ಮೈಸೂರು

ಕಾರಿನ ಟೈರ್ ಸ್ಪೋಟ : ವಿದ್ಯುತ್ ಕಂಬಕ್ಕೆ ಗುದ್ದಿದ ಕಾರು: ಬೈಕ್ ಭಸ್ಮ

ಚಲಿಸುತ್ತಿದ್ದ ಕಾರಿನ ಹಿಂಭಾಗದ ಚಕ್ರ ಸ್ಫೋಟಗೊಂಡು ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ವಿದ್ಯುತ್ ಕಂಬಕ್ಕೆ ರಭಸದಿಂದ ಗುದ್ದಿದ ಪರಿಣಾಮ ಐದು ವಿದ್ಯುತ್ ಕಂಬಗಳು ನೆಲಕ್ಕುರುಳಿ, ವಿದ್ಯುತ್ ತಂತಿ ಸ್ಪರ್ಶಿಸಿದ ಬೈಕೊಂದು ಸಂಪೂರ್ಣ ಭಸ್ಮವಾದ ಘಟನೆ ಮೈಸೂರಿನ ರೇಸ್ ಕೋರ್ಸ್ ರಸ್ತೆಯಲ್ಲಿ ನಡೆದಿದೆ.

ಗಾಯತ್ರಿಪುರಂ ನಿವಾಸಿ ಸಂತೋಷ್ ಎಂಬವರು ತಮ್ಮ ವರ್ಣಾ ಕಾರಿನಲ್ಲಿ ಚಾಮುಂಡಿ ಬೆಟ್ಟದ ಕಡೆಯಿಂದ ರೇಸ್ ಕೋರ್ಸ್ ರಸ್ತೆಯಲ್ಲಿ ಬರುತ್ತಿದ್ದರು. ಈ ವೇಳೆ ಅವರ ಕಾರಿನ ಹಿಂಭಾದ ಚಕ್ರ  ಸ್ಫೋಟಗೊಂಡಿದೆ. ಕಾರು ಅವರ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಬಲವಾಗಿ ಗುದ್ದಿದೆ. ಗುದ್ದಿದ ರಭಸಕ್ಕೆ 5 ವಿದ್ಯುತ್ ಕಂಬಗಳು ಧರೆಗುರುಳಿವೆ. ಇದೇ ಸಮಯದಲ್ಲಿ ಮಹಾನಗರಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭರತ್ ಎಂಬವರು ಇದೇ ಮಾರ್ಗವಾಗಿ ಬೈಕ್ ನಲ್ಲಿ  ಸಾಗಿ ಬರುತ್ತಿದ್ದು, ಅದೃಷ್ಟವಶಾತ್ ವಿದ್ಯುತ್ ತಂತಿಗಳು ಉರುಳಿ ಬೀಳುತ್ತಿರುವುದನ್ನು ಕಂಡು ಬೈಕ್ ನಿಂದ ಜಿಗಿದಿದ್ದಾರೆ. ಇದರಿಂದ ಅವರಿಗೆ ಯಾವುದೇ ಅನಾಹುತವಾಗಿಲ್ಲ. ಆದರೆ ವಿದ್ಯುತ್ ತಂತಿಯನ್ನು ಸ್ಪರ್ಶಿಸಿದ ಅವರ ಬೈಕ್ ಸಂಪೂರ್ಣ ಸುಟ್ಟು ಭಸ್ಮವಾಗಿದೆ.

ಸ್ಥಳಕ್ಕೆ ಅಗ್ನಿಶಾಮಕ ಠಾಣಾ ಸಿಬ್ಬಂದಿಗಳು ಆಗಮಿಸಿದ್ದಾರೆ. ಸಿದ್ದಾರ್ಥನಗರದ ಸಂಚಾರಿಠಾಣಾ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ, ಚೆಸ್ಕಾಂಗೂ ಮಾಹಿತಿ ನೀಡಲಾಗಿದ್ದು, ವಿದ್ಯುತ್ ಸ್ಥಗಿತಗೊಳಿಸಲಾಗಿದೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: