ಮೈಸೂರು

ಕರ್ತವ್ಯದಲ್ಲಿದ್ದ ಪತ್ರಕರ್ತನ ಮೇಲೆ ಹಲ್ಲೆ : ಪತ್ರಕರ್ತರ ಸಂಘದಿಂದ ಖಂಡನೆ ; ಪರಿಶೀಲಿಸಿ ಕ್ರಮ ಸಚಿವ ಸೋಮಶೇಖರ್

ಮೈಸೂರು,ಏ.20:- ಕರ್ತವ್ಯದಲ್ಲಿದ್ದ ಪತ್ರಕರ್ತನೋರ್ವನಿಗೆ  ಪೊಲೀಸ್ ಕಾನ್ಸಟೇಬಲ್ ಓರ್ವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಲಾಠಿಯಿಂದ ಹಲ್ಲೆ ನಡೆಸಿದ ಘಟನೆ ಮೈಸೂರಿನಲ್ಲಿ ಶನಿವಾರ ನಡೆದಿದ್ದು, ಇದಕ್ಕೆ  ಖಂಡನೆ ವ್ಯಕ್ತವಾಗಿದೆ.

ಖಾಸಗಿ ಸುದ್ದಿವಾಹಿನಿಯ ವರದಿಗಾರ ಯಶಸ್ ಅರಸ್ ಮಾವತ್ತೂರು ಅವರ ಮೇಲೆ ಕುವೆಂಪುನಗರ ಪೊಲೀಸ್ ಠಾಣೆಯ ಕಾನ್ಸಟೇಬಲ್ ಯುವರಾಜ, ಪಿಸಿಆರ್ ವಾಹನ ಚಾಲಕ ಹಲ್ಲೆ ಮಾಡಿದ್ದಾರೆಂದು ದೂರು ನೀಡಲಾಗಿದೆ.

ಕರ್ತವ್ಯ ನಿಮಿತ್ತ ಕುವೆಂಪುನಗರದ ಜ್ಞಾನಗಂಗಾ ಶಾಲೆಯ ಬಳಿ ಯಶಸ್ ಅವರು ಬೈಕ್ ನಲ್ಲಿ ತೆರಳುತ್ತಿದ್ದ ವೇಲೆ ಅವರನ್ನು ಪಿಸಿಆರ್ ವಾಹನದಲ್ಲಿ ಕರ್ತವ್ಯದಲ್ಲಿದ್ದ ಮಹಿಳಾ ಎಎಎಸ್ ಐ, ಕಾನ್ಸಟೇಬಲ್ ಯುವರಾಜ್ ತಡೆದಿದ್ದಾರೆ. ಮಾಧ್ಯಮದವರು ಎಂದು ಹೇಳಿದರೂ ಕೇಳದ ಕಾನ್ಸಟೇಬಲ್ ಮಾತಿಗೆ ಮಾತು ಬೆಳೆಸಿ ಅವಾಚ್ಯ ಶಬ್ದ ಬಳಸಿದ್ದು, ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಾಗ ಯುವರಾಜ್ ತಮ್ಮ ಪೈಬರ್ ಲಾಠಿಯಿಂದ ಯಶಸ್ ಮೇಲೆ ಪ್ರಹಾರ ನಡೆಸಿದ್ದಾರೆ ಎನ್ನಲಾಗಿದೆ. ಯಶಸ್ ಬಳಿ ಇದ್ದ ಮೊಬೈಲ್ ನ್ನು ಕಿತ್ತುಕೊಂಡು ಬಲವಂತವಾಗಿ ಕುವೆಂಪುನಗರ ಪೊಲೀಸ್ ಠಾಣೆಗೆ ಎಳೆದುಕೊಮಡು ಹೋಗಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡದಂತೆ ಸುಮಾರು ಎರಡು ಗಂಟೆಗಳ ಕಾಲ ಠಾಣೆಯಲ್ಲಿ ಕೂಡಿ ಹಾಕಿ ಮಾನಸಿಕ ಹಿಂಸೆ ನೀಡಿದ್ದಾರೆ. ಬಳಿಕ ಠಾಣೆಗೆ ಆಗಮಿಸಿದ ಇನ್ಸಪೆಕ್ಟರ್ ರಾಜು ಅವರು ಯಶಸ್ ಅವರನ್ನು ಬಿಟ್ಟು ಕಳಿಸಿದ್ದಾರೆ. ಮಾಧ್ಯಮದವರಿಗೆ ನಿರ್ಬಂಧ ಇಲ್ಲ ಎಂದು ಘೋಷಿಸಿದ್ದರೂ ನಗರ ಪೊಲೀಸರು  ಕೆಲವೆಡೆ ಅದನ್ನು ಪಾಲಿಸಿದಂತೆ ಕಾಣಿಸುತ್ತಿಲ್ಲ.

ಪತ್ರಕರ್ತರ ಸಂಘದಿಂದ ಖಂಡನೆ

ಪತ್ರಕರ್ತನ ಮೇಲೆ ಹಲ್ಲೆ ಮಾಡಿ ಮಾನಸಿಕ ಹಿಂಸೆ ನೀಡಿರುವುದನ್ನು ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ತೀವ್ರವಾಗಿ ಖಂಡಿಸಿದ್ದು  ಕಾನ್ಸಟೇಬಲ್, ವಾಹನ ಚಾಲಕನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಸತ್ಯಾಸತ್ಯತೆ ಪರಿಶೀಲಿಸಿ ಸೂಕ್ತ ಕ್ರಮ : ಸಚಿವ ಎಸ್.ಟಿ.ಸೋಮಶೇಖರ್

ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮಾಧ್ಯಮವನ್ನು ಅಗತ್ಯ ಸೇವೆಗಳಲ್ಲಿ ಒಂದು ಎಂದು ಕೇಂದ್ರ ಸರ್ಕಾರ ಸಹಿತ ರಾಜ್ಯ ಸರ್ಕಾರಗಳು ಪರಿಗಣಿಸಿವೆ.  ಕೊರೋನಾ ವೈರಸ್ ನ ಈ ಸಂದರ್ಭದಲ್ಲಿ ಪತ್ರಕರ್ತರು ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿದ್ದಾರೆ.  ಇಂತಹ ಸಂದರ್ಭದಲ್ಲಿ ಪತ್ರಕರ್ತರೊಬ್ಬರ ಮೇಲೆ ಪೊಲೀಸರು ಹಲ್ಲೆ ನಡೆಸಿರುವುದು ಸರಿಯಲ್ಲ. ಅವರ ಕೆಲಸಕ್ಕೆ ಸಹಕಾರ ಕೊಡುವಂತಹ ಕೆಲಸ ಪೊಲೀಸರಿಂದ ಆಗಬೇಕು. ಹಲ್ಲೆ ಪ್ರಕರಣವನ್ನು ನಾನು ಗಂಭೀರವಾಗಿ ಪರಿಗಣಿಸಿದ್ದು, ಸತ್ಯಾಸತ್ಯತೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದೇನೆ ಎಂದಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: