ಮೈಸೂರು

ಜೀವನದಲ್ಲಿ ಬಂದಿದ್ದನ್ನು ಸವಾಲಾಗಿ ಸ್ವೀಕರಿಸಿದರೆ ಜೀವನ ಸುಂದರವಾಗಲಿದೆ : ಅಶ್ವಿನಿ ಅಂಗಡಿ

ಹೆಣ್ಣಿಗೆ ದೈಹಿಕವಾಗಿ, ಮಾನಸಿಕವಾಗಿ ಹಿಂಸೆ, ನೋವು, ಶೋಷಣೆ, ದೌರ್ಜನ್ಯದಂತಹ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವಿದ್ದು, ಹೆಣ್ಣಾಗಿ ಹುಟ್ಟಿದ್ದಕ್ಕೆ ವ್ಯಥೆ ಪಡದೆ ಹೆಮ್ಮೆ ಪಡಬೇಕು ಎಂದು ಯುವಧ್ವನಿ ರಾಷ್ಟ್ರೀಯ ಪುರಸ್ಕೃತೆ ಅಶ್ವಿನಿ ಅಂಗಡಿ ಅಭಿಪ್ರಾಯಪಟ್ಟರು.

ಶನಿವಾರ ಮೈಸೂರಿನ ಯಾದವಗಿರಿಯಲ್ಲಿರುವ ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆಯಲ್ಲಿ ಸಿಸ್ಟರ್ ನಿವೇದಿತಾ ಅವರ 150ನೇ ಜನ್ಮದಿನಾಚರಣೆ ಅಂಗವಾಗಿ ಕಾಲೇಜು ವಿದ್ಯಾರ್ಥಿನಿಯರಿಗೆ ಆಯೋಜಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದರು. ಅಯ್ಯೋ ಏಕಪ್ಪಾ ಹೆಣ್ಣಾಗಿ ಹುಟ್ಟಿದೆ ಎಂದು ಮರುಗುವ ಕಾಲ ದೂರಾಗಿದೆ. ಹೆಣ್ಣಿಗೆ ಮಾತ್ರ ಎಲ್ಲಾ ಸಮಸ್ಯೆಗಳನ್ನು ಎದುರಿಸುವ ಸಾಮರ್ಥ್ಯವನ್ನು ದೇವರು ಕರುಣಿಸಿದ್ದು ಇದರಿಂದಲೇ ಸ್ತ್ರೀ ಶಕ್ತಿ ಏನೆಂಬುದು ತಿಳಿಯಲಿದೆ. ಪುರುಷರಿಗಿಲ್ಲದ ಶಕ್ತಿ ಸಾಮರ್ಥ್ಯ ಹೆಣ್ಣಿಗಿದೆ. ಮಾತೃಭಾಷೆ, ಮಾತೃಭೂಮಿ ಎಂದು ಕರೆಯುತ್ತಾರೆಯೇ ಹೊರತು ತಂದೆ ಭಾಷೆ, ತಂದೆ ಭೂಮಿ ಎಂದು ಎಲ್ಲೂ ಕರೆಯುವುದಿಲ್ಲ. ಹೆಣ್ಣಿಗೆ ಎಲ್ಲವನ್ನೂ ಪೊರೆಯುವ ಶಕ್ತಿ ಇರುವುದರಿಂದಲೇ ಸಮಾಜದಲ್ಲಿ ಪುರುಷರಿಗಿಂತ ಎತ್ತರದ ಸ್ಥಾನವನ್ನು ಆಕೆಗೆ ನೀಡಲಾಗಿದೆ ಎಂದು ಹೇಳಿದರು.

ಅಂಧತ್ವ ದೇವರು ನನಗೆ ನೀಡಿರುವ ವರ. ಅದನ್ನು ಸವಾಲಾಗಿ ಸ್ವೀಕರಿಸಿದ್ದರಿಂದಲೇ ಇಂದು 30 ಅಂಧ ಮಕ್ಕಳಿಗೆ ಉಚಿತ ವಸತಿ, ಶಿಕ್ಷಣ, ನೀಡುವ ಮಟ್ಟಕ್ಕೆ ಬೆಳೆದಿದ್ದೇನೆ. ನಾನು ಹುಟ್ಟಿದಾಗ ನೆರೆಹೊರೆಯವರು ನನ್ನನ್ನು ಸಾಯಿಸುವಂತೆ ಹೇಳುತ್ತಿದ್ದರು. ನಮ್ಮ ತಂದೆ-ತಾಯಿ ನನ್ನನ್ನು ಸ್ವೀಕರಿಸಿದರು. ಜೀವನದಲ್ಲಿ ದೇವರು ನಮಗೆ ಏನನ್ನು ನೀಡಬೇಕು, ಏನನ್ನು ನೀಡಬಾರದು ಎಂಬುದನ್ನು ಅಳೆದು ತೂಗಿ ನೀಡುತ್ತಾನೆ. ಅದನ್ನು ತಿರಸ್ಕರಿಸದೆ ಸವಾಲಾಗಿ ಸ್ವೀಕರಿಸಿದರೆ ಜೀವನ ಸುಂದರವಾಗುತ್ತದೆ. ದೇಶಕ್ಕಾಗಿ ಇಷ್ಟೆಲ್ಲಾ ನೀಡಿರುವ ನಿಮಗೆ ದೇಶದ ಕೊಡುಗೆ ಏನು? ಬೇರೆ ದೇಶಗಳು ನಿಮ್ಮನ್ನು ಗುರುತಿಸಿವೆ, ನಿಮ್ಮ ದೇಶವೇ ನಿಮ್ಮ ಕೊಡುಗೆಯನ್ನು ಗುರುತಿಸಿಲ್ಲವಲ್ಲ ಎಂದು ಹಲವರು ಕೇಳುತ್ತಾರೆ. ಭಾರತ ನನಗೆ ಎಲ್ಲವನ್ನೂ ನೀಡಿದ್ದರಿಂದಲೇ ಅಮೇರಿಕಾದಂತಹ ದೇಶ ನನ್ನನ್ನು ಗುರುತಿಸಿದ್ದು. ಇಲ್ಲಿನ ಸಮಸ್ಯೆಗಳು, ಸವಾಲುಗಳು ನನ್ನ ಶಕ್ತಿಯನ್ನು ದುಪ್ಪಟ್ಟು ಮಾಡಿದವು. ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಛಲ ಹುಟ್ಟಿದ್ದೇ ಭಾರತದಿಂದ. ಪ್ರತಿಯೊಬ್ಬರು ಸಾಧನೆಯ ಹಾದಿಯಲ್ಲಿ ಮುನ್ನಡೆಯಬೇಕು. ಎಲ್ಲರಿಗೂ ಪ್ರತಿನಿತ್ಯ ಸಂತೋಷವನ್ನು ನೀಡುವ ಕಾರ್ಯ ಮಾಡಬೇಕು. ಆಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಆತ್ಮಾನಂದಜೀ ಮಹರಾಜ್, ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಸ್ವಾಮಿ ಮಹೇಶಾತ್ಮಾನಂದ, ಪ್ರಾಂಶುಪಾಲ ಜಿ.ಚಂದ್ರಶೇಖರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. (ಬಿ.ಎಂ-ಎಸ್.ಎಚ್)

Leave a Reply

comments

Related Articles

error: