ಪ್ರಮುಖ ಸುದ್ದಿಮೈಸೂರು

ಪಾದರಾಯನಪುರ ಘಟನೆಯ ಆರೋಪಿಗಳನ್ನು ರಾಮನಗರ ಜೈಲಿಗೆ ಶಿಫ್ಟ್ ಮಾಡಿರುವುದರ ಹಿಂದೆ ಹಿರಿಯ ಪೊಲೀಸ್ ಅಧಿಕಾರಿಯ ಕೈವಾಡ : ಅನುಮಾನ ವ್ಯಕ್ತಪಡಿಸಿದ ಮಾಜಿ ಸಿಎಂ ಹೆಚ್ ಡಿಕೆ

ಮೈಸೂರು,ಏ.24:- ಪಾದರಾಯನಪುರ ಘಟನೆಯ ಆರೋಪಿಗಳನ್ನು ರಾಮನಗರ ಜೈಲಿಗೆ ಶಿಫ್ಟ್ ಮಾಡಿರುವುದರ ಹಿಂದೆ ಹಿರಿಯ ಪೊಲೀಸ್ ಅಧಿಕಾರಿಯ ಕೈವಾಡವಿರುವ ಅನುಮಾನವನ್ನು  ಮಾಜಿ ಸಿಎಂ ಎಚ್.ಡಿ. ಕುಮಾರಸ್ಚಾಮಿ‌ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಬಂದೀಖಾನೆ ಎಡಿಜಿಪಿ ಅಲೋಕ್ ಮೋಹನ್ ರಿಂದ ಆರೋಪಿಗಳ ಶಿಫ್ಟ್ ಗೆ ಸಲಹೆ ನೀಡಿದ್ದು, ಇದರಿಂದ ಗ್ರೀನ್ ಝೋನ್ ನಲ್ಲಿದ್ದ ರಾಮನಗರಕ್ಕೂ ಕೊರೋನಾ ಹರಡಿಸಿದ್ದಾರೆ. ಈ ವಿಚಾರದಲಿ  ಮುಖ್ಯಮಂತ್ರಿ ಆದಿಯಾಗಿ ಎಲ್ಲಾ ನಾಯಕರನ್ನು ಕೇಳಿದೆ. ನಿಮಗೆ ಸಲಹೆ ಕೊಟ್ಟವರು ಯಾರು ಎಂದು ಕೇಳಿದೆ. ಎಡಿಜಿಪಿ ಪತ್ರ ಬರೆದು ಶಿಫ್ಟ್ ಮಾಡಲು ಹೇಳಿದ್ದಾರೆ ಎಂದು ತಿಳಿದುಬಂದಿದೆ. ಅಲೋಕ್ ಮೋಹನ್ ನಾನು ಸಿಎಂ ಅಗಿದ್ದಾಗ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಲು ಒತ್ತಡ ಹಾಕಿದ್ದರು. ಅವರ ಹಿನ್ನೆಲೆ ಗಮನಿಸಿ ಅವಕಾಶ ನೀಡಿರಲಿಲ್ಲ. ಆ ದ್ವೇಷಕ್ಕೆ  ಎಡಿಜಿಪಿಗೆ ಹೀಗೆ ಮಾಡಿರಬಹುದು. ನನ್ನ ಮೇಲೆ ದ್ವೇಷವಿದ್ದರೆ ತೀರಿಸಿಕೊಳ್ಳಲಿ. ಆದರೆ ರಾಮನಗರದ ಜನರ ಮೇಲೆ ಯಾಕೆ ದ್ವೇಷ ಮಾಡಬೇಕು? ಈ‌ ಬಗ್ಗೆ ಸೂಕ್ತ ತನಿಖೆ ನಡೆಸಲು ಸರ್ಕಾರ ಆದೇಶಿಸಬೇಕು. ತಕ್ಷಣ ಆರೋಪಿಗಳನ್ನು ಮೆಡಿಕೇರ್ ಗೆ ಒಳಪಡಿಸಿ ಬೇರೆಯವರಿಗೆ ಸೋಂಕು ಹರಡದಂತೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದರು.

ಜೈಲಿನಲ್ಲಿ‌ ಇರುವ ಪೊಲೀಸ್ ಮತ್ತು ಜೈಲು ಸಿಬ್ಬಂದಿಗಳನ್ನು ಕ್ವಾರೆಂಟೈನ್ ಮಾಡಬೇಕು. ಇವರನ್ನೆಲ್ಲಾ ಕ್ವಾರೆಂಟೈನ್ ಮಾಡುವುದು ಅನಿವಾರ್ಯ. ಬಾಡಿಗೆ ಮನೆಯಲ್ಲಿ ಇದ್ದ ಹಲವರನ್ನು ಮನೆ ಖಾಲಿ ಮಾಡಿ ಅಂತ ಹೇಳಿದ್ದಾರೆ. ಸಿಎಂ ಮತ್ತು ಗೃಹ ಸಚಿವರ ಜೊತೆ ಮಾತನಾಡಿದ್ದೇನೆ. ಮಧ್ಯಾಹ್ನದ ಒಳಗೆ ಸಮಸ್ಯೆ ಪರಿಹಾರ ಮಾಡುವುದಾಗಿ ಭರವಸೆ ನೀಡಿದ್ದಾರೆ. ಎಡಿಜಿಪಿ ಅಲೋಕ್ ಮೋಹನ್ ಗೆ ರಾಮನಗರಕ್ಕೆ ಶಿಫ್ಟ್ ಮಾಡಲು ಯಾರು ಒತ್ತಡ ತಂದರು ಎಂದು ಪ್ರಶ್ನಿಸಿದರಲ್ಲದೇ ನನ್ನ ಮೇಲಿನ ದ್ವೇಷಕ್ಕೆ ರಾಮನಗರಕ್ಕೆ ಶಿಫ್ಟ್ ಮಾಡಿದ್ದಾರೆನೋ ಅನಿಸುತ್ತಿದೆ. ನನ್ನ ಮೇಲಿನ ದ್ವೇಷ ಇದ್ದರೆ ಬೇರೆ ರೀತಿ ಹೋರಾಟ ಮಾಡಲಿ ಸರ್ಕಾರವನ್ನು ಇಕ್ಕಟ್ಟಿಗೆ ತರದೆ ಸಹಕಾರ ನೀಡುತ್ತಿದ್ದೇನೆ. ಇದನ್ನು ದೌರ್ಬಲ್ಯ ಎಂದು ಸರ್ಕಾರ ತಿಳಿಯಬಾರದು ಎಂದರು.

ಆಶಾ ಕಾರ್ಯಕರ್ತೆ ಮೀನಾಕ್ಷಿ ಭಯದಿಂದ ಇನ್ನೂ ಹೊರಬಂದಿಲ್ಲ. ಕೊರೋನಾ ಬಗ್ಗೆ ಮಾಹಿತಿ ಪಡೆಯಲು ಹೋದಾಗ ಕಂಪ್ಯೂಟರ್ ವರ್ಕರ್ ಅವಿನಾಶ್ ಮತ್ತು ಇತರರು ಮೀನಾಕ್ಷಿ ವಿರುದ್ಧ ಹರಿಹಾಯ್ದಿದ್ದಾರೆ. ಮನ ಬಂದಂತೆ ಮಾತನಾಡಿ ಕಿರುಕುಳ ನೀಡಿದ್ದಾರೆ. ಆಶಾ ಕಾರ್ಯಕರ್ತೆಯರಿಗೆ ತೊಂದರೆ ಕೊಡುವ ಪ್ರಕರಣ ಹೆಚ್ಚಾಗುತ್ತಿದೆ. ಹೆಡೆಮುರಿ ಕಟ್ಟುತ್ತೇವೆ ಅಂತ ಮಾಧ್ಯಮಗಳ ಮುಂದೆ  ಪ್ರಚಾರಕ್ಕೆ ಹೇಳಿದ್ದಾರೋ ಅಥವಾ ಕೊರೋನಾ ವಾರಿಯರ್ಸ್ ರಕ್ಷಣೆ ಕೊಡಲು ಹೇಳಿದ್ದಾರೋ ತಿಳಿಯದು. ಮೀನಾಕ್ಷಿ ಆತ್ಮಹತ್ಯೆಗೆ ಕಾರಣರಾದವರನ್ನು ಈಗಾಗಲೇ ರಾಜಕೀಯ ಒತ್ತಡ ಹೇರಿ ಪೊಲೀಸ್ ಸ್ಟೇಷನ್ ನಲ್ಲಿ ಬೇಲ್ ಮೇಲೆ ಬಿಡುಗಡೆ ಮಾಡಿದ್ದಾರೆ. ಇಂತಹ ಹಲವು ಘಟಕಗಳಿಂದ ರಾಜ್ಯ ಸರ್ಕಾರ ಪದೇ ಪದೇ ಮುಜುಗರಕ್ಕೆ ಒಳಗಾಗುತ್ತಿದೆ. ಸರ್ಕಾರಕ್ಕೆ ಗಂಭೀರತೆ ಇಲ್ಲ ಎಂದು ಟೀಕಿಸಿದರು.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: