ಮೈಸೂರು

ಭವಿಷ್ಯ ಬದಲಾಯಿಸಲು ನ್ಯಾನೋ ತಂತ್ರಜ್ಞಾನ ಅವತರಿಸಿದೆ : ಡಾ.ಹಾಲ್ದೊಡೇರಿ

ನ್ಯಾನೋ ತಂತ್ರಜ್ಞಾನ ಜಗತ್ತಿನ ವಿಜ್ಞಾನ ಪರಿಕಲ್ಪನೆಯನ್ನು ಬದಲಾಯಿಸುವ ಶಕ್ತಿ ಹೊಂದಿದ್ದು, ಮುಂದಿನ ಶತಮಾನದಲ್ಲಿ ನಮ್ಮ ಭವಿಷ್ಯವನ್ನು ಬದಲಾಯಿಸಲು ಅವತರಿಸಿದೆ ಎಂದು ಡಾ.ಹಾಲ್ದೊಡೇರಿ ಸುಧೀಂದ್ರ  ಹೇಳಿದರು.

ಅಖಿಲ ಭಾರತೀಯ ಸಾಹಿತ್ಯ ಪರಿಷತ್, ಮೈಸೂರು ಹಾಗೂ ಜಯಲಕ್ಷ್ಮಿಪುರಂ ನ ಮಹಾಜನ ಪ್ರಥಮ ದರ್ಜೆ ಕಾಲೇಜು ಕನ್ನಡ ವಿಭಾಗ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾತನೂರು ದೇವರಾಜು ಅವರ ‘ತಂತ್ರಜ್ಞಾನದ ಆಶಾಕಿರಣ-ನ್ಯಾನೋ’ ಎಂಬ ಪುಸ್ತಕವನ್ನು ಲೋಕಾರ್ಪಣೆಗೊಳಿಸಿದರು.

ಬಳಿಕ  ಮಾತನಾಡಿದ ಅವರು, ನ್ಯಾನೋ ತಂತ್ರಜ್ಞಾನ ಇತ್ತೀಚಿನ ಪರಿಕಲ್ಪನೆ ಅಲ್ಲ. 1959 ರಲ್ಲಿ ಅಮೇರಿಕಾದ ಕ್ಯಾಲಿಪೋರ್ನಿಯಾ ವಿವಿ ಯಲ್ಲಿ ಮೊಟ್ಟ ಮೊದಲ ಬಾರಿಗೆ ಹೊಸ ನ್ಯಾನೋ ತಂತ್ರಜ್ಞಾನವನ್ನು ಪರಿಚಯಿಸಲಾಯಿತು. ಇಂದು 400 ರಿಂದ 1000 ಮೀ. ಗಾತ್ರದ ನ್ಯಾನೋ ಯಂತ್ರಗಳನ್ನು ಆವಿಷ್ಕರಿಸಲಾಗಿದೆ. ಈ ಯಂತ್ರಗಳನ್ನು ನಮ್ಮ ದೇಹದಲ್ಲಿ ತೊಂದರೆಯಿರುವ ಸ್ಥಳಕ್ಕೆ ಕಳುಹಿಸಿದರೆ ಆ ನ್ಯೂನ್ಯತೆಗಳನ್ನು ಸರಿಪಡಿಸುವ ಕಲೆಯನ್ನು ಹೊಂದಿವೆ ಎಂದು ತಿಳಿಸಿದರು.

ಕೃತಿ ಕುರಿತು ಮಾತನಾಡಿ, ಸಾತನೂರು ದೇವರಾಜು ಅವರು ನ್ಯಾನೋ ತಂತ್ರಜ್ಞಾನದ ಬಗ್ಗೆ ಮಾಹಿತಿಯುಕ್ತ ಕೃತಿಯನ್ನು ಹೊರತಂದಿದ್ದಾರೆ. ಸರಳ ಹಾಗೂ ಆಡುಭಾಷೆಯಲ್ಲಿ ಕ್ಲಿಷ್ಟಕರ ವಿಜ್ಞಾನವನ್ನು ಸುಲಭವೆನ್ನುವಂತೆ ಬರೆದಿದ್ದಾರೆ. ಅವರ ಬರವಣಿಗೆಯ ಶೈಲಿ ವಿಭಿನ್ನವಾಗಿದೆ. ಸ್ವಾರಸ್ಯಕರ ಅಂಶಗಳನ್ನು ಉದಾಹರಣೆಗಳ ಸಹಿತ ನಿರೂಪಿಸಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲೂ ಸಹ ನ್ಯಾನೋ ತಂತ್ರಜ್ಞಾನ ಮಹತ್ವದ ಪಾತ್ರ ವಹಿಸುತ್ತದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಸ್ವಾಸ್ಥ್ಯ ರಕ್ಷಣೆಗೆ ಹೆಚ್ಚಿನ ಒತ್ತು ನೀಡಿದ್ದಾರೆ ಎಂದರು.

ಅಲ್ಲದೇ ಒಂದು ವಸ್ತುವನ್ನು ಪರಮಾಣು ಹಂತಕ್ಕೆ ತೆಗೆದುಕೊಂಡು ಹೋದರೆ ಅದರ ಮೂಲ ಗುಣಲಕ್ಷಣಗಳು ಬದಲಾಗುತ್ತವೆ ಎಂಬುದನ್ನು ಪ್ರಸ್ತಾಪಿಸಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಸವಾಲುಗಳನ್ನು ಎದುರಿಸಲು ನ್ಯಾನೋ ತಂತ್ರಜ್ಞಾನ ಸಹಕಾರಿಯಾಗಿದೆ. ಇದರಿಂದ ಸಾತನೂರು ದೇವರಾಜು ಅವರ ಓದಿನ ಅರಿವನ್ನು ತಿಳಿಯಬಹುದಾಗಿದೆ. ಬಹಳ ಅಚ್ಚುಕಟ್ಟಾದ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಬರೆದಿದ್ದಾರೆ. ವಿಜ್ಞಾನ ಮತ್ತು ವಿಜ್ಞಾನೇತರ ವಿದ್ಯಾರ್ಥಿಗಳು ಸಹ ಈ ಪುಸ್ತಕವನ್ನು ಓದಬೇಕು. ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಪಟ್ಟಂತೆ ಕನ್ನಡ ಕೃತಿಗಳು ಇನ್ನೂ ಹೆಚ್ಚಾಗಿ ಬರಬೇಕು. ಕನ್ನಡ ಭಾಷೆಗೆ ಹೆಚ್ಚಿನ ಮಾನ್ಯತೆ ಸಿಗಬೇಕು ಎಂದು ಹೇಳಿದರು.

ಮಹಾಜನ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ವಿ.ಪ್ರಭಾಕರ ಕಾರ್ಯಕ್ರಮದ ಅಧ‍್ಯಕ್ಷತೆ ವಹಿಸಿದ್ದರು. ಪರಿಷತ್ ನ ಸಂಚಾಲಕ ಜಗದೀಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಂಡ್ಯ ಜಿಲ್ಲೆಯ ಕಸಾಪ ಅಧ‍್ಯಕ್ಷ ರವಿಕುಮಾರ್ ಚಾಮಲಾಪುರ, ಮೈಸೂರು ಜಿಲ್ಲೆಯ ಕಸಾಪ ಅಧ‍್ಯಕ್ಷ ಡಾ.ವೈ.ಡಿ.ರಾಜಣ್ಣ, ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಆರ್.ತಿಮ್ಮೇಗೌಡ, ಕೃತಿಯ ಲೇಖಕ ಸಾತನೂರು ಮಹಾದೇವ  ಉಪಸ‍್ಥಿತರಿದ್ದರು. (ಎಲ್.ಜಿ-ಎಸ್.ಎಚ್)

Leave a Reply

comments

Related Articles

error: