ನಮ್ಮೂರುಮೈಸೂರು

ಅಕ್ಟೋಬರ್ 1: ದಸರಾ ಉತ್ಸವಕ್ಕೆ ಚಾಲನೆ: ಅಕ್ಟೋಬರ್ 11ಕ್ಕೆ ಜಂಬೂಸವಾರಿ

ಮೈಸೂರಿನಲ್ಲಿ ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ನಡೆದಿದ್ದು, ನಾಡೋಜ ಚನ್ನವೀರ ಕಣವಿ ಚಾಮುಂಡಿ ಬೆಟ್ಟದಲ್ಲಿ ಅಕ್ಟೋಬರ್ 1ರಂದು ಬೆಳಿಗ್ಗೆ 11.46ಕ್ಕೆ ಸಲ್ಲುವ ಧನುರ್ ಲಗ್ನದಲ್ಲಿ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಅಕ್ಟೋಬರ್ 11ರಂದು ನಡೆಯುವ ಜಂಬೂ ಸವಾರಿಯಲ್ಲಿ 36ಸ್ತಬ್ಧ ಚಿತ್ರಗಳು, 30ಕಲಾತಂಡಗಳು ಸಾಗಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.

ಮೈಸೂರಿನಲ್ಲಿ ದಸರಾ ಗೋಲ್ಡ್ ಕಾರ್ಡ್, ದಸರಾ ಪಂದ್ಯಾವಳಿಯ ಭಿತ್ತಿಚಿತ್ರಗಳನ್ನು ಬಿಡುಗಡೆಗೊಳಿಸಿದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ಎಚ್.ಸಿ.ಮಹದೇವಪ್ಪ ಅಕ್ಟೋಬರ್ 11ರಂದು ಮಧ್ಯಾಹ್ನ 2.16ರ ಮಕರ ಲಗ್ನದಲ್ಲಿ ಅರಮನೆ ಬಲರಾಮ ದ್ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಂದಿಧ್ವಜಕ್ಕೆ ಪೂಜೆ ನೆರವೇರಿಸಲಿದ್ದಾರೆ. ಬಳಿಕ ಮಧ್ಯಾಹ್ನ 2.45ಕ್ಕೆ ಜಂಬೂಸವಾರಿ ಮೆರವಣಿಗೆ ಅರಮನೆ ಆವರಣದಿಂದ ಹೊರಡಲಿದೆ ಎಂದರು.

ದಸರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಈಗಾಗಲೇ ಸಿದ್ಧಗೊಂಡಿದ್ದು ವಿತರಣೆ ಕಾರ್ಯವೂ ನಡೆದಿದೆ. ಮುಖ್ಯಮಂತ್ರಿಗಳು, ರಾಜ್ಯಪಾಲರು, ಮುಖ್ಯ ನ್ಯಾಯಮೂರ್ತಿಗಳು, ರಾಜವಂಶಸ್ಥರು ಸೇರಿದಂತೆ ಇನ್ನಿತರ ಗಣ್ಯರಿಗೆ ಅಧಿಕೃತ ಆಹ್ವಾನ ನೀಡಲಾಗುವುದು. ದಸರಾ ಕುರಿತಂತೆ ಎಲ್ಲ ಕಡೆ ಪ್ರಚಾರ ನಡೆಯುತ್ತಿದ್ದು ಸೂಕ್ತ ಮಾಹಿತಿಯನ್ನು ದಸರಾ ವೆಬ್ ಸೈಟ್ www.mysore.gov.in ನಲ್ಲಿಯೂ ಪಡೆಯಬಹುದು. ವಿವಿಧ ಸಾಂಸ್ಕೃತಿಕ ವೇದಿಕೆಯಲ್ಲಿ 203 ಕಾರ್ಯಕ್ರಮಗಳನ್ನು ಜೀವಜಲ ಶೀರ್ಷಿಕೆಯಡಿ ಜಲಸಂರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ.  ಎಂದು ತಿಳಿಸಿದರು.

ಆಗಸದಿಂದ ಮೈಸೂರು ವೀಕ್ಷಿಸಲು ಅವಕಾಶವಿದ್ದು, ಲಲಿತ ಮಹಲ್ ಹೆಲಿಪ್ಯಾಡ್ ನಿಂದ ಹೆಲಿಕಾಪ್ಟರ್ ಮೂಲಕ 10ನಿಮಿಷಗಳ ಕಾಲ ಆಗಸದಲ್ಲಿ ಸುತ್ತಾಡಬಹುದು. ಇದಕ್ಕೆ ಓರ್ವರಿಗೆ 2499ರೂ. ತಗುಲಲಿದೆ. ಅಕ್ಟೋಬರ್ 2ರಿಂದ 9ರವರೆಗೆ ಕೆ.ಎಸ್.ಆರ್.ಟಿ.ಸಿ ಪ್ಯಾಲೇಸ್ ಆನ್ ವ್ಹೀಲ್ಸ್ ಕಾರ್ಯಕ್ರಮದ ಮೂಲಕ ನಗರದ ಎಂಟು ಅರಮನೆಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದ್ದು ಓರ್ವರಿಗೆ 999ರೂ. ನಿಗದಿಪಡಿಸಲಾಗಿದೆ.

ಬನ್ನಿಮಂಟಪ ಮೈದಾನದಲ್ಲಿ ಅಕ್ಟೋಬರ್ 7ರಂದು ರಿಮೋಟ್ ಕಂಟ್ರೋಲ್ಡ್ ವಿಮಾನ ಮಾದರಿಗಳ ಹಾರಾಟ ನಡೆಯಲಿದೆ. ದಸರಾ ಕ್ರೀಡಾಕೂಟದಲ್ಲಿ  ಏಕಲವ್ಯ ಪ್ರಶಸ್ತಿ  ಪ್ರದಾನ ಕಾರ್ಯಕ್ರಮವು ನಡೆಯಲಿದೆ. ಅಕ್ಟೋಬರ್ 1ರಂದು ಜೆ.ಕೆ.ಗ್ರೌಂಡ್ ಮೈದಾನದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ನಡೆಯಲಿದೆ. ಚಲನಚಿತ್ರ ಉಪ ಸಮಿತಿ ವತಿಯಿಂದ 30ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ ಎಂದರು.

ಈ ಸಂದರ್ಭ ಮೇಯರ್ ಬಿ.ಎಲ್.ಭೈರಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ.ಚನ್ನಣ್ಣನವರ್, ಜಿಲ್ಲಾಧಿಕಾರಿ ರಣದೀಪ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: