ಮೈಸೂರು

ಎಲ್ಲ ಜನಾಂಗದವರಿಗೆ ದೇವಾಲಯಕ್ಕೆ ಮುಕ್ತ ಪ್ರವೇಶ ನೀಡಿದವರು ಶ್ರೀರಾಮಾನುಜಾಚಾರ್ಯರು : ಶಾಸಕ ಎಲ್.ನಾಗೇಂದ್ರ ಬಣ್ಣನೆ

ಮೈಸೂರು,ಮೇ.3:- ಶ್ರೀ ರಾಮಾನುಜಾಚಾರ್ಯರ ಜಯಂತಿಯ ಅಂಗವಾಗಿ ಸರಸ್ವತಿಪುರಂನಲ್ಲಿರುವ ಶ್ರೀ ರಾಮಾನುಜ ಅಭ್ಯುದಯ ಸಹಕಾರ ಸಂಘ ಕಚೇರಿಯಲ್ಲಿಂದು 100 ಕ್ಕೂ  ಹೆಚ್ಚು ಮಂದಿಗೆ ಆಹಾರ ಪದಾರ್ಥ ಅವಶ್ಯಕತೆಯಿರುವವರಿಗೆ ದಿನಸಿ ಕಿಟ್ ನೀಡಲಾಯಿತು.

ಈ ಸಂದರ್ಭದಲ್ಲಿ  ಚಾಮರಾಜ ಕ್ಷೇತ್ರದ ಶಾಸಕರಾದ  ನಾಗೇಂದ್ರ ಮಾತನಾಡಿ ರಾಮಾನುಜಾಚಾರ್ಯರು ಶ್ರೀ ವಿಶಿಷ್ಟ ಅದ್ವೈತವನ್ನು ಎಲ್ಲರಿಗೂ ಬೋಧಿಸುವ ಮೂಲಕ, ಎಲ್ಲ ಜನಾಂಗದವರಿಗೆ ದೇವಾಲಯಕ್ಕೆ ಮುಕ್ತ ಪ್ರವೇಶ ನೀಡಿದರು ಎಂದು ಬಣ್ಣಿಸಿದರು.   ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ.ಟಿ ಪ್ರಕಾಶ್ ಮಾತನಾಡಿ ಆಚಾರ್ಯತ್ರಯರಲ್ಲಿ ಶಂಕರಾಚಾರ್ಯರ ನಂತರ ಬಂದ ರಾಮಾನುಜಾಚಾರ್ಯರು ನಮ್ಮ ಕರ್ನಾಟಕದಲ್ಲಿ ಮೇಲುಕೋಟೆಯಲ್ಲಿ 12 ವರ್ಷ ವಾಸವಿದ್ದು ಅಲ್ಲಿ ಇದ್ದಂಥ ಜನರಿಗೆ ಕೆರೆಯನ್ನು ನಿರ್ಮಾಣ ಮಾಡಿ ಕೃಷಿಗೂ ಸಹ ಪ್ರೋತ್ಸಾಹ ನೀಡಿ, ದೇವಾಲಯದಲ್ಲಿ ಎಲ್ಲಾ ಜನಾಂಗದವರಿಗೂ ಒಂದೊಂದು ರೀತಿಯ ಕೆಲಸವನ್ನು ನೀಡುವುದರ ಮೂಲಕ ಎಲ್ಲರನ್ನೂ ಸಮಾನವಾಗಿ ನೋಡಿದವರು ಎಂದು ಹೇಳಿದರು.

ಭಾಜಪ ನಗರ ಅಧ್ಯಕ್ಷರಾದ ಶ್ರೀವತ್ಸ ಮಾತನಾಡಿ ಕೊರೋನಾ ಎಂಬ ಮಾರಣಾಂತಿಕ ರೋಗ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದೆ ಇತರ ರಾಷ್ಟ್ರಗಳನ್ನು ನೋಡಿದರೆ ಭಾರತದಲ್ಲಿ ಸಾವಿನ ಸಂಖ್ಯೆ ತೀರಾ ಕಡಿಮೆ.   ದೇಶದ ಪ್ರಧಾನಿಯಾದ ನರೇಂದ್ರ ಮೋದಿಯವರ ದಿಟ್ಟ ನಿರ್ಧಾರಗಳೇ  ಇದಕ್ಕೆ ಕಾರಣ.  ಈ ಸನ್ನಿವೇಶದಲ್ಲಿ ರಾಮಾನುಜ ಸಹಕಾರ ಸಂಘ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ ಕೆಲಸ. ಈ ಸಂಘವನ್ನು ನೋಡಿ ಇತರೆ ಬ್ಯಾಂಕ್, ಸಂಘ ಸಂಸ್ಥೆಯವರು ಅಗತ್ಯ ವಸ್ತು ಬೇಕಿದ್ದವರಿಗೆ ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದ ಇಒ ಯತಿರಾಜ್ ಸಂಪತ್ ಕುಮಾರ್, ಸಂಘದ ಅಧ್ಯಕ್ಷರಾದ ಆಚಾರ್, ಉಪಾಧ್ಯಕ್ಷರಾದ ಪುಟ್ಟಸ್ವಾಮಿ,ನಿರ್ದೇಶಕರಾದ ಶ್ರೀನಿವಾಸ್ ಪ್ರಸಾದ್, ರಾಜ್ ಗೋಪಾಲ್, ಟಿ.ಎಸ್  ಅರುಣ್,ಯೋಗಾನರಸಿಂಹ, ವಿಕ್ರಂ ಅಯ್ಯಂಗಾರ್, ಕೇಶವಮೂರ್ತಿ, ಇನ್ನಿತರರು ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: