ಮೈಸೂರು

ಕೋವಿಡ್-19 ಲಾಕ್‌ಡೌನ್ ಹಿನ್ನೆಲೆ : 40 ದಿನಗಳಿಂದ ನಿತ್ಯ 250 ಮಂದಿಗೆ ಆಹಾರ ವಿತರಿಸಿದ ಪಿ. ಮಹದೇವು

ಮೈಸೂರು,ಏ.29:- ಕೊರೊನಾ ವೈರಸ್ ಮಾರಣಾಂತಿಕ ಸೋಂಕು ಹರಡದಂತೆ ತಡೆಯಲು ದೇಶಾದ್ಯಂತ ಲಾಕ್‌ಡೌನ್ ನಿರ್ಬಂಧ ವಿಧಿಸಿದ ಹಿನ್ನೆಲೆಯಲ್ಲಿ ನಿರ್ಗತಿಕರು, ವಲಸಿಗರು ಹಾಗೂ ನಿರಾಶ್ರಿತರಿಗೆ ಹಲವು ಸಂಘ-ಸಂಸ್ಥೆಗಳು, ಜನಪ್ರತಿನಿಧಿಗಳು ಆಹಾರದ ಪೊಟ್ಟಣ ಹಾಗೂ ದಿನಸಿ ಪದಾರ್ಥಗಳ ಕಿಟ್ ವಿತರಿಸುವ ಮೂಲಕ ನೆರವು ನೀಡುವುದರೊಂದಿಗೆ ಹಸಿದವರ ಹೊಟ್ಟೆ ತುಂಬಿಸುತ್ತಿದ್ದಾರೆ.

ಅದರಿಂದಾಗಿ ಜಿಲ್ಲಾಡಳಿತ ಹಾಗೂ ಮೈಸೂರು ಮಹಾನಗರ ಪಾಲಿಕೆಗೆ ದಾನಿಗಳ ನೆರವಿನಿಂದ ನಿರ್ಗತಿಕರ ಹಸಿವು ನೀಗಿಸುವ ಜವಾಬ್ದಾರಿ ಕಡಿಮೆಯಾಗಿರುವ ಜೊತೆಗೆ ಕೆಲವು ದಾನಿಗಳೂ ವೈಯಕ್ತಿಕವಾಗಿ ನೆರವು ನೀಡುತ್ತಿರುವುದು ಶ್ಲಾಘನೀಯ.

ಮೈಸೂರಿನ ಪಡುವಾರಹಳ್ಳಿಯ ಹುಣಸೂರು ರಸ್ತೆಯಲ್ಲಿ ಲೇಖನ ಸಾಮಗ್ರಿ ಅಂಗಡಿ ಮಾಲೀಕ ಪಿ. ಮಹದೇವು, ಲಾಕ್‌ಡೌನ್ ಘೋಷಣೆಯಾದ ದಿನದಿಂದಲೂ ನಿರಂತರವಾಗಿ ಪ್ರತೀ ನಿತ್ಯ ರಾತ್ರಿ 250 ಮಂದಿಗೆ ತಾವೇ ಮನೆಯಲ್ಲಿ ತಯಾರಿಸಿದ ಆಹಾರವನ್ನು ವಿತರಿಸುತ್ತಾ ಬಂದಿದ್ದಾರೆ.

ಸ್ನೇಹಿತರಾದ ಲೋಕೇಶ್ ಮತ್ತು ಹರೀಶ್ ಅಡುಗೆ ತಯಾರಿಸಲು ಕಳೆದ 40 ದಿನಗಳಿಂದ ಅವರಿಗೆ ಸಹಾಯ ಮಾಡಿದ್ದು, ಕೆ.ಆರ್. ಆಸ್ಪತ್ರೆ, ರೈಲು ನಿಲ್ದಾಣ ಸರ್ಕಲ್, ಬಂಬೂ ಬಜಾರ್ ಸರ್ಕಲ್, ನಂಜರಾಜ ಬಹದ್ದೂರ್ ಛತ್ರದ ಸಾಂತ್ವನ ಕೇಂದ್ರ, ಕುಂಬಾರಕೊಪ್ಪಲಿನ ಶ್ರೀ ಮಹದೇಶ್ವರ ಕಲ್ಯಾಣ ಮಂಟಪ, ಗುರು ರೆಸಿಡೆನ್ಸಿಯಲ್ಲಿ ಆಶ್ರಯ ಪಡೆದಿರುವವರಿಗೆ ಆಹಾರದ ಪೊಟ್ಟಣಗಳನ್ನು ವಿತರಿಸುತ್ತಿದ್ದಾರೆ.

ಅವರಿಗೆ ಆಹಾರ ಪದಾರ್ಥ ವಿತರಿಸಲು ಮೈಸೂರು ಮಹಾನಗರ ಪಾಲಿಕೆಯಿಂದ ವಾಹನ ಪಾಸ್ ನೀಡಿದ್ದು, ಆಸ್ಪತ್ರೆ ಸಿಬ್ಬಂದಿಗೆ ಊಟ ವಿತರಿಸಿದ್ದನ್ನು ಪರಿಗಣಿಸಿ ಕೆ.ಆರ್. ಆಸ್ಪತ್ರೆಯಿಂದ ವೈದ್ಯಕೀಯ ಅಧೀಕ್ಷಕ ಡಾ. ಎನ್. ನಂಜುಂಡಸ್ವಾಮಿ, ಮಹದೇವು ಅವರಿಗೆ ಕೃತಜ್ಞತಾ ಪತ್ರ ನೀಡಿ, ಪ್ರಶಂಸೆ ವ್ಯಕ್ತಪಡಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: