ಮೈಸೂರು

ಬೆಳಿಗ್ಗೆ 6ರಿಂದ 12ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ: ದ್ವಿಚಕ್ರವಾಹನದಲ್ಲಿ ಸವಾರನೊಬ್ಬನೇ ಇರಬೇಕು; ಆದೇಶ ಇಂದಿನಿಂದಲೇ ಜಾರಿ ; ಡಾ.ಚಂದ್ರಗುಪ್ತ

ಮೈಸೂರು, ಏ.16:-   ಕೋವಿಡ್-19 ನಿಯಂತ್ರಣಕ್ಕೆ ಸಾಕಷ್ಟು ಕ್ರಮಗಳನ್ನು, ನಿರ್ಬಂಧಗಳನ್ನು ಕೈಗೊಂಡಿದ್ದೇವೆ. ಮೈಸೂರು ನಗರದಲ್ಲಿ ಲಾಕ್‌ಡೌನ್  ಮೇ3ರ ವರೆಗೂ ಮುಂದುವರಿಯಲಿದೆ. ಮೈಸೂರು ಹಾಟ್‌ಸ್ಪಾಟ್ ಘೋಷಣೆಯಾಗಿದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದರು.

ಅವರಿಂದು ತಮ್ಮ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ  ಮೂರು ಹಂತದ ಆದೇಶ ಜಾರಿಯಾಗಿದೆ. ಬೆಳಿಗ್ಗೆ 6 ಮಧ್ಯಾಹ್ನ12 ಗಂಟೆ ವರೆಗೆ ಲಾಕ್‌ಡೌನ್ ನಡುವೆ ಅಗತ್ಯ ವಸ್ತು ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ದ್ವಿಚಕ್ರ ವಾಹನದಲ್ಲಿ ಸವಾರನಿಗೆ ಮಾತ್ರ ಅವಕಾಶ. ನಾಲ್ಕು ಚಕ್ರದ ವಾಹನದಲ್ಲಿ ಚಾಲಕ ಒಳಗೊಂಡಂತೆ ಇಬ್ಬರಿಗೆ ಮಾತ್ರ ಅವಕಾಶ  ಅಂದರೆ ಇಬ್ಬರಿಗೆ  ಮಾತ್ರ ಅವಕಾಶ ಕಲ್ಪಿಸಲಾಗಿದೆ. ಆದೇಶ ಉಲ್ಲಂಘಿಸಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.

ಈ ಸಮಯದಲ್ಲಿ ಯಾವುದೇ ಕಾರಣಕ್ಕೂ ಸಾರ್ವಜನಿಕರು ತಮ್ಮ ಮನೆಯಿಂದ 02ಕಿ.ಮೀ ವ್ಯಾಪ್ತಿಗಿಂತ ದೂರಕ್ಕೆ ಪ್ರಯಾಣಿಸಲು ಅವಕಾಶವಿಲ್ಲ. ತಮ್ಮ ಮನೆಯ ಹತ್ತಿರದ ಮಳಿಗೆಗಳಲ್ಲೇ ಅಗತ್ಯ ವಸ್ತುಗಳನ್ನು ಪಡೆಯಬೇಕು. ಮಳಿಗೆದಾರರು ದಾಸ್ತಾನು ಲಭ್ಯವಿರುವಂತೆ ಕ್ರಮವಹಿಸಬೇಕು ಎಂದರು.

ಮಧ್ಯಾಹ್ನ 12ರಿಂದ ಸಂಜೆ 6ಗಂಟೆ  ಈ ಸಮಯದಲ್ಲಿ ಎಲ್ಲ ಅಗತ್ಯ ವಸ್ತು ಮತ್ತು ಸೇವೆಗಳ ಮಳಿಗೆಗಳು ತೆರೆದಿರಲು ಅವಕಾಶವಿರುತ್ತದೆ. ಆದರೆ ಅವುಗಳನ್ನು ಪಡೆಯ ಬಯಸುವ ಸಾರ್ವಜನಿಕರು ಕಾಲುನಡಿಗೆಯಲ್ಲಿಯೇ ಹೊರಗೆ ಓಡಾಡಬೇಕಾಗುತ್ತದೆ. ಈ ಸಮಯದಲ್ಲಿ ತಮ್ಮ ವಾಹನಗಳನ್ನು ಉಪಯೋಗಿಸಲು ಅವಕಾಶವಿರುವುದಿಲ್ಲ ಎಂದರು.

ಸಂಜೆ 6ರಿಂದ ಬೆಳಿಗ್ಗೆ 6ಗಂಟೆಯವರೆಗೆ ಈ ಸಂದರ್ಭದಲ್ಲಿ ಸಹ ವೈದ್ಯಕೀಯ ಕಾರಣ ಹೊರತುಪಡಿಸಿ ಮನೆಯಿಂದ ಹೊರಗೆ ಬರಲು ಅವಕಾಶವಿಲ್ಲ. ಹಾಲು, ಔಷಧಿ ಮಳಿಗೆ ಮತ್ತು ಆಸ್ಪತ್ರೆ ಹೊರತುಪಡಿಸಿ ಯಾವುದೇ ವ್ಯಾಪಾರ ವಹಿವಾಟಿಗೆ ಅವಕಾಶವಿಲ್ಲ. ಮನೆಯಿಂದ ಹೊರಬರುವ ಎಲ್ಲ ಸಾರ್ವಜನಿಕರು ಕಡ್ಡಾಯವಾಗಿ ಗುರುತಿನ ಚೀಟಿಯನ್ನು ಹೊಂದಿರತಕ್ಕದ್ದು. ಅಗತ್ಯ ಸೇವೆಗಳಲ್ಲಿ ನಿರತರಾಗಿರುವ ಖಾಸಗಿ ವ್ಯಕ್ತಿಗಳು ಕಡ್ಡಾಯವಾಗಿ ಪಾಸ್ ಹೊಂದಿರತಕ್ಕದ್ದು. (ಪೊಲೀಸ್ ಕಮೀಷನ್ ಅವರ ಕಛೇರಿ, ಮೈಸೂರು ಮಹಾನಗರಪಾಲಿಕೆ, ಹಾಗೂ ಜಿಲ್ಲಾಧಿಕಾರಿಗಳ ಕಛೇರಿಯಿಂದ ನೀಡಿರುವ ಪಾಸ್ ಮಾತ್ರ ಮಾನ್ಯವಾಗಿರುತ್ತದೆ)

ವೈದ್ಯಕೀಯ ಸೇವೆ ಬಯಸುವ ಸಾರ್ವಜನಿಕರು ಕಡ್ಡಾಯವಾಗಿ ವೈದ್ಯರಿಂದ ಪಡೆದ ವೈದ್ಯಕೀಯ ಸಲಹಾ ಚೀಟಿಗಳನ್ನು/ರಶೀದಿಯನ್ನು ಹೊಂದಿರತಕ್ಕದ್ದು. ತಪಾಸಣೆ ವೇಳೆ ಕಡ್ಡಾಯವಾಗಿ ಹಾಜರುಪಡಿಸತಕ್ಕದ್ದು. ಈ ಆದೇಶವು ತುರ್ತು ವೈದ್ಯಕೀಯ ಸೇವೆಗಳು, ಎಲ್ಲಾ ರೀತಿಯ ಸರಕು ಸಾಗಿಸುವ ವಾಹನಗಳು, ಅಗತ್ಯ ಸೇವೆಗಳ ಪೂರೈಕೆಯಲ್ಲಿ ನಿರತವಾಗಿರುವ ಪಾಸ್ ಹೊಂದಿರುವ ಖಾಸಗಿ ವಾಹನಗಳು, ಸರ್ಕಾರಿ ವಾಹನಗಳು, ಕರ್ತವ್ಯ ನಿರತ ಸರ್ಕಾರಿ ನೌಕರರ ವಾಹನಗಳು, ಹಾಪ್ ಕಾಮ್ಸ್, ಪಡಿತರ, ಆಹಾರ ಪದಾರ್ಥಗಳು, ಹೋಂಡೆಲಿವರಿ ಹಾಗೂ ಕಿಚನ್ ಸೇವೆಗಳಿಗೆ ಅನ್ವಯಿಸುವುದಿಲ್ಲ. ಈ ಆದೇಶವು ಕೋವಿಡ್-19 ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಕಾಲಕಾಲಕ್ಕೆ ಹೊರಡಿಸಲ್ಪಡುವ ಆದೇಶಗಳ  ನಿಬಂಧನೆಗೊಳಪಟ್ಟಿರುತ್ತದೆ ಎಂದು ತಿಳಿಸಿದರು. ಈ ಆದೇಶವು ಇಂದಿನಿಂದಲೇ ಜಾರಿಯಾಗಲಿದೆ ಎಂದು ಮಾಹಿತಿ ನೀಡಿದರು.

ಮೈಸೂರಿನಲ್ಲಿ ಕೊರೋನಾ ಪಾಸಿಟಿವ್ ಪ್ರಕರಣ ಕುರಿತು ವಿವರಿಸಿ ಮೈಸೂರಿನ 15 ಸ್ಥಳಗಳಲ್ಲಿ ನಿಗಾ ಇಡಲಾಗಿದೆ. ಅಲ್ಲಿ ಹೆಚ್ಚಿ‌ನ ಭದ್ರತೆ ಒದಗಿಸಲಾಗಿದೆ. ಮಾರ್ಚ್ 16ರಿಂದ ಪೊಲೀಸರು ಹೇಗಿರಬೇಕು ಎಂಬುದನ್ನು ಹೇಳಿದ್ದೇವೆ. ಯಾವುದೇ ವ್ಯಕ್ತಿ, ವಸ್ತು ಮುಟ್ಟುವುದನ್ನು ಬೇಡ ಎಂದಿದ್ದೇವೆ. ಯಾರಿಗೂ ಈವರೆಗೂ ಸೋಂಕು ಬಂದಿಲ್ಲ. ನಿತ್ಯ ಸಿಬ್ಬಂದಿಗಳ‌ ಮಾನಿಟರ್ ನಡೆಯುತ್ತಿದೆ. ಈಗಲೂ ನಮ್ಮ‌ ಸಿಬ್ಬಂದಿಗಳು ಹೊರಗೆ ಯಾರಿಂದಲೂ ಊಟ ಪಡೆಯುವುದು ಬೇಡ. ಕೋವಿಡ್ ಆಸ್ಪತ್ರೆ ಮುಂದೆ ಇನ್ಸಪೆಕ್ಟರ್ ಮಟ್ಟದ ಭದ್ರತೆ ಇದೆ. ಸದಾ ಅವರ ಮಾನಿಟರ್ ಕೂಡ ನಡೆಯುತ್ತಿದೆ. ಅವರು ಆಸ್ಪತ್ರೆ ಒಳಗೆ ಹೋಗುವುದಿಲ್ಲ, ಹೊರಗೆ ಇರುತ್ತಾರೆ ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: