ಮೈಸೂರು

ಮನಕಲಕುವ ದೃಶ್ಯ: ಒಂದೆಡೆ ಊರು ಸೇರುವ ತವಕದಲ್ಲಿ ಕಾರ್ಮಿಕರು; ಮತ್ತೊಂದೆಡೆ ಮದ್ಯ ಖರೀದಿಸಲು ಮುಗ್ಗಿಬಿದ್ದ ಮದ್ಯ ಪ್ರಿಯರು

ಮೈಸೂರು,ಮೇ 5-ಕೊರೊನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ದೇಶವ್ಯಾಪಿ ಲಾಕ್ ಡೌನ್ ಘೋಷಿಸಿತ್ತು. ಇದರಿಂದ ಎಲ್ಲ ಚಟುವಟಿಕೆಗಳು ಬಂದ್ ಆಗಿದ್ದವು. ಬದುಕು ಕಟ್ಟಿಕೊಳ್ಳಲು ಬೇರೆಡೆಗಳಿಂದ ವಲಸೆ ಬಂದಿದ್ದ ದಿನಗೂಲಿ ಕಾರ್ಮಿಕರು ಕೆಲಸವೂ ಇಲ್ಲದೆ, ಊಟವೂ ಇಲ್ಲದೆ, ಊರಿಗೂ ಹೋಗಲಾಗದೆ ಸಂಕಷ್ಟಕ್ಕೆ ಸಿಲುಕಿದ್ದರು.

ಈ ನಡುವೆ ಕೇಂದ್ರ ಸರ್ಕಾರ ಕೆಲ ಷರತ್ತುಗಳನ್ನು ವಿಧಿಸಿ ನಿನ್ನೆಯಿಂದ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಿತ್ತು. ಮದ್ಯ ಮಾರಾಟಕ್ಕೆ ಸರ್ಕಾರ ಅನುಮತಿ ಕೊಡುತ್ತಿದ್ದಂತೆ ಮದ್ಯಪ್ರಿಯರು ಬೆಳಿಗ್ಗೆಯಿಂದಲೇ ಅಂಗಡಿ ಮುಂದೆ ನಿಂತು ಬಿಸಿಲಿನ ಝಳವನ್ನು ಲೆಕ್ಕಿಸದೆ ಮದ್ಯ ಖರೀದಿಸಿದ್ದರು.

ಕೆಲವೆಡೆ ಸಾಮಾಜಿಕ ಅಂತ ಕಾಯ್ದುಕೊಂಡರೆ ಮತ್ತೆ ಕೆಲವೆಡೆ ಸಾಮಾಜಿಕ ಅಂತರ ನಿಯಮವನ್ನು ಗಾಳಿಗೆ ತೂರಿ ಮದ್ಯ ಖರೀದಿಸಿದ್ದರು. ಅಲ್ಲದೆ, ಕಂಠಪೂರ್ತಿ ಕುಡಿದು ರಸ್ತೆಯಲ್ಲಿ ರಂಪಾಟ ಮಾಡಿದ್ದು, ರಸ್ತೆ ಬದಿಗಳಲ್ಲಿ ಪ್ರಜ್ಞೆ ಇಲ್ಲದೆ ಬಿದ್ದಿದ್ದನ್ನು ನೋಡಿದ್ದೇವು.

ಅದೇ ರೀತಿ ಮೈಸೂರಿನ ದೇವರಾಜ ಅರಸು ರಸ್ತೆಯಲ್ಲಿನ ಮದ್ಯದಂಗಡಿ ಮುಂದೆ ಮದ್ಯ ಖರೀದಿಸಲು ಎಣ್ಣೆಪ್ರಿಯರು ಸರದಿ ಸಾಲಿನಲ್ಲಿ ನಿಂತಿದ್ದರೆ ಅದರ ಮತ್ತೊಂದು ಬದಿಯಲ್ಲಿ ಬದುಕು ಕಟ್ಟಿಕೊಳ್ಳಲು ಬೇರೆಡೆಗಳಿಂದ ಮೈಸೂರಿಗೆ ಆಗಮಿಸಿದ್ದ ಸುಮಾರು 27 ಕಾರ್ಮಿಕರ ಕುಟುಂಬ ಮಕ್ಕಳನ್ನು ಮಡಿಲಲ್ಲಿ ಎತ್ತಿಕೊಂಡು ತಮ್ಮ ಊರಿಗೆ ಸೇರಿಕೊಳ್ಳುವ ಸಲುವಾಗಿ ಜಿಲ್ಲಾಧಿಕಾರಿಗಳ ಕಚೇರಿಯತ್ತ ಹೆಜ್ಜೆ ಹಾಕುತ್ತಿದ್ದ ದೃಶ್ಯ ಮನಕಲಕುವಂತಿತ್ತು.

ಒಂದೆಡೆ ಕೆಲಸವಿಲ್ಲದೆ, ಊಟವೂ ಇಲ್ಲದೆ ಕಳೆದ ಒಂದೂವರೆ ತಿಂಗಳಿಂದ ಅತಂತ್ರ ಸ್ಥಿತಿಯಲ್ಲಿದ್ದ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ಸೇರಿಕೊಂಡರೆ ಸಾಕಪ್ಪ ಎಂಬ ತವಕದಲ್ಲಿದ್ದರೆ, ಮತ್ತೊಂದೆಡೆ ಕಳೆದ ಒಂದೂವರೆ ತಿಂಗಳಿನಿಂದ ಮದ್ಯ ಸೇವಿಸಿಲ್ಲ. ಬೇಜಾರಾಗಿದೆ. ಇವತ್ತು ಎಷ್ಟೊತ್ತಾದರೂ ಪರವಾಗಿಲ್ಲ. ಮದ್ಯ ಖರೀದಿಸಿ ಕುಡಿದು ಬಿಡಬೇಕಪ್ಪ ಎಂಬ ಮದ್ಯಪ್ರಿಯರು.

ಮೂರು ತಿಂಗಳ ಹಿಂದೆ ಗಾರೆ ಕೆಲಸಕ್ಕೆಂದು ಮೈಸೂರಿಗೆ ಬಂದಿದ್ದ ರಾಯಚೂರು, ಕೊಪ್ಪಳ ಹಾಗೂ ಯಾದಗಿರಿ ಜಿಲ್ಲೆಯ 27 ಕಾರ್ಮಿಕರ ಕುಟುಂಬಗಳು ಲಾಕ್ ಡೌನ್ ನಿಂದಾಗಿ ಊರಿಗೆ ತೆರಳಲಾಗದೆ ಕಳೆದ ಒಂದೂವರೆ ತಿಂಗಳಿನಿಂದ ಸಂಕಷ್ಟಕ್ಕೆ ಸಿಲುಕಿದ್ದರು.

ಇವರು ರಾಜೀವನಗರದ ಶೆಡ್ ವೊಂದರಲ್ಲಿ ವಾಸಿಸುತ್ತಿದ್ದರು. ಅವರಲ್ಲಿ 11 ಮಂದಿ ಮಕ್ಕಳು ಹಾಗೂ 11 ಮಂದಿ ಮಹಿಳೆಯರು ಇದ್ದಾರೆ. ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಅವರು ವಾಸವಿದ್ದ ಶೆಡ್ ನೆಲಸಮವಾಗಿತ್ತು. ಹೀಗಾಗಿ ಊರಿಗೆ ಹೋಗಿ ಸೇರಿಕೊಳ್ಳುವುದೇ ಒಳಿತು ಎಂದು ನಿನ್ನೆ ಗಂಟುಮೂಟೆ ಕಟ್ಟಿಕೊಂಡು, ಮಕ್ಕಳನ್ನು ಎತ್ತಿಕೊಂಡು ಜಿಲ್ಲಾಧಿಕಾರಿ ಕಚೇರಿವರೆಗೆ ನಡೆದುಕೊಂಡು ಬಂದಿದ್ದಾರೆ.

ಸದ್ಯಕ್ಕೆ ಅವರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದ್ದು, ಒಂದೆರಡು ದಿನಗಳಲ್ಲಿ ಅವರ ಜಿಲ್ಲೆಗಳಿಗೆ ಬಸ್ ನಲ್ಲಿ ಕಳುಹಿಸಿಕೊಡಲು ವ್ಯವಸ್ಥೆ ಮಾಡುತ್ತೇವೆ ಎಂದು ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತ ತಮ್ಮಣ್ಣ ತಿಳಿಸಿದ್ದಾರೆ. (ಎಂ.ಎನ್)

Leave a Reply

comments

Related Articles

error: