ಮೈಸೂರು

ಸರ್ಕಾರದ ಅವಲಂಬನೆ ಇಲ್ಲದೇ ಬದುಕುವ ರೀತಿ ಅಳವಡಿಸಿದಾಗ ಸಬಲೀಕರಣ ಸಾಧ್ಯ : ಬಿ ಶಿವಶಂಕರ

ಮೈಸೂರು ಬಿ ಎನ್ ರಸ್ತೆಯಲ್ಲಿರುವ ಜೆಎಸ್‍ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ವತಿಯಿಂದ “ಕೆರಿಯರ್ಸ್ ಇನ್ ಸೋಷಿಯಲ್ ವರ್ಕ್” ಎಂಬ ಕಾರ್ಯಾಗಾರವನ್ನು ಕಾಲೇಜಿನ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.

ಮೈಸೂರಿನ ಜಿಲ್ಲಾ  ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ ಶಿವಶಂಕರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು  ಪ್ರಸ್ತುತ ಸಮಾಜದಲ್ಲಿ ಸರ್ಕಾರದ ಅವಲಂಬನೆ ಇಲ್ಲದೇ ಬದುಕುವ ರೀತಿಯನ್ನು ಯುವ ಸಮುದಾಯವು ಅಳವಡಿಸಿಕೊಂಡಾಗ ಸಬಲೀಕರಣ ಮತ್ತು ದೇಶದ ಉನ್ನತಿ ಸಾಧ್ಯ ಎಂದು ಕರೆ ನೀಡಿದರು.  ಪೂರಕವಾಗಿ  ಆಹಾರವನ್ನು ನೀಡುವ ಬದಲು ಆಹಾರವನ್ನು ಉತ್ಪಾದಿಸಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸಬೇಕೆಂದು ತಿಳಿಸಿದರು. ಅದಕ್ಕಾಗಿ ತಂಡ ನಿರ್ಮಾಣದ ಮೂಲಕ ಸಮುದಾಯದ ಸಂಘಟನೆಯ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.

ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ  ಪ್ರೊ. ಬಿ. ವಿ. ಸಾಂಬಶಿವಯ್ಯ ಮಾತನಾಡಿ ಯಶಸ್ವಿ ವೃತ್ತಿಜೀವನದ ಹಾದಿಯು ಬಹಳ ಸುಲಭವಾದದ್ದೇನಾಗಿರುವುದಿಲ್ಲ. ಅದು ಬಹಳ ಯೋಜಿತವಾದ, ಅದೃಷ್ಟದ ವಿಚಾರವೂ ಆಗಿರುತ್ತದೆ. ಅಷ್ಟಲ್ಲದೆ ವೃತ್ತಿ ಜೀವನದ ಯೋಜನೆಯು ಜ್ಞಾನಾಧಾರಿತವಾದದ್ದಾಗಿದ್ದು, ಅದಕ್ಕಾಗಿ ವ್ಯಕ್ತಿಗೆ ತನ್ನ ಬೇಕು-ಬೇಡಗಳ ಬಗ್ಗೆ ಸಂಪೂರ್ಣ ಅರಿವಿರಬೇಕಾಗುತ್ತದೆ ಎಂದು ತಿಳಿಸಿದರು.

ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಬಿಡದಿಯ ಟಯೋಟ ಕಿರ್ಲ್ಲೋಸ್ಕರ್‍ನ ತರಬೇತುದಾರ ಡಾ. ಬಿ. ಜಗದೀಶ್  ಮಾತನಾಡಿ ಸಾಂಪ್ರದಾಯಿಕ ವೃತ್ತಿ ಅವಕಾಶಗಳು ಹೊಸ ಬದಲಾವಣೆಯ ಅಂಗವಾಗಿ ಉದ್ಭವಿಸಿರುವ ವೃತ್ತಿ ಅವಕಾಶಗಳು ಮತ್ತು ಸಮಾಜ ಕಾರ್ಯಕರ್ತರು ಯಶಸ್ವಿಯಾಗಿ ಸೂಕ್ತ ವೃತ್ತಿಯನ್ನು ಆರಿಸಿಕೊಳ್ಳಲು ಅವಶ್ಯವಿರುವ ಕೌಶಲ್ಯಗಳನ್ನು ಕುರಿತು ವಿಶಾಲವಾದ ಮಾಹಿತಿಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ. ಮಹದೇವಪ್ಪ, ಸಮಾಜ ಕಾರ್ಯ ವಿಭಾಗದ  ಮುಖ್ಯಸ್ಥ ಡಾ. ಎಂ ಪಿ ಸೋಮಶೇಖರ, ವಿಭಾಗದ ಅಧ್ಯಾಪಕರು ಹಾಗೂ ರಾಜ್ಯದ ವಿವಿಧ ಕಾಲೇಜುಗಳ 100 ಕ್ಕೂ ಹೆಚ್ಚು ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಜರಿದ್ದರು. (ಎಸ್.ಎಚ್)

Leave a Reply

comments

Related Articles

error: