ಮೈಸೂರು

ನಂಜನಗೂಡು ಜನತೆ ಪರವಾಗಿ ನಮ್ಮ ಸರ್ಕಾರವಿದೆ : ನಂಜನಗೂಡು ಜನತೆಗೆ ಸಚಿವ ಎಸ್.ಟಿ.ಸೋಮಶೇಖರ್ ಅಭಯ

ಮೈಸೂರು,ಏ.22:-  ನಂಜನಗೂಡು ಜನತೆ ಪರವಾಗಿ ನಮ್ಮ ಸರ್ಕಾರವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ನಂಜನಗೂಡು ಜನತೆಗೆ ಅಭಯ ನೀಡಿದರು.

ಜಿಲ್ಲಾಪಂಚಾಯಿತಿ ಸಭಾಗಂಣದಲ್ಲಿ ನಿನ್ನೆ  ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿದ ಅವರು, ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಒಂದೂ ಪಾಸಿಟಿವ್ ಕೇಸ್ ಗಳಿಲ್ಲ. ಆದರೂ ಅವರನ್ನೂ ಲಾಕ್‌ಡೌನ್‌ಗೆ ಒಳಪಡಿಸಲಾಗಿದೆ. ಹೀಗಾಗಿ ನಾವು ಹಾಗೂ ನಮ್ಮ ಸರ್ಕಾರ ಇಡೀ ನಂಜನಗೂಡು ಜನತೆ ಪರವಾಗಿದೆ ಎಂದು ತಿಳಿಸಿದರು.

ವೆಂಟಿಲೇಟರ್ ಬೇಕು, ನಂಜನಗೂಡು ಆತಂಕದಲ್ಲಿದೆ ಎಂದು ಶಾಸಕ ನಾಗೇಂದ್ರ ಮನವಿ ಮಾಡಿದ ಬೆನ್ನಲ್ಲೇ ಉತ್ತರಿಸಿದ ಸಚಿವ ಸುಧಾಕರ್‌, ಶೇ.95ರಷ್ಟು ಸೋಂಕಿತರು ಐಸಿಯುಗೆ ಬರುವುದಿಲ್ಲ. ಶೇ.5ರಷ್ಟು ಮಾತ್ರ ಐಸಿಯುಗೆ ಬರುತ್ತಾರೆ. ಅದರಲ್ಲೂ ವೆಂಟಿಲೇಟರ್ ಬೇಕಾಗಿರೋದು ಶೇ.2ರಷ್ಟು ಮಾತ್ರ. ಇದು ನಮ್ಮಲ್ಲಿ ಮಾತ್ರವಲ್ಲ, ವಿಶ್ವದಾದ್ಯಂತ ಹೀಗೆ ನಡೆಯುತ್ತಿದೆ. ಅದನ್ನು ಅರಿಯಲು ಪ್ರಯತ್ನಿಸಿ ಎಂದರು.

ನಂಜನಗೂಡು ಜ್ಯುಬಿಲಿಯೆಂಟ್ಸ್ ಕಾರ್ಖಾನೆಯಲ್ಲಿ ಸೋಂಕು ವಿಚಾರದ ಕುರಿತು ಪ್ರತಿಕ್ರಿಯಿಸಿದ ಸುಧಾಕರ್, ಜುಬಿಲಿಯೆಂಟ್ಸ್ ಸಂಬಂಧ 2098 ಮಂದಿ ಪ್ರೈಮರಿ ಹಾಗೂ ಸೆಕೆಂಡರಿ ಸಂಪರ್ಕಿತರಿದ್ದಾರೆ. 473 ಮಂದಿ ಪ್ರೈಮರಿ ಸಂಪರ್ಕದಲ್ಲಿದ್ದರೆ, 1625 ಸೆಕೆಂಡರಿ ಸಂಪರ್ಕದಲ್ಲಿದ್ದಾರೆ. ಇದರಲ್ಲಿ ಕಾರ್ಖಾನೆಯ ನೌಕರರು 1483 ಮಂದಿ ಇದ್ದಾರೆ. ಜ್ಯುಬಿಲಿಯೆಂಟ್ಸ್ ಕಾರ್ಖಾನೆ 100 ಸ್ಯಾಂಪಲ್ ಟೆಸ್ಟ್ ಬಾಕಿ ಇದೆ. ಉಳಿದಂತೆ ಜ್ಯುಬಿಲಿಯೆಂಟ್ಸ್ ಸಂಪರ್ಕದ ಎಲ್ಲ ಟೆಸ್ಟ್ ಮುಗಿದಿದೆ. ಆ 100 ಟೆಸ್ಟ್ ರಿಸಲ್ಟ್ ಬಂದರೆ ಎಲ್ಲರ ಆತಂಕ ದೂರ ಆಗಲಿದೆ ಎಂದರು. ಸೋಂಕು ಹರಡುವಿಕೆ ನಿಂತರೆ ಆದಷ್ಟು ಬೇಗ ನಂಜನಗೂಡು ಲಾಕ್‌ಡೌನ್‌ನಿಂದ ಹೊರಬರಲಿದೆ. ಮೈಸೂರು ಜಿಲ್ಲೆ ಶೀಘ್ರದಲ್ಲೇ ಕೊರೋನಾದಿಂದ ಮುಕ್ತವಾಗುವ ಸಾಧ್ಯತೆಯಿದೆ. ಸೋಂಕು ತಡೆಗಟ್ಟಲು ಮೈಸೂರು ಜಿಲ್ಲೆಯ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನೂತನ ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಸಾಕಷ್ಟು ಶ್ರಮಿಸುತ್ತಿದ್ದಾರೆ. ಜಿಲ್ಲೆ ಶೀಘ್ರದಲ್ಲೇ ಕೊರೋನಾದಿಂದ ಮುಕ್ತವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಮೈಸೂರು ಜಿಲ್ಲೆಯಲ್ಲಿ 60 ವರ್ಷ ಮೀರಿದ ಎಲ್ಲರಿಗೂ ವೈದ್ಯಕೀಯ ಪರೀಕ್ಷೆ ಕಡ್ಡಾಯವಾಗಿ ಮಾಡಬೇಕೆಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್, ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಹರ್ಷವರ್ಧನ್, ಅಶ್ವಿನ್ ಕುಮಾರ್, ಎಲ್.ನಾಗೇಂದ್ರ, ಸಂದೇಶ್ ನಾಗರಾಜ್, ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ, ಮೇಯರ್ ತಸ್ನೀ  ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: