ಪ್ರಮುಖ ಸುದ್ದಿ

ಒತ್ತುವರಿ ಜಾಗದಲ್ಲಿ ರಸ್ತೆ ನಿರ್ಮಾಣ : ಕ್ರಮಕ್ಕೆ ಒತ್ತಾಯ

ರಾಜ್ಯ( ಮಡಿಕೇರಿ) ಏ.28 :- ಕೊರೋನಾ ಲಾಕ್‍ಡೌನ್‍ನ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡು ಪಂಚಾಯಿತಿ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೋಮವಾರಪೇಟೆ ತಾಲೂಕಿನ ಶಿರಂಗಳ್ಳಿ ಗ್ರಾಮದ ವೃದ್ಧೆಯೊಬ್ಬರಿಗೆ ಸೇರಿದ ಖಾಸಗಿ ಜಾಗವನ್ನು ಒತ್ತುವರಿ ಮಾಡಿ ರಸ್ತೆ ನಿರ್ಮಿಸಿರುವ ಕುರಿತು ಆರೋಪಗಳು ಕೇಳಿ ಬಂದಿದೆ. ಅನಾರೋಗ್ಯದ ಕಾರಣ ಮೈಸೂರಿನಲ್ಲಿ ಉಳಿದುಕೊಂಡಿರುವ ವೃದ್ಧೆಯ ಪರವಾಗಿ ಅವರ ಪುತ್ರಿ ಜಿಲ್ಲಾಡಳಿತದ ಮೊರೆ ಹೋಗಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಅಳಲು ತೋಡಿಕೊಂಡ ಶಿರಂಗಳ್ಳಿ ಗ್ರಾಮದ ವೃದ್ಧೆ ಎಂ.ಕೆ.ಪೂವಮ್ಮ ಅವರ ಪುತ್ರಿ, ನಿವೃತ್ತ ದಾದಿ ಎಂ.ಕೆ.ಶಾಂತಿ ಅವರು, ತಮ್ಮ ತಾಯಿ ಅನಾರೋಗ್ಯದಿಂದ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಾಗೂ ಲಾಕ್‍ಡೌನ್‍ನ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡ ಗರ್ವಾಲೆ ಪಂಚಾಯಿತಿಯ ಪ್ರತಿನಿಧಿಗಳು ಹಾಗೂ ಪಂಚಾಯಿತಿ ಪರವಾನಗಿ ಪಡೆದ ಗುತ್ತಿಗೆದಾರರು ಅಕ್ರಮವಾಗಿ ತಮ್ಮ ತಾಯಿಯ ಕಾಫಿ ತೋಟಕ್ಕೆ ನುಗ್ಗಿ, ಅಲ್ಲಿದ್ದ ಕಾಲುದಾರಿಯನ್ನು 10 ಅಡಿ ಅಗಲದ ರಸ್ತೆಯನ್ನಾಗಿ ಮಾರ್ಪಡಿಸಿದ್ದಾರೆ ಎಂದು ದೂರಿದರು.
ಶಿರಂಗಳ್ಳಿಯಿಂದ ಕಿರುದಾಲೆಗೆ ಸಂಪರ್ಕ ಕಲ್ಪಿಸುವ ರಸ್ತೆಗೆ 2015ರಲ್ಲೇ ಮಂಜೂರಾತಿ ದೊರಕಿದೆ. ಆದರೆ ಈ ರಸ್ತೆ ಪಂಚಾಯಿತಿಯ ಗುತ್ತಿಗೆದಾರರು ಒತ್ತುವರಿ ಮಾಡಿಕೊಂಡಿರುವ ಜಾಗದ ಮೂಲಕ ಹಾದುಹೋಗಬೇಕಿದ್ದು, ಇದನ್ನು ತಪ್ಪಿಸುವ ಸಲುವಾಗಿ ಗುತ್ತಿಗೆದಾರರೊಂದಿಗೆ ಪಂಚಾಯಿತಿಯ ಕೆಲವು ಪ್ರತಿನಿಧಿಗಳು ಹಾಗೂ ಪಿಡಿಒ ಸೇರಿಕೊಂಡು ಪೂವಮ್ಮ ಅವರಿಗೆ ಸೇರಿದ ಜಾಗದಲ್ಲಿ ಜೆಸಿಬಿ ಮೂಲಕ ರಸ್ತೆ ನಿರ್ಮಾಣ ಮಾಡಿದ್ದಾರೆ. ಇದನ್ನು ಪ್ರಶ್ನಿಸಿದ ತನಗೆ ಅವಾಚ್ಯ ಪದಗಳಿಂದ ಬೈದು ಜೀವ ಬೆದರಿಕೆಯನ್ನೂ ಒಡ್ಡಿದ್ದಾರೆ. ಈ ಕುರಿತು ಮಾದಾಪುರ ಆರಕ್ಷಕ ಠಾಣೆಗೆ ದೂರು ನೀಡಿದರೆ ಎಫ್‍ಐಆರ್ ದಾಖಲಿಸದೆ ಹಿಂಬರಹ ನೀಡಿ ಪೊಲೀಸರು ಕೈತೊಳೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ಇದೀಗ ನಮ್ಮ ಜಾಗವನ್ನು ಬಳಸಿಕೊಂಡು ನಿರ್ಮಿಸಲಾಗಿರುವ ರಸ್ತೆಯಲ್ಲಿ ಅನೇಕ ಖಾಸಗಿ ವಾಹನಗಳು ನಿಯಮ ಬಾಹಿರವಾಗಿ ಸಂಚರಿಸುತ್ತಿದ್ದು, ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ನಮ್ಮ ತಾಯಿ ಅವರಿಗೆ ಅನ್ಯಾಯವಾಗಿರುವುದಲ್ಲದೇ, ತಾಯಿ ಮನೆ ಇರುವ ವ್ಯಾಪ್ತಿಯಲ್ಲಿ ನಿಯಮ ಬಾಹಿರ ಚಟುವಟಿಕೆ ನಡೆಯುತ್ತಿದೆ. ಈ ಬಗ್ಗೆ ಜಿಲ್ಲಾಡಳಿತದ ಗಮನಸೆಳೆಯಲಾಗಿದ್ದು, ಸೂಕ್ತ ಸ್ಪಂದನದ ಭರವಸೆ ದೊರಕಿದೆ ಎಂದು ಹೇಳಿದರು.
ನಮ್ಮ ತಾಯಿಗೆ ಜಿಲ್ಲಾಡಳಿತದಿಂದ ನ್ಯಾಯ ದೊರಕದಿದ್ದಲ್ಲಿ ಗ್ರಾಮಸ್ಥರು ಹಾಗೂ ಸಂಘಟನೆಗಳ ನೆರವು ಪಡೆದು ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು. ನ್ಯಾಯ ದೊರಕದಿದ್ದಲ್ಲಿ ತಾಯಿ ಹಾಗೂ ಅವರ ಮೂವರು ಹೆಣ್ಣುಮಕ್ಕಳಿಗೆ ದಯಾ ಮರಣ ನೀಡುವಂತೆ ರಾಷ್ಟ್ರಪತಿಗಳಿಗೆ ಮನವಿ ಮಾಡಿಕೊಳ್ಳಲಾಗುವುದು ಎಂದು ಶಾಂತಿ ತಿಳಿಸಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: