ಕರ್ನಾಟಕಪ್ರಮುಖ ಸುದ್ದಿ

ಕನ್ನಡ ಬೇಡವೆಂದ ಐಎಎಸ್ ಅಧಿಕಾರಿ ವಿರುದ್ಧ ಸೂಕ್ತ ಕ್ರಮ : ಸಿಎಂ

ಬೆಂಗಳೂರು: ಇಂಗ್ಲಿಷ್‍ನಲ್ಲಿ ಕಡತ ಕಳುಹಿಸುವಂತೆ ಐಎಎಸ್ ಅಧಿಕಾರಿ, ಸಾರ್ವಜನಿಕ ಉದ್ದಿಮೆಗಳ ಇಲಾಖೆ ಕಾರ್ಯದರ್ಶಿ ಶ್ರೀವತ್ಸ ಕೃಷ್ಣ ಅವರು ಆದೇಶ ಮಾಡಿದ್ದು ತಪ್ಪು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ವಿಧಾನಸೌಧ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಯವರು, ರಾಜ್ಯದಲ್ಲಿರುವ ಐಎಎಸ್ ಅಧಿಕಾರಿಗಳು ಕನ್ನಡದಲ್ಲೇ ವ್ಯವಹರಿಸಬೇಕು. ಕನ್ನಡವನ್ನೇ ಕಡ್ಡಾಯವಾಗಿ ಬಳಕೆ ಮಾಡಬೇಕು ಎಂದು ತಿಳಿಸಿದರು.

ಶ್ರೀವತ್ಸ ಕೃಷ್ಣ ಅವರು ಇಂಗ್ಲಿಷ್‍ನಲ್ಲಿ ಕಡತ ಮಂಡಿಸುವಂತೆ ಆದೇಶ ಮಾಡಿರುವ ಕುರಿತು ಮಾಹಿತಿ ಪಡೆಯುತ್ತೇನೆ. ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಹೇಳಿದರು.

ಚುನಾವಣೆ ಕಾರಣಕ್ಕೆ ಬಿಜೆಪಿ ರಾಜಕೀಯ:

ಬಜೆಟ್ ಕುರಿತು ಸಾರ್ವಜನಿಕರು, ಮಾಧ್ಯಮಗಳು ಮತ್ತು ತಜ್ಞರಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇದನ್ನು ಸಹಿಸಲು ಬಿಜೆಪಿಯವರಿಂದ ಆಗುತ್ತಿಲ್ಲ. ಜನರ ದಿಕ್ಕನ್ನು ಬೇರೆಡೆ ತಿರುಗಿಸಲೆಂದೇ ಅವರು ವಿಧಾನ ಮಂಡಲ ಕಲಾಪ ನಡೆಯದಂತೆ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮ ಪ್ರತಿನಿಧಿಗಳೊಂದಿಗೆ ತಿಳಿಸಿದರು.

ವಿಧಾನ ಮಂಡಲ ಕಲಾಪಕ್ಕೆ ಅಡ್ಡಿಯುಂಟು ಮಾಡುವ ಬಿಜೆಪಿ ನಿರ್ಧಾರದ ಹಿಂದೆ ರಾಜಕೀಯ ಸಂಚು ಅಡಗಿದೆ ಎಂದು ತಿಳಿಸಿದರು. ಬಿಜೆಪಿಯವರು ಸದನದ ಸಮಯವನ್ನು ವಿನಾ ಕಾರಣ ಹಾಳು ಮಾಡುತ್ತಿದ್ದಾರೆ. ನಕಲಿ ಡೈರಿ ಕುರಿತಾದ ಚರ್ಚೆಗೆ ಪ್ರಯತ್ನ ನಡೆಸಿದ್ದಾರೆ. ಜನರ ಸಮಸ್ಯೆಗಳ ಬಗ್ಗೆ ಅವರಿಗೆ ಕಿಂಚಿತ್ತೂ ಕಾಳಜಿ ಇಲ್ಲ. ಹೀಗಾಗಿ ಎರಡು ದಿನಗಳಿಂದ ಧರಣಿ ನಡೆಸುತ್ತಿದ್ದಾರೆ ಎಂದು ಸಿಎಂ ಕಿಡಿಕಾರಿದರು.

ಡೈರಿ ವಿಚಾರವನ್ನು ಚರ್ಚೆಗೆ ನೀಡುವ ಬಗ್ಗೆ ಸಭಾಧ್ಯಕ್ಷರಿಂದ ಯಾವುದೇ ಲೋಪವಾಗಿಲ್ಲ. ಅವರಿಗೆ ಎಲ್ಲದರ ಬಗ್ಗೆ ಮಾಹಿತಿ ಇದೆ ಎಂದು ಸಿಎಂ ತಿಳಿಸಿದರು. ವಿಧಾನಸಭೆ ಚುನಾವಣೆಗೆ ಒಂದು ವರ್ಷ ಬಾಕಿ ಉಳಿದಿದೆ. ಹೀಗಾಗಿ ಬಿಜೆಪಿ ಯಾವುದೋ ವಿಚಾರವನ್ನು ಕೈಗೆತ್ತಿಕೊಂಡು ಸದನ ನಡೆಯದಂತೆ ಮಾಡುತ್ತಿದೆ. ವಿಧಾನ ಮಂಡಲದ ಉಭಯ ಸದನದಲ್ಲಿ ಬರಗಾಲ ಕುರಿತು ಗಂಭೀರ ಚರ್ಚೆ ನಡೆಯಬೇಕಿತ್ತು. ಆದರೆ ಬಿಜೆಪಿಯವರಿಗೆ ಸಂಸದೀಯ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲ. ಕಲಾಪ ನಡೆಸಲು ನಾವು ಸಿದ್ಧ. ಆದರೆ ಬಿಜೆಪಿ ಕೇಳುತ್ತಿಲ್ಲ ಎಂದರು.

(ಎಸ್‍.ಎನ್‍/ಎನ್‍.ಬಿ.ಎನ್‍)

Leave a Reply

comments

Related Articles

error: