
ಮೈಸೂರು
5 ವರ್ಷದ ಹೆಣ್ಣು ಮಗುವಿನೊಂದಿಗೆ ಪೊಲೀಸ್ ಕಾನ್ಸ್ಟೇಬಲ್ ಪತ್ನಿ ನೇಣು ಬಿಗಿದು ಆತ್ಮಹತ್ಯೆ : ಹೆಬ್ಬಾಳು ಪೊಲೀಸ್ ವಸತಿ ಗೃಹದಲ್ಲಿ ಘಟನೆ
ಮೈಸೂರು,ಏ.27:- ತನ್ನ 5 ವರ್ಷದ ಹೆಣ್ಣು ಮಗುವಿನೊಂದಿಗೆ ಪೊಲೀಸ್ ಕಾನ್ಸ್ಟೇಬಲ್ ಪತ್ನಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಹೆಬ್ಬಾಳು ಪೊಲೀಸ್ ಕ್ವಾಟ್ರರ್ಸ್ನಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ಮೈಸೂರು ನಗರ ಘಟಕದ ಪೊಲೀಸ್ ಕಂಟ್ರೋಲ್ ರೂಂನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹರೀಶ್ ಅವರ ಪತ್ನಿ ವಿದ್ಯಾಶ್ರೀ(30), 5 ವರ್ಷದ ಪುತ್ರಿ ಚಿನ್ಮಯಿ ಎಂದು ಗುರುತಿಸಲಾಗಿದೆ. ಹುಣಸೂರು ತಾಲೂಕು ರತ್ನಪುರಿಯವರಾದ ವಿದ್ಯಾಶ್ರೀ ಅವರನ್ನು ಏಳು ವರ್ಷಗಳ ಹಿಂದೆ ಹಾಸನ ಮೂಲದ ಹರೀಶ್ ಎಂಬವರಿಗೆ ಮದುವೆ ಮಾಡಿಕೊಡಲಾಗಿತ್ತು. ಹರೀಶ್ ಮೈಸೂರಿನ ಹೆಬ್ಬಾಳು ರಿಂಗ್ ರಸ್ತೆಯಲ್ಲಿರುವ ಪೊಲೀಸ್ ವಸತಿ ಗೃಹದ ಐ ಬ್ಲಾಕ್ ಮನೆ ಸಂಖ್ಯೆ 50ರಲ್ಲಿ ಪತ್ನಿ, ಪುತ್ರಿಯೊಂದಿಗೆ ವಾಸಿಸುತ್ತಿದ್ದರು.
ಭಾನುವಾರ ರಾತ್ರಿ ಕರ್ತವ್ಯದಲ್ಲಿದ್ದ ಹರೀಶ್ ಇಂದು ಬೆಳಿಗ್ಗೆ ಮನೆಗೆ ಬಂದಿದ್ದು, ಮನೆ ಬಾಗಿಲನ್ನು ಸಾಕಷ್ಟು ಬಾರಿ ಬಡಿದರೂ ತೆರೆಯದಿದ್ದಾಗ ಅನುಮಾನ ಬಂದು ನೆರೆಹೊರೆಯವರ ಸಹಾಯದಿಂದ ಬಾಗಿಲು ಮುರಿದು ಒಳಗೆ ಹೋಗಿ ನೋಡಿದಾಗ ಪತ್ನಿ ಮತ್ತು ಮಗಳು ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮನೆಯ ಕೊಠಡಿಯಲ್ಲಿದ್ದ ಫ್ಯಾನಿಗೆ ವೇಲ್ನಿಂದ ಮಗುವಿಗೆ ನೇಣು ಹಾಕಿ, ಬಳಿಕ ತಾಯಿಯೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಹೆಬ್ಬಾಳು ಠಾಣೆ ಇನ್ಸಪೆಕ್ಟರ್ ಚೆಲುವೇಗೌಡ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಮೃತ ವಿದ್ಯಾಶ್ರೀ ಅವರ ಸಂಬಂಧಿಕರು ಬಂದ ನಂತರ ಮಹಜರು ನಡೆಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಿ, ಮಧ್ಯಾಹ್ನ ವಾರಸುದಾರರಿಗೆ ಒಪ್ಪಿಸಿದ್ದಾರೆ.
ಆತ್ಮಹತ್ಯೆಗೆ ಸಾಂಸಾರಿಕ ಕಲಹ ಕಾರಣವೆಂದು ಹೇಳಲಾಗಿದೆಯಾದರೂ ನಿಖರ ಕಾರಣ ತನಿಖೆಯ ಬಳಿಕವಷ್ಟೇ ತಿಳಿದು ಬರಬೇಕಿದೆ. (ಕೆ.ಎಸ್,ಎಸ್.ಎಚ್)