ಕಳುಹಿಸಲಾಗಿದ್ದ ಐವರ ಮಾದರಿ ಪೈಕಿ ನಾಲ್ವರ ವರದಿ ಬಂದಿದ್ದು, ಈ ಎಲ್ಲಾ ನಾಲ್ವರ ವರದಿಯು ನೆಗೆಟಿವ್ ಬಂದಿದೆ. ರೋಗಲಕ್ಷಣಗಳು ಕಂಡುಬಂದಿರುವ ಓರ್ವ ವ್ಯಕ್ತಿಯ ಗಂಟಲಿನ ದ್ರವ ಹಾಗೂ ರಕ್ತದ ಮಾದರಿಯನ್ನು ಪರೀಕ್ಷೆಗಾಗಿ ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದ್ದು, ಫಲಿತಾಂಶ ನಿರೀಕ್ಷಿಸಲಾಗುತ್ತಿದೆ. ಈ ಬಗ್ಗೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ತಿಳಿಸಿದ್ದಾರೆ.
ಒಟ್ಟಾರೆ ಇದುವರೆಗೆ ತಬ್ಲಿಘಿ ಜಮಾತ್ ಧರ್ಮಸಭೆಯಲ್ಲಿ ಭಾಗವಹಿಸಿದ್ದ 107 ಜನರ ಪ್ರಯೋಗಶಾಲಾ ವರದಿಯು ನೆಗೆಟಿವ್ ಬಂದಿದ್ದರಿಂದ ಈ ಎಲ್ಲರೂ ಕ್ವಾರೆಂಟೈನ್ನಿಂದ ಬಿಡುಗಡೆಗೊಂಡಿದ್ದಾರೆ. ಪ್ರಸ್ತುತ (ಇಂದು) ಡಾ. ಬಿ.ಆರ್. ಅಂಬೇಡ್ಕರ್ ಭವನದ ಕ್ವಾರೆಂಟೈನ್ ಕೇಂದ್ರದಲ್ಲಿ ಯಾವುದೇ ವ್ಯಕ್ತಿಯನ್ನು ನಿಗಾವಣೆ ಮಾಡಲಾಗುತ್ತಿಲ್ಲ.
ಕೊರೋನಾ ಪಾಸಿಟಿವ್ ವ್ಯಕ್ತಿಯು ಉದ್ಯೋಗ ಮಾಡುತ್ತಿದ್ದ ಮೈಸೂರು ಜಿಲ್ಲೆಯ ನಂಜನಗೂಡು ಪಟ್ಟಣದ ಜುಬಿಲಿಯೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಚಾಮರಾಜನಗರ ಜಿಲ್ಲೆಯ 52 ವ್ಯಕ್ತಿಗಳು ಮತ್ತು ವಿದೇಶಗಳಿಂದ ಪ್ರಯಾಣಿಸಿ ಜಿಲ್ಲೆಗೆ ಇದುವರೆಗೆ ಒಟ್ಟು 43 ಜನರು ಬಂದಿದ್ದು ಇವರೆಲ್ಲರೂ ಸಹ 14 ದಿನಗಳ ಹೋಮ್ ಕ್ವಾರೆಂಟೈನ್ ಅವಧಿಯನ್ನು ಪೂರ್ಣಗೊಳಿಸಿರುತ್ತಾರೆ ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)