ಮೈಸೂರು

ದಿನದ ಕೆಲಸದ ಅವಧಿ 8 ರಿಂದ 12 ಗಂಟೆ ಹೆಚ್ಚಳ ಬೇಡ ಎಂದು ಒತ್ತಾಯಿಸಿ ಸಿಐಟಿಯು ವತಿಯಿಂದ ರಾಷ್ಟ್ರವ್ಯಾಪಿ ಮನೆಯಿಂದಲೇ ಚಳುವಳಿ

ಮೈಸೂರು,ಏ.21:- ವಿವಿಧ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ಎಲ್ಲಾ ವಿಭಾಗದ ಕಾರ್ಮಿಕರು ತಮ್ಮ ಮನೆಗಳಲ್ಲಿಯೇ ಪ್ಲೇ ಕಾರ್ಡ್‍ಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.

ಸಿಐಟಿಯು ಕರ್ನಾಟಕ ರಾಜ್ಯ ಸಮಿತಿಯ ಅಧ್ಯಕ್ಷರಾದ ಎಸ್ .ವರಲಕ್ಷ್ಮಿ ಮಾತನಾಡಿ  ಕೇಂದ್ರ ಸರ್ಕಾರವು ರಾಷ್ಟ್ರವ್ಯಾಪಿ ಲಾಕ್‍ಡೌನ್ ಅನ್ನು 3 ಮೇ 2020 ರ ತನಕ ವಿಸ್ತರಣೆ ಮಾಡಿದೆ. ತಮ್ಮ ಏಕಮಾತ್ರ ಆದಾಯವನ್ನು ನಂಬಿರುವ ಲಕ್ಷಾಂತರ ಕುಟುಂಬಗಳು ಇಂದು ಅಕ್ಷರಶಃ ಬೀದಿ ಪಾಲಾಗಿವೆ. ಇವರಿಗೆ ಯಾವುದೇ ರೀತಿಯ ಪರಿಹಾರ ಒದಗಿಸುವ ವಿಶೇಷ ಪ್ಯಾಕೇಜ್‍ಗಳನ್ನು ಘೋಷಣೆ ಮಾಡಿಲ್ಲ. ಈ ಲಾಕ್‍ಡೌನ್ ನಿಂದ ಅಸಂಘಟಿತ ಕಾರ್ಮಿಕರು, ಸಂಘಟಿತ ವಲಯದ ಗುತ್ತಿಗೆ, ಹೊರ ಗುತ್ತಿಗೆ, ಹಂಗಾಮಿ ಕಾರ್ಮಿಕರು, ನೀಮ್ ತರಬೇತಿದಾರರು, ಅಪ್ರೆಂಟಿಸ್‍ಗಳು, ಟ್ರೈನಿಗಳು ಮುಂತಾದವರು ಕಟ್ಟಡ ಕಾರ್ಮಿಕರನ್ನೊಳಗೊಂಡಂತೆ ಇಟ್ಟಿಗೆ, ಹೆಂಚು ಇಂತಹ ಕೆಲಸಗಳಲ್ಲಿ ತೊಡಗಿರುವ ವಲಸೆ ಕಾರ್ಮಿಕರು, ಖಾಸಗಿ ಸಾರಿಗೆ ಕಾರ್ಮಿಕರು ತೀವ್ರತರವಾದ ಕಷ್ಟ ಅನುಭವಿಸುತ್ತಿದ್ದಾರೆ. ಸೂಕ್ಷ್ಮ ಮತ್ತು ಸಣ್ಣ ಉದ್ದಿಮೆಗಳ ಕಾರ್ಮಿಕರು, ಪತ್ರಕರ್ತರು, ಮಾಹಿತಿ ತಂತ್ರಜ್ಞಾನ, ಸೇವಾ ನೌಕರರು, ಸಂಘಟಿತ ವಲಯದ ಖಾಯಂ ಕಾರ್ಮಿಕರು ಇದರಿಂದ ಹೊರತಾಗಿಲ್ಲ. ಸ್ಕೀಮ್ ನೌಕರರು ಕೋವಿಡ್ 19 ತಡೆ ಕೆಲಸಗಳಲ್ಲಿ ಮುಂದಾಳುಗಳಾಗಿ ಯಾವುದೇ ರಕ್ಷಣೆಯಿಲ್ಲದೆ ದುಡಿಯುತ್ತಿದ್ದಾರೆ. ಸಂಪತ್ತನ್ನು ಸೃಷ್ಟಿ ಮಾಡುವುದರೊಂದಿಗೆ ಸಮಾಜದ ಚಲನೆಯ ಯಂತ್ರಗಳಾಗಿರುವ ಕಾರ್ಮಿಕರು ಇಂದು ಕೆಲಸ ಕಳೆದುಕೊಂಡು ನೆಲೆಯಿಲ್ಲದೆ ನರಳುವಂತಾಗಿದೆ. ಕಾರ್ಪೊರೇಟ್ ಯಜಮಾನರು ತಮ್ಮ ಲಾಭವನ್ನು ರಕ್ಷಿಸಿಕೊಳ್ಳುವ ಸಲುವಾಗಿ ಕೊರೋನಾ ಸಮಸ್ಯೆಯಿಂದ ತಮ್ಮ ಲಾಭದಲ್ಲಿ ಶೇ. 10 ಲಾಭ ಕಡಿಮೆಯಾಗಿದೆ. ಆದ್ದರಿಂದ ಕಾರ್ಮಿಕರ ಕೆಲಸದ ಅವಧಿಯನ್ನು 8 ಗಂಟೆಯಿಂದ 12 ಗಂಟೆಗಳಿಗೆ ಹೆಚ್ಚಿಸಲು ಮುಂದಾಗಿರುವುದಷ್ಟೇ ಅಲ್ಲದೇ ಕಾರ್ಮಿಕರ ಕುರಿತು ಸಂಸದೀಯ ಸ್ಥಾಯಿ ಸಮಿತಿ ಬಳಿಯಿರುವ ಮೂಲಕ ಕಾರ್ಮಿಕ ಸಂಹಿತೆಗಳ ಕಾಯ್ದೆಯಾಗಿಸಲು ಕೇಂದ್ರ ಸರ್ಕಾರ ಮುಂದಾಗುತ್ತಿದೆ.  ವಿವಿಧ  ಬೇಡಿಕೆಗಳನ್ನು ಒತ್ತಾಯಿಸಿ ಇಂದು  ಬೆಳಿಗ್ಗೆ 10.30 ರಿಂದ 10.45 ರ ತನಕ ಎಲ್ಲಾ ವಿಭಾಗದ ಕಾರ್ಮಿಕರು ತಮ್ಮ ಮನೆಗಳಲ್ಲಿಯೇ ಪ್ಲೇ ಕಾರ್ಡ್‍ಗಳನ್ನು ಹಿಡಿದು ತಮ್ಮ ಪ್ರತಿಭಟನೆಯ ಸಂದೇಶವನ್ನು ಆಳುವ ಪ್ರಭುಗಳಿಗೆ ತಿಳಿಸುತ್ತಿದ್ದೇವೆ ಎಂದರು.

ಕೆಲಸದ ಅವಧಿಯನ್ನು ಯಾವುದೇ ಸ್ವರೂಪದಲ್ಲಿ 8 ರಿಂದ 12 ಗಂಟೆಗೆ ಹೆಚ್ಚಿಸಬಾರದು. ಕೂಡಲೇ ವಲಸೆ ಕಾರ್ಮಿಕರಿಗೆ ಒಳ್ಳೆಯ ವಸತಿ ಮತ್ತು ಆಹಾರಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕು. ಕೊರೋನಾ ತಡೆಗಟ್ಟಲು ಮುಂದಾಳುಗಳಾಗಿ ಕೆಲಸ ಮಾಡುತ್ತಿರುವ ಆರೋಗ್ಯ ಮತ್ತು ಅಗತ್ಯ ಸೇವಾ ಕಾರ್ಯಕರ್ತರಿಗೆ ಕೂಡಲೇ ರಕ್ಷಣಾ ಪರಿಕರಗಳನ್ನು ಒದಗಿಸಿ, ಅವರ ವೇತನದ ಒಂದು ಪಟ್ಟು ಹೆಚ್ಚು ನೀಡಬೇಕು. ಗುತ್ತಿಗೆ, ಹೊರಗುತ್ತಿಗೆ, ಕ್ಯಾಶ್ಯುವಲ್ ಆಗಿ ದುಡಿಯುತ್ತಿರುವ ಕಾರ್ಮಿಕರನ್ನು ಮತ್ತು ಯಾವುದೇ ಉದ್ಯಮದ ಕಾರ್ಮಿಕರು ಮತ್ತು ನೌಕರರನ್ನು ಕೆಲಸದಿಂದ ತೆಗೆಯಬಾರದು. ಪತ್ರಿಕೆಗಳ ವರದಿಗಾರರು ಮತ್ತು ಐಟಿ/ಬಿಟಿ ಗಳಲ್ಲಿ ದುಡಿಯುತ್ತಿರುವ ನೌಕರರನ್ನು ಕೆಲಸದಿಂದ ತೆಗೆಯಬಾರದು. ಎಲ್ಲರಿಗೂ ವೇತನವನ್ನು ಖಾತ್ರಿ ಪಡಿಸಬೇಕು. ಕೆಲಸದಿಂದ ತೆಗೆಯುವ, ವೇತನ ಕಡಿತ ಮಾಡುವ ಮೂಲಕ ಕೇಂದ್ರ ಸರ್ಕಾರದ ನಿರ್ದೇಶನಗಳು ಮತ್ತು ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಉದ್ಯಮಗಳ ವಿರುದ್ಧ ಕಟ್ಟುನಿಟ್ಟಿನ ಕಠಿಣ ಕ್ರಮ ಕೈಗೊಳ್ಳಬೇಕು. ಆದಾಯರಹಿತ ಅಸಂಘಟಿತ ಕ್ಷೇತ್ರದ ಕಾರ್ಮಿಕರಿಗೆ ತಿಂಗಳಿಗೆ 7500 ರೂ.ಗಳನ್ನು ಅವರ ಬ್ಯಾಂಕ್ ಖಾತೆಗಳಿಗೆ 3 ತಿಂಗಳ ಅವಧಿಗೆ ಕೂಡಲೇ ವರ್ಗಾಯಿಸಬೇಕು .

ಕೃಷಿ ವಲಯ ಚಟುವಟಿಕೆಗಳನ್ನು ಕೂಡಲೇ ಪ್ರಾರಂಭಿಸಿ, ವ್ಯವಸಾಯೋತ್ಪನ್ನಗಳ ಕೊಯ್ಲು, ಸಾಗಾಟ ಮತ್ತು ಮಾರಾಟಕ್ಕೆ ಆರ್ಥಿಕ ನೆರವು ಒದಗಿಸಬೇಕು. ಉದ್ಯೋಗ ಖಾತ್ರಿ ಯೋಜನೆಯನ್ನು ನಗರ ಪ್ರದೇಶಗಳಿಗೂ ವಿಸ್ತರಿಸಿ, ಈ ಯೋಜನೆಯಡಿಯಲ್ಲಿ ಕೆಲಸವನ್ನು ವರ್ಷದಲ್ಲಿ 200 ದಿನಗಳಿಗೆ ಹೆಚ್ಚಿಸಿ. ಉದ್ಯೋಗ ಖಾತ್ರಿ ಯೋಜನೆಯ ಕೂಲಿಕಾರರಿಗೆ ಬಾಕಿಯಿರುವ ವೇತನವನ್ನು ಕೂಡಲೇ ಪಾವತಿಸಬೇಕು. ಹೆಚ್ಚುತ್ತಿರುವ ಕೌಟುಂಬಿಕ ಕಲಹಗಳನ್ನು ತಡೆಯಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಸ್ವಸಹಾಯ ಗುಂಪುಗಳಿಗೆ ಬಡ್ಡಿರಹಿತ ಸಾಲ ಕೊಡಬೇಕು ಎಂದು ಒತ್ತಾಯಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: