ಕರ್ನಾಟಕಪ್ರಮುಖ ಸುದ್ದಿ

ರಾಜ್ಯದಲ್ಲಿ ಮತ್ತೆ ಮೂವರಲ್ಲಿ ಕೊರೊನಾ ಸೋಂಕು: ಸೋಂಕಿತರ ಸಂಖ್ಯೆ 601ಕ್ಕೆ ಏರಿಕೆ

ಬೆಂಗಳೂರು,ಮೇ 2-ರಾಜ್ಯದಲ್ಲಿ ಇಂದು ಮತ್ತೆ 12 ಮಂದಿಯಲ್ಲಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 601ಕ್ಕೆ ಏರಿಕೆಯಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಧ್ಯಾಹ್ನ 12 ಗಂಟೆಗೆ ಬಿಡುಗಡೆ ಮಾಡಿದ್ದ ವರದಿಯಲ್ಲಿ 9 ಮಂದಿಗೆ ಸೋಂಕು ತಗುಲಿತ್ತು. ಸಂಜೆ 5 ಗಂಟೆಗೆ ಬಿಡುಗಡೆ ಮಾಡಿರುವ ವರದಿಯಲ್ಲಿ ಮೂವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಿಂದ ಇಂದು ರಾಜ್ಯದಲ್ಲಿ ಒಟ್ಟು 12 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 601ಕ್ಕೆ ಏರಿಕೆಯಾಗಿದೆ.

ಸಂಜೆಯ ವರದಿಯಲ್ಲಿ ಬೆಂಗಳೂರು ನಗರದ ಮೂವರಲ್ಲಿ ಸೋಂಕು ದೃಢಪಟ್ಟಿದೆ. 26 ವರ್ಷ, 38 ವರ್ಷದ ಮಹಿಳೆಯರು, 30 ವರ್ಷದ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದ್ದು, ಇವರೆಲ್ಲರೂ ರೋಗಿ 565ರ ಸಂಪರ್ಕದಲ್ಲಿದ್ದರು. ಇದಕ್ಕೂ ಮುನ್ನ 32 ವರ್ಷದ ಮಹಿಳೆಗೆ ಸೋಂಕು ತಗುಲಿತ್ತು. ಇವರು ರೋಗಿ 444ರ ಸಂಪರ್ಕದಲ್ಲಿದ್ದರು. ಇದರಿಂದ ಬೆಂಗಳೂರು ನಗರದಲ್ಲಿ ನಾಲ್ವರಲ್ಲಿ ಸೋಂಕು ದೃಢಪಟ್ಟಿದೆ.

ಬೆಂಗಳೂರಿನಲ್ಲಿ 4, ತುಮಕೂರು, ವಿಜಯಪುರದಲ್ಲಿ ತಲಾ 2, ಚಿಕ್ಕಬಳ್ಳಾಪುರ, ಬೀದರ್, ಬೆಳಗಾವಿ, ಬಾಗಲಕೋಟೆಯಲ್ಲಿ ತಲಾ 1 ಪ್ರಕರಣ ವರದಿಯಾಗಿದೆ.

ಮೈಸೂರು ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಯಾವುದೇ ಪ್ರಕರಣ ವರದಿಯಾಗಿಲ್ಲ. ಮೈಸೂರಿನಲ್ಲಿ 90 ಸೋಂಕಿತರ ಪೈಕಿ ಇದುವರೆಗೂ 66 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, 24 ಮಂದಿ ಕೋವಿಡ್ 19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿನ್ನೆ ಪಿ-383 ಗುಣಮುಖರಾಗಿ ಕೋವಿಡ್ 19 ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಬೆಳಗಿನ ವರದಿಯ ಪ್ರಕಾರ ತುಮಕೂರಿನಲ್ಲಿ 40 ವರ್ಷದ ವ್ಯಕ್ತಿ, 29 ವರ್ಷದ ಮಹಿಳೆಗೆ ಸೋಂಕು ತಗುಲಿದ್ದು, ಇವರಿಬ್ಬರು ರೋಗಿ 535 ಹಾಗೂ 553ರ ಸಂಪರ್ಕದಲ್ಲಿದ್ದರು. ವಿಜಯಪುರದಲ್ಲಿ 22 ವರ್ಷದ ಯುವಕ, 45 ವರ್ಷದ ವ್ಯಕ್ತಿಗೆ ಸೋಂಕು ತಗುಲಿದ್ದು, ಇವರಿಬ್ಬರು ರೋಗಿ 221ರ ಸಂಪರ್ಕದಲ್ಲಿದ್ದರು. ಚಿಕ್ಕಬಳ್ಳಾಪುರದಲ್ಲಿ 54 ವರ್ಷದ ವ್ಯಕ್ತಿಗೆ ಸೋಂಕು ತಗುಲಿದ್ದು, ಇವರು ರೋಗಿ 250ರ ದ್ವಿತೀಯ ಸಂಪರ್ಕದಲ್ಲಿದ್ದರು. ಬೀದರ್ ನಲ್ಲಿ 82 ವರ್ಷದ ವೃದ್ಧನಿಗೆ ಸೋಂಕು ತಗುಲಿದ್ದು, ಇವರಿಗೆ ತೀವ್ರ ಉಸಿರಾಟದ ಸಮಸ್ಯೆ (SARI) ಇದೆ. ಬೆಳಗಾವಿಯಲ್ಲಿ 23 ವರ್ಷದ ಯುವಕನಿಗೆ ಸೋಂಕು ತಗುಲಿದ್ದು, ಇವರು ರೋಗಿ 128ರ ದ್ವಿತೀಯ ಸಂಪರ್ಕದಲ್ಲಿದ್ದರು. ಬಾಲಗಕೋಟೆಯ ಜಮಖಂಡಿಯಲ್ಲಿ 45 ವರ್ಷದ ಮಹಿಳೆಗೆ ಸೋಂಕು ತಗುಲಿದ್ದು, ಇವರು ರೋಗಿ 381ರ ಸಂಪರ್ಕದಲ್ಲಿದ್ದರು.

ರಾಜ್ಯದಲ್ಲಿ ಇಂದು 20 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬೆಳಗಾವಿಯಲ್ಲಿ 8, ಕಲಬುರಗಿಯಲ್ಲಿ 6, ಬೀದರ್, ಧಾರವಾಡ, ಬೆಂಗಳೂರು ನಗರದಲ್ಲಿ ತಲಾ 2 ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ರಾಜ್ಯದಲ್ಲಿ 601 ಸೋಂಕಿತರ ಪೈಕಿ 25 ಮಂದಿ ಮೃತಪಟ್ಟಿದ್ದು, 271 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. (ಎಂ.ಎನ್)

Leave a Reply

comments

Related Articles

error: