ಪ್ರಮುಖ ಸುದ್ದಿಮೈಸೂರು

ಇನ್ಫೋಸಿಸ್‌ ಫೌಂಡೇಷನ್‌ ನೆರವಿನಿಂದ ಆಪ್ತಮಿತ್ರ ಸಹಾಯವಾಣಿ ಆ್ಯಪ್‌ ಸಿದ್ಧ ನಾಳೆ ಬಿಡುಗಡೆ : ಸಚಿವ ಡಾ.ಕೆ.ಸುಧಾಕರ್‌

ಮೈಸೂರು,ಏ.21:-  ಸರಕಾರ ಇನ್ಫೋಸಿಸ್‌ ಫೌಂಡೇಷನ್‌ ನೆರವಿನಿಂದ ಆಪ್ತಮಿತ್ರ ಸಹಾಯವಾಣಿ ಆ್ಯಪ್‌ನ್ನು ಸಿದ್ಧಪಡಿಸಿದ್ದು, ಬುಧವಾರ ಈ ಆ್ಯಪ್‌ ಬಿಡುಗಡೆಯಾಗಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು.

ನಗರದಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬುಧವಾರ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಈ ಆ್ಯಪ್‌ ಬಿಡುಗಡೆ ಮಾಡಲಿದ್ದಾರೆ. 14410 ಸಂಖ್ಯೆಗೆ ಕರೆ ಮಾಡಿದರೆ ಎಲ್ಲ ರೀತಿಯ ನೆರವು ಸಿಗಲಿದೆ. 2000 ಮಂದಿ ದಿನದ 24 ಗಂಟೆ ಈ ಸಹಾಯವಾಣಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದು ವಿವರಿಸಿದರು.

ಗ್ರಾಮಾಂತರ ಪ್ರದೇಶಗಳಲ್ಲಿ ಕೊರೋನಾ ಸೋಂಕು ಹರಡಿದರೆ ಅದರ ನಿಯಂತ್ರಣಕ್ಕೆ ಸರಕಾರದ ಬಳಿ ಯೋಜನೆ ಸಿದ್ಧವಿದೆ. ಜ್ಯುಬಿಲಿಯೆಂಟ್‌ ಔಷಧ ಕಾರ್ಖಾನೆಯಲ್ಲಿ ಹರಡಿರುವ ಸೋಂಕಿನ ಮೂಲ ಪತ್ತೆಯಾಗಲಿಲ್ಲ. ರಾಜ್ಯ ಗೃಹ ಇಲಾಖೆ ತನಿಖೆ ನಡೆಸುತ್ತಿದೆ. ಚೀನಾ ಮೂಲ ಎನ್ನುವ ಮಾಹಿತಿಯನ್ನು ಆಧರಿಸಿ ಈ ಹಿಂದೆ ಹೇಳಿಕೆ ನೀಡಿದ್ದೆ. ಆದರೆ, ಅದು ಸಾಬೀತಾಗಲಿಲ್ಲ ಎಂದು ವಿವರಿಸಿದರು.

ರಾಜ್ಯದಲ್ಲಿ 25,843 ಟೆಸ್ಟ್‌ ನಡೆಸಲಾಗಿದೆ. ಮೇ ಅಂತ್ಯದೊಳಗೆ ಪ್ರತಿ ಜಿಲ್ಲೆಗೆ ಎರಡು ಲ್ಯಾಬ್‌ನಂತೆ ರಾಜ್ಯದಲ್ಲಿ 60 ಲ್ಯಾಬ್‌ಗಳನ್ನು ಆರಂಭಿಸಲಾಗುವುದು ಎಂದು   ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌ಟಿ ಸೋಮಶೇಖರ್‌, ಸಂಸದ ಪ್ರತಾಪ್‌ ಸಿಂಹ, ಶಾಸಕ ರಾಮದಾಸ್‌ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: