ಪ್ರಮುಖ ಸುದ್ದಿ

ಕೋವಿಡ್-19 ಆಸ್ಪತ್ರೆಯ ದಾದಿಯರು ಮತ್ತು ಸಿಬ್ಬಂದಿ ವರ್ಗಕ್ಕೆ ಹೃದಯಸ್ಪರ್ಶಿ ಅಭಿನಂದನೆ

ರಾಜ್ಯ( ಮಡಿಕೇರಿ) ಏ.22 :- ಕೋವಿಡ್-19 ಆಸ್ಪತ್ರೆಯಾಗಿ ಪರಿವರ್ತನೆಯಾಗಿರುವ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆ, ಜಿಲ್ಲಾಸ್ಪತ್ರೆಯ ದಾದಿಯರು ಮತ್ತು ಸಿಬ್ಬಂದಿ ವರ್ಗಕ್ಕೆ ‘ಪ್ರಜಾಸತ್ಯ’ ದಿನಪತ್ರಿಕೆಯ ವತಿಯಿಂದ ಹೃದಯಸ್ಪರ್ಶಿಯಾಗಿ ಅಭಿನಂದಿಸಿ ಅವರ ಕರ್ತವ್ಯಪ್ರಜ್ಞೆಯನ್ನು ಶ್ಲಾಘಿಸಲಾಯಿತು.
ಕೋವಿಡ್-19 ಆಸ್ಪತ್ರೆಯ ಉಪನ್ಯಾಸ ಸಭಾಂಗಣದಲ್ಲಿ ನಡೆದ ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಸನ್ಮಾನ ನೆರವೇರಿಸಿ ಮಾತನಾಡಿದ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ. ಕೆ.ಬಿ. ಕಾರ್ಯಪ್ಪ ಅವರು ಇದೊಂದು ಶ್ಲಾಘನೀಯ ವಿಚಾರವಾಗಿದ್ದು, ಮಾಧ್ಯಮದವರು ಕೂಡ ಸೈನಿಕರಂತೆ ಕೊರೋನಾ ಸಂದರ್ಭದಲ್ಲಿ ಕೆಲಸ ಮಾಡುತ್ತಿದ್ದಾರೆ. ಮುಂಬೈಯಲ್ಲಿ 54 ಮಂದಿ ಮಾಧ್ಯಮದವರಿಗೆ ಕೊರೋನಾ ಸೋಂಕು ತಗುಲಿದ್ದು, ಕೊರೋನಾ ವಿರುದ್ಧ ಹೋರಾಟದಲ್ಲಿ ಮಾಧ್ಯಮದವರು ಎಷ್ಟರಮಟ್ಟಿಗೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಉಲ್ಲೇಖಿಸಿದರು.
ವೈದ್ಯಕೀಯ ಸೇವೆಯಲ್ಲಿ ಕೂಡ ತಪ್ಪುಒಪ್ಪುಗಳು ಆದಾಗ ಮಾಧ್ಯಮಗಳು ಅದನ್ನು ಎತ್ತಿ ಹಿಡಿದಿವೆ. ಒಳ್ಳೆಯ ಕೆಲಸಗಳನ್ನು ಹೆಚ್ಚಾಗಿ ಎತ್ತಿ ಹಿಡಿದಿದ್ದು, ಇದನ್ನು ಪ್ರಶಂಸಿಸಲು ಬಯಸುತ್ತೇನೆ ಎಂದು ಅವರು ನುಡಿದರು. ಮುಂದೆಯೂ ಕೂಡ ನಾವೆಲ್ಲರೂ ಒಂದೇ ಮನಸ್ಸಿನಿಂದ ಕೊರೋನಾ ತೊಲಗಿಸುವ ನಿಟ್ಟಿನಲ್ಲಿ ಒಂದಾಗಿ ಸಾಗೋಣ ಎಂದು ಡಾ. ಕೆ.ಬಿ. ಕಾರ್ಯಪ್ಪ ಕರೆ ನೀಡಿದರು.
ಮುಖ್ಯ ಅತಿಥಿಗಳಲ್ಲಿ ಒಬ್ಬರಾಗಿದ್ದ ಕೊಡಗು ಪ್ರಸೆಕ್ಲಬ್‍ನ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ ಪೊಲೀಸರು, ವೈದ್ಯರು ಮಾಧ್ಯಮದವರು ಎಲ್ಲಾ ಸಂದರ್ಭದಲ್ಲೂ ಶ್ಲಾಘನೆಗಿಂತ ಹೆಚ್ಚಾಗಿ ನಿಂದನೆಗೆ ಒಳಗಾಗಿದ್ದಾರೆ. ವೃತ್ತಿ ಧರ್ಮವೇ ಹಾಗಿದ್ದು ಕೊರೋನಾ ಸಂದರ್ಭದಲ್ಲಂತೂ ಮಾಧ್ಯಮದವರ ವಿರುದ್ಧ ಆಕ್ರೋಶ ಹೆಪ್ಪುಗಟ್ಟಿವೆ ಎಂದು ಅವರು ಹೇಳಿದರಲ್ಲದೆ, ನಮ್ಮಿಂದ ಸಮಾಜಕ್ಕೆ ತುಂಬಾ ನಿರೀಕ್ಷೆಗಳಿವೆ. ಈ ಸನ್ಮಾನ ತಮ್ಮ ಸೇವಾಮನೋಭಾವಕ್ಕೆ ಪ್ರೋತ್ಸಾಹ ನೀಡಿದಂತೆ ಎಂದು ಬಾವಿಸಿಕೊಂಡು ಇನ್ನಷ್ಟು ಉತ್ಸಾಹದಿಂದ, ಪ್ರೀತಿಯಿಂದ ಶ್ರದ್ಧೆಯಿಂದ ಕರ್ತವ್ಯ ನಿರ್ವಹಿಸಿ ಎಂದು ಕುಟ್ಟಪ್ಪ ಮನಮಿ ಮಾಡಿದರು. ಕೊರೋನಾ ಸಂದರ್ಭ ವೈದ್ಯಕೀಯ ಕ್ಷೇತ್ರದ ಮಹತ್ವವನ್ನು ಜಗತ್ತಿಗೆ ಸಾರಿದೆ ಎಂದು ಅವರು ಅಭಿಮಾನದಿಂದ ನುಡಿದರು.
ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಿ.ಆರ್. ಸವಿತಾ ರೈ ಮಾತನಾಡಿ, ಜಿಲ್ಲಾಸ್ಪತ್ರೆ, ಮೆಡಿಕಲ್ ಕಾಲೇಜಿಗೆ ಹಸ್ತಾಂತರವಾದ ಬಳಿಕ ಇದೀಗ ಕೋವಿಡ್-19 ಆಸ್ಪತ್ರೆಯಾಗಿ ಬದಲಾದ ಬಳಿಕ ಅಜಗಜಾಂತರ ವ್ಯತ್ಯಾಸವನ್ನು ಕಂಡಿದೆ ಎಂದು ಅನುಭವಜನ್ಯ ಮಾತುಗಳಿಂದ ಬಣ್ಣಿಸಿದರಲ್ಲದೆ, ಕಾಯಾವಾಚಾ ಮನಸ ನಿಸ್ವಾರ್ಥತೆಯಿಂದ ಸೇವೆಯಲ್ಲಿ ತೊಡಗಿಸಿಕೊಂಡಿರುವ ವೈದ್ಯರು, ದಾದಿಯರು ಮತ್ತು ಸಿಬ್ಬಂದಿ ವರ್ಗದವರ ಸೇವಾ ಮನೋಭಾವನೆಯನ್ನು ಕೊಂಡಾಡಿದರು. ಜಿಲ್ಲೆಯಲ್ಲಿ ಕೊರೋನಾ ಸೋಂಕು ಶೂನ್ಯ ಇರುವಲ್ಲಿ ಕೊಡಗು ವೈದ್ಯಕೀಯ ಕ್ಷೇತ್ರದ ಅದಮ್ಯ ಪ್ರೀತಿ, ವಿಶ್ವಾಸ ಮತ್ತು ಶ್ರದ್ದೆಯ ಸೇವೆ ಇದೆ ಎಂಬುದನ್ನು ಅವರು ಒತ್ತಿ ಹೇಳಿದರು.
ಡಾ. ನವೀನ್‍ಕುಮಾರ್ ಅವರು ತಮ್ಮ ವೈದ್ಯಕೀಯ ವೃತ್ತಿಯನ್ನು ಇದೇ ಜಿಲ್ಲಾಸ್ಪತ್ರೆಯಲ್ಲಿ ಆರಂಭಿಸಿದ್ದು, ಮಕ್ಕಳ ವಿಭಾಗವನ್ನು ದಶಕಗಳ ಹಿಂದೆಯೇ ಆಧುನಿಕ ರೀತಿಯಲ್ಲಿ ಸಜ್ಜುಗೊಳಿಸಲು ತಮ್ಮದೇ ಆದ ರೀತಿಯಿಂದ ಪ್ರಯತ್ನಿಸಿದ್ದು, ಹೊಸ ರೂಪ ನೀಡಿದ್ದನ್ನು ಸ್ಮರಿಸಿದ ಸವಿತಾರೈ ಅವರು ವೈದ್ಯಕೀಯ ವೃತ್ತಿಯೊಂದಿಗೆ ಪತ್ರಿಕೋದ್ಯಮ ವೃತಿಯಲ್ಲು ಕೂಡ ಯಶಸ್ವಿ ಹೆಜ್ಜೆಗಳನ್ನು ಇಟ್ಟಿರುವುದನ್ನು ಸವಿತಾರೈ ಶ್ಲಾಘಿಸಿದರು.
ಕಾವೇರಿ ಟೈಮ್ಸ್ ದಿನಪತ್ರಿಕೆಯ ಪ್ರಕಾಶಕ ಬೊಳ್ಳಜೀರ ಬಿ. ಅಯ್ಯಪ್ಪ ಮಾತನಾಡಿ ಕೊರೋನಾ ವಿರುದ್ಧ ಜಿಲ್ಲೆಯಲ್ಲಿ ಸಂಘಟಿತ ಪ್ರಯತ್ನದಿಂದ ಯಶಸ್ಸು ಕಾಣುತ್ತಿದೆ. ವಿಶೇಷವಾಗಿ ಮಾಧ್ಯಮದವರು ಜಿಲ್ಲೆಯಲ್ಲಿ, ರಾಜ್ಯದಲ್ಲಿ, ರಾಷ್ಟ್ರದಲ್ಲಿ ಮತ್ತು ಜಗತ್ತಿನಲ್ಲಿ ಏನಾಗುತ್ತಿದೆ ಎಂದು ದಿನನಿತ್ಯ ಮಾಹಿತಿ ನೀಡುತ್ತಿದ್ದು, ಜೊತೆಗೆ ಡಾ. ಬಿ.ಸಿ. ನವೀನ್‍ಕುಮಾರ್ ಅವರು ಜಿಲ್ಲೆಯ ಮೂಲೆ ಮೂಲೆಗೆ ತೆರಳಿ ಪೊಲೀಸರು ಮತ್ತು ಪೌರ ಕಾರ್ಮಿಕರಿಗೆ ಉಚಿತ ಚಿಕಿತ್ಸೆ ನೀಡುತ್ತಿರುವುದು ಒಂದು ಶ್ಲಾಘನೀಯ ಕಾರ್ಯ ಎಂದು ಹೇಳಿದರು.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಮೇರಿ ನಾಣಯ್ಯ ಅವರು ‘ಪ್ರಜಾಸತ್ಯ’ ಪತ್ರಿಕೆಯ ಬಳಗದಿಂದ ಈ ರೀತಿಯ ಸನ್ಮಾನ ಕಾರ್ಯಕ್ರಮ ಶ್ಲಾಘನೀಯ ವಿಚಾರವಾಗಿದ್ದು, ನಮ್ಮ ಸೇವೆಯನ್ನು ನೆನೆದ ಈ ದಿನ ನಮಗೆಲ್ಲರಿಗೂ ಸ್ಮರಣೀಯ ಶುಭದಿನ ಎಂದು ಅಭಿಮಾನದಿಂದ ನುಡಿದರಲ್ಲದೆ, ಈ ಸನ್ಮಾನ ನಮಗೆ ಇನ್ನಷ್ಟು ಸಾಧನೆ ಮಾಡಲು ಪ್ರೋತ್ಸಾಹ ನೀಡುವಂತಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ‘ಪ್ರಜಾಸತ್ಯ’ ದಿನಪತ್ರಿಕೆಯ ಪ್ರಧಾನ ಸಂಪಾದಕರು ಮತ್ತು ವ್ಯವಸ್ಥಾಪಕ ನಿರ್ದೇಶಕರೂ ಆದ ಡಾ. ಬಿ.ಸಿ. ನವೀನ್‍ಕುಮಾರ್ ತಮ್ಮ ಸ್ವಾಗತ ಮತ್ತು ಪ್ರಾಸ್ತಾವಿಕ ಮಾತುಗಳಲ್ಲಿ ಮನುಷ್ಯ ತಾನು ಪ್ರಪಂಚವನ್ನೇ ಜಯಿಸಿ ಬಿಡಬಲ್ಲೆ ಎಂಬ ಮನೋಭಾವನೆಯನ್ನು ಹೊಂದಿದ್ದ. ಆದರೆ, ಕಣ್ಣಿಗೆ ಕಾಣದ ವೈರಸ್ ಬಂದು ಇಡೀ ಜಗತ್ತನ್ನು ಸ್ತಬ್ಧ ಮಾಡಿದೆ. ಇದು ನಮ್ಮ ಆತ್ಮಾವಲೋಕನಕ್ಕೆ ಕಾರಣವಾಗಬೇಕಲ್ಲದೆ, ಈ ವೈರಸ್‍ಗೆ ಜಾತಿ, ಧರ್ಮ, ಗಡಿ, ದೇಶ, ಜನಾಂಗಗಳ ಹಂಗಿಲ್ಲ ಎಂಬುದನ್ನು ಅವರು ನೆನಪಿಸಿದರು. ಒಂದು ಸಮಾಜದ ಸುಖ ಜೀವನಕ್ಕೆ ಪೊಲೀಸರು, ವೈದ್ಯರು ಮತ್ತು ಮಾಧ್ಯಮ ಸೇರಿದಂತೆ ಅನೇಕ ಆಯಾಮಗಳು ತೆರೆಮರೆಯಲ್ಲಿ ಕೆಲಸ ಮಾಡುತ್ತಿರುತ್ತದೆ. ಸಮಾಜದ ಜವಾಬ್ದಾರಿ ಇವರ ಮೇಲಿದ್ದು, ವೃತ್ತಿ ಗೌರವವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಒತ್ತಡದ ಕೆಲಸ ನಿಬಾಯಿಸಬೇಕು. ಏಕೆಂದರೆ, ಕೊರೋನಾ ಎಂಬ ಜೀವ ತೆಗೆಯುವ ವೈರಿಯೊಂದಿಗೆ ಪ್ರತ್ಯಕ್ಷ ಹೋರಾಟ ಮಾಡುತ್ತಿರುವ ದಾದಿಯರು ಮತ್ತು ಸಿಬ್ಬಂದಿ ವರ್ಗದವರ ಕೆಲಸ ಅತ್ಯಂತ ಪ್ರಮುಖವಾದುದು. ಪತ್ರಿಕೆಯ ವತಿಯಿಂದ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದ ಡಾ. ನವೀನ್‍ಕುಮಾರ್ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ವೃತ್ತಿಪರತೆ ಹೆಚ್ಚಾಗಬೇಕು, ಮಾನವ ಸಂಬಂಧಗಳು ಇನ್ನಷ್ಟು ಸುಧಾರಿಸಬೇಕು ಎಂಬ ಕಾಳಜಿಯ ಹಿನ್ನಲೆಯಲ್ಲಿ ತಪ್ಪು ಒಪ್ಪುಗಳನ್ನು ಎತ್ತಿ ಹಿಡಿಯುವ ಕೆಲಸದಲ್ಲಿ ನಾವು ಕೂಡ ಭಾಗಿಗಳಾಗಿದ್ದೇವೆ. ಅದು ಪತ್ರಿಕಾ ಧರ್ಮ ಕೂಡ ಎಂದು ಅವರು ವಿಶ್ಲೇಷಿಸಿದರು. ಹಾಗೆಯೇ ವೈದ್ಯಕೀಯ ವೃತ್ತಿಯಲ್ಲಿರುವವರಿಗೆ ಪ್ರೋತ್ಸಾಹ ಮತ್ತು ರಕ್ಷಣೆಯನ್ನು ಕೊಡುವ ಜವಾಬ್ದಾರಿ ಸರ್ಕಾರ ಮತ್ತು ಸಮಾಜದ್ದಾಗಿದೆ ಎಂದು ಡಾ. ನವೀನ್‍ಕುಮಾರ್ ಹೇಳಿದರು.
ಕಾರ್ಯಕ್ರಮದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅಧೀಕ್ಷಕ ಡಾ. ಎ.ಜೆ. ಲೋಕೇಶ್, ಸಹಾಯಕ ಆಡಳಿತಾಧಿಕಾರಿ ಎಸ್.ಎಲ್. ಬಸವರಾಜು, ನರ್ಸಿಂಗ್ ವಿಭಾಗದ ಅಧೀಕ್ಷಕಿ ವೀಣಾಕುಮಾರಿ, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ, ಕೋವಿಡ್-19 ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ. ಅಬ್ದುಲ್ ಅಜೀಜ್ ಸೇರಿದಂತೆ ಇತರ ಪ್ರಮುಖರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ ಹೆಚ್.ಟಿ. ಅನಿಲ್ ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿ ಕೋವಿಡ್-19 ಆಸ್ಪತ್ರೆಯ 40 ಮಂದಿ ದಾದಿಯರು ಮತ್ತು ಸಿಬ್ಬಂದಿ ವರ್ಗದವರಿಗೆ ನೆನಪಿನ ಕಾಣಿಕೆ ಮತ್ತು ಪ್ರಶಂಸಾ ಪತ್ರ ನೀಡಿ ಗೌರವಿಸಲಾಯಿತು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: