ಪ್ರಮುಖ ಸುದ್ದಿಮೈಸೂರು

94ಮಂದಿ ಆಶಾ ಕಾರ್ಯಕರ್ತೆಯರಿಗೆ ತಲಾ 2ಸಾವಿರ ರೂ.ಗಳ ಪ್ರೋತ್ಸಾಹ ಧನ  ಚೆಕ್ ವಿತರಿಸಿದ ಸಚಿವ ಎಸ್.ಟಿ.ಸೋಮಶೇಖರ್

ಮೈಸೂರು,ಏ.29:- ಮೈಸೂರು ಜಿಲ್ಲೆಯಲ್ಲಿ ಕೋವಿಡ್-19 ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ಪ್ರತಿ ಮನೆ ಮನೆಗೆ ತೆರಳಿ  ಕ್ರಮವಹಿಸುತ್ತಿರುವುದನ್ನು ಶ್ಲಾಘಿಸಿ ಅವರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಮೈಸೂರಿನಲ್ಲಿಂದು ಸಾಂಕೇತಿಕವಾಗಿ 94ಮಂದಿ ಆಶಾ ಕಾರ್ಯಕರ್ತೆಯರಿಗೆ ತಲಾ 2ಸಾವಿರ ರೂ.ಗಳ ಪ್ರೋತ್ಸಾಹ ಧನ  ಚೆಕ್ ವಿತರಿಸಿದರು.

ಮೈಸೂರು ಮಹಾನಗರ ಪಾಲಿಕೆ ಎದುರು ನಡೆದ ಸರಳ ಕಾರ್ಯಕ್ರಮದಲ್ಲಿ ಚೆಕ್ ವಿತರಿಸಿ ಮಾತನಾಡಿದ ಅವರು ಈ ದಿನ ಸಾಂಕೇತಿಕವಾಗಿ ಮೈಸೂರು ನಗರ ವ್ಯಾಪ್ತಿಯಲ್ಲಿರುವ 94ಮಂದಿ ಆಶಾ ಕಾರ್ಯಕರ್ತೆಯರಿಗೆ ತಲಾ 2ಸಾವಿರ ರೂ.ಗಳ ಚೆಕ್ ವಿತರಿಸಲಾಗಿದೆ ಎಂದರು. ಅವರ ಕಾರ್ಯವನ್ನು ಶ್ಲಾಘಿಸುವ ನಿಟ್ಟಿನಲ್ಲಿ ಅವರಿಗೆ ಪ್ರೋತ್ಸಾಹ ಧನ ನೀಡುವಂತೆ ಸಹಕರಿಸಲು ಸಹಕಾರ ಸಂಘಗಳಿಗೆ ಮನವಿ ಮಾಡಲಾಗಿತ್ತು. ಮೈಸೂರು ಜಿಲ್ಲೆಯಲ್ಲಿ ಒಟ್ಟು 1898 ಸಂಖ್ಯೆಯ ಆಶಾ ಕಾರ್ಯಕರ್ತೆಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರುಗಳಿಗೆ ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘಗಳು ಮತ್ತು ವ್ಯವಸಾಯ ಸೇವಾ ಸಹಕಾರ ಸಂಘಗಳು ಕನಿಷ್ಟ 2ಸಾವಿರದಿಂದ 5ಸಾವಿರ ರೂ.ವರೆಗೆ ಪ್ರೋತ್ಸಾಹ ಧನ ನೀಡುವಂತೆ ಕೇಳಿಕೊಳ್ಳಲಾಗಿತ್ತು. ಜಿಲ್ಲೆಯ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಸುಮಾರು 38ಲಕ್ಷಗಳನ್ನು ಜಿಲ್ಲೆಯ ಸಹಕಾರ ಸಂಘಗಳು   ಪ್ರೋತ್ಸಾಹ ಧನವಾಗಿ ನೀಡಲು ವಿನಂತಿಸಿಕೊಳ್ಳಲಾಗಿತ್ತು. ಈ ಸಂಬಂಧ ಸಹಕಾರ ವಲಯದಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ ಎಂದರು.

ಜಿಲ್ಲೆಯ ಪ್ರತಿಗ್ರಾಮದಲ್ಲಿಯೂ ಸಹಕಾರ ಸಂಗಗಳು ಸ್ಥಾಪಿತವಾಗಿದ್ದು, ಆ ಸಂಘಗಳ ಪ್ರೋತ್ಸಾಹ ಧನವು ಆ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ತಲುಪಲಿದೆ. ಈ ಪ್ರೋತ್ಸಾಹ ಧನವನ್ನು ನಗರದ ಮುಸ್ಲಿಂ ಕೋ-ಆಪರೇಟಿವ್ ಬ್ಯಾಂಕ್ ನಿ, ಕೆಪಿಟಿಸಿಎಲ್ ಪತ್ತಿನ ಸಹಕಾರ ಸಂಘ, ದಿ-ರೈಲ್ವೆ ಗೃಹ ನಿರ್ಮಾಣ ಸಂಘ ನಿ ಮೈಸೂರು ಸಂಸ್ಥೆಗಳು ನೀಡಿವೆ. ಮುಂದಿನ ದಿನಗಳಲ್ಲಿ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಈ ಪ್ರೋತ್ಸಾಹ ಧನ ತಲುಪಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭ ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಮನಪಾ ಆಯುಕ್ತ ಗುರುದತ್ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: